More

  ಭಾನುವಾರ ‘ನಾರಿಶಕ್ತಿ ಸಂಗಮ’ ಮಹಿಳಾ ಸಮ್ಮೇಳನ 

  ದಾವಣಗೆರೆ: ಮಹಿಳಾ ಸಮನ್ವಯ ಕರ್ನಾಟಕ ಪ್ರಾಂತ, ಶಿವಮೊಗ್ಗ ವಿಭಾಗ ಹಾಗೂ ಸೇವಾ ಭಾರತಿ ಟ್ರಸ್ಟ್ ಇವರ ಸಹಯೋಗದಲ್ಲಿ ಡಿ.3 ರಂದು ನಗರದ ಅಭಿನವ ರೇಣುಕ ಮಂದಿರದಲ್ಲಿ ‘ನಾರಿ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ.
  ಮಹಿಳಾ ಜಾಗೃತಿ ಸಂಬಂಧ ಆಯೋಜಿಸಿರುವ ಸಮ್ಮೇಳನದಲ್ಲಿ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷಾ, ಗ್ರಾಮೀಣ, ಕೃಷಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ಸುಮಾರು 1500 ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಹಿಳಾ ಸಮನ್ವಯ ಶಿವಮೊಗ್ಗ ವಿಭಾಗದ ಸಂಚಾಲಕಿ ವೀಣಾ ಸತೀಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಅಂದು ಬೆಳಗ್ಗೆ 7.30 ಕ್ಕೆ ಶೋಭಾಯಾತ್ರೆ ನಡೆಯಲಿದೆ. 9-15ಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ ಮಾಡಿದ ವೀರ ಮಹಿಳೆಯರು ಹಾಗೂ ಸ್ವಾತಂತ್ರ್ಯಾನಂತರದ ಮಹಿಳಾ ಸಾಧಕರ ಚಿತ್ರ ಪ್ರದರ್ಶನ ನಡೆಯಲಿದೆ. ಬಡಾವಣೆ ಠಾಣೆ ಪಿಎಸ್‌ಐ ಎಂ.ಆರ್.ಚೌಬೆ ಹಾಗೂ ಹಿರಿಯ ಸಂಗೀತ ಶಿಕ್ಷಕಿ ವಿದುಷಿ ವಿಜಯಾ ವೆಂಕಣ್ಣ ಜೋಷಿ ಉದ್ಘಾಟಿಸುವರು. ಬೆಳಗ್ಗೆ 10 ಗಂಟೆಗೆ ಸಮ್ಮೇಳನ ನಡೆಯಲಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಉದ್ಘಾಟಿಸುವರು ಎಂದರು.
  ಹಿರಿಯ ಪ್ರಸೂತಿ ತಜ್ಞೆ ಡಾ.ಶಾಂತಾಭಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಜಿ.ಎಸ್.ಉಮಾಪತಿ ಪಾಲ್ಗೊಳ್ಳುವರು. ಭಾರತದ ಚಿಂತನೆಯಲ್ಲಿ ಮಹಿಳೆ ವಿಷಯ ಕುರಿತು ಬರಹಗಾರ್ತಿ ವಿಜಯಲಕ್ಷ್ಮೀ ಬಾಳೆಕುಂದ್ರಿ ಮಾತನಾಡುವರು.
  ಅಂದು ಮಧ್ಯಾಹ್ನ 2.15 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ರಾಷ್ಟ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತ ಸಹ ಬೌದ್ಧಿಕ ಪ್ರಮುಖರಾದ ಮೀನಾಕ್ಷಿ ಉಪನ್ಯಾಸ ನೀಡಲಿದ್ದು ಉಪನ್ಯಾಸಕಿ ಸುಮತಿ ಜಯಪ್ಪ ಭಾಗವಹಿಸುವರು.
  ಸಮ್ಮೇಳನದ ಸಂಚಾಲಕಿ ಸುಧಾ ಜಯರುದ್ರೇಶ್ ಮಾತನಾಡಿ, ಸಮ್ಮೇಳನದ ಹಿನ್ನೆಲೆಯಲ್ಲಿ ಡಿ.1ರ ಇಂದು ಸಂಜೆ 5 ಗಂಟೆಗೆ ದುರ್ಗಾಂಬಿಕಾ ದೇವಸ್ಥಾನದಿಂದ ಎಚ್‌ಕೆಆರ್ ವೃತ್ತ, ನಿಟುವಳ್ಳಿ ಮುಖ್ಯರಸ್ತೆ, ಶಿವಪ್ಪಯ್ಯ ವೃತ್ತ, ತ್ರಿಶೂಲ್ ಚಿತ್ರಮಂದಿರ ರಸ್ತೆ, ಬಂಬೂ ಬಜಾರ್, ಹಳೇ ಬೇತೂರು ರಸ್ತೆ, ಹಾಸಭಾವಿ ವೃತ್ತದ ಮೂಲಕ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದವರೆಗೆ ಬೈಕ್‌ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಜಯಲಕ್ಷ್ಮೀ ಶಶಿಕುಮಾರ್, ಶೋಭಾ ಕೊಟ್ರೇಶ್, ಬಿ.ಎಸ್.ಉಮಾಪತಿ, ಅನಿತಾ ಪಟ್ಟಣಶೆಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts