ಮೈಸೂರು: ಕ್ಷಣಮಾತ್ರದ ತಪ್ಪಿನಿಂದ ಕಾರಾಗೃಹಕ್ಕೆ ಅಪರಾಧಿಗಳು ಬರುತ್ತಾರೆ. ಆದರೆ, ಇಲ್ಲಿ ಬಂದ ನಂತರ ಭವಿಷ್ಯದ ಬದುಕಿಗೆ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಜೈಲಿನ ಬಂಧಿಗಳಿಗೆ ಕಾನೂನು ನೆರವು ಅಭಿರಕ್ಷೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಬೇಕು. ಅದಕ್ಕೆ ಕಾನೂನಿನ ಅರಿವು ಬಹಳ ಮುಖ್ಯ. ಕಾನೂನು ಅರಿವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೀಡುತ್ತಿದ್ದು, ಅದನ್ನು ತಿಳಿದು ಒಳ್ಳೆಯ ಬದುಕು, ಉತ್ತಮ ಸಮಾಜ ನಿರ್ಮಾಣ ಮಾಡಲು ಸಲಹೆ ನೀಡಿದರು. ಪಶ್ಚಾತ್ತಾಪಕ್ಕಿಂತ ಪ್ರಾಯಶ್ಚಿತ್ತ ಮತ್ತೊಂದಿಲ್ಲ. ಮನ ಪರಿವರ್ತನೆ ಹೊಂದಿ, ಒಳ್ಳೆಯ ಬದುಕು ಕಟ್ಟಿಕೊಳ್ಳುವಂತೆ ಕೈದಿಗಳಿಗೆ ಸೂಚಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ ಭೂತೆ ಮಾತನಾಡಿ, ಕಾನೂನಿನ ಅರಿವು ಮತ್ತು ನೆರವು ಎಲ್ಲರಿಗೂ ಸರಿಯಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಕ್ರಮ ಕೈಗೊಂಡಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ, ಪ್ರಧಾನ ಕಾನೂನು ನೆರವು ಅಭಿರಕ್ಷಕ ಎಂ.ಎ.ನವೀನ್, ಉಪ ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಕೆ.ವಿ.ಆನಂದ್, ಜ್ಯೋತಿ, ಸಹಾಯಕ ಕಾನೂನು ನೆರವು ಅಭಿರಕ್ಷಕಿ ಅಂಜಲಿ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ವಿಜಯ್ ಎಸ್. ರೋಡಕರ್ ಉಪಸ್ಥಿತರಿದ್ದರು.