ಭರತನಾಟ್ಯದಿಂದ ಆರೋಗ್ಯ ವೃದ್ಧಿ

ರಾಮನಗರ: ಭಾರತೀಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಭರತನಾಟ್ಯ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕೆಂದು ಸಂಗೀತ ವಿದ್ವಾನ್ ಶಿವಾಜಿರಾವ್ ಹೇಳಿದರು.

ನಗರದ ಶ್ರೀರಾಮ ದೇವಾಲಯದ ಸೀತಾರಾಮ ಭಜನಾ ಮಂದಿರದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್​ನಿಂದ ಶನಿವಾರ ಸಂಜೆ ಆಯೋಜಿಸಿದ್ದ ಶಾಸ್ತ್ರೀಯ ಭರತನಾಟ್ಯ, ಗೀತ ಗಾಯನ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭರತನಾಟ್ಯ ಸಂಸ್ಕೃತಿಯನ್ನು ರಾಜ್ಯದ ದಕ್ಷಿಣಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಕಾಣುತ್ತೇವೆ. ಈ ಕಲೆಯ ಶ್ರೀಮಂತಿಕೆ ಎಲ್ಲರನ್ನೂ ಮಂತ್ರಮುಗ್ದಗೊಳಿಸುತ್ತದೆ. ಭರತನಾಟ್ಯದಿಂದ ಮಕ್ಕಳಲ್ಲಿ ಆರೋಗ್ಯವೃದ್ಧಿಯಾಗುತ್ತದೆ. ಇಂಥ ಶ್ರೀಮಂತ ಕಲೆಯನ್ನು ಫೋಷಿಸುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಚಿಕ್ಕ ಮಕ್ಕಳಿಗೆ ಕಲೆ, ಸಾಹಿತ್ಯಕ್ಕೆ ತಳಪಾಯವಾದ ಸಂಗೀತ ಹಾಗೂ ನೃತ್ಯ ಕಲೆಯಲ್ಲಿ ಆಸಕ್ತಿ ಮೂಡಿಸಬೇಕು. ಈ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪೋಷಿಸುವ ಕಾರ್ಯವಾಗಬೇಕು ಎಂದರು.

ಶಾಂತಲಾ ಚಾರಿಟಬಲ್ ಟ್ರಸ್ಟ್​ನ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿ, ಕಲೆ ಮಾನವನನ್ನು ದೈವತ್ವದ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಮಕ್ಕಳನ್ನು ಕಲೆಯತ್ತ ಆಕರ್ಷಿಸುವ ಕಾರ್ಯವಾದರೆ, ಅವರಲ್ಲಿ ಏಕಾಗ್ರತೆ ಮೂಡಿ ಕಲೆಯಲ್ಲಿ ಬಲಿಷ್ಠರಾಗಲು ಸಾಧ್ಯ. ಮಕ್ಕಳ ಮನಸ್ಥಿತಿ ಅರಿಯಲು ಕಲೆ ಬಹುಮುಖ್ಯ ಪಾತ್ರ ವಹಿಸುತ್ತದೆ. ನೃತ್ಯ, ಸಂಗೀತ, ನಾಟಕದಂತಹ ಕಲೆಗಳಿಂದ ಪ್ರತಿಯೊಂದು ಮಗುವು ವಿಕಸನ ಹೊಂದಲು ಸಾಧ್ಯ ಎಂದರು.

ಶ್ರೀಕೃಷ್ಣ ಸೇವಾ ಟ್ರಸ್ಟ್​ನ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಮಕ್ಕಳ ಕ್ರೀಯಾಶೀಲತೆ ಶಿಕ್ಷಕರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಹಾಗಾಗಿ ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಯಾಶೀಲರಾಗಿರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಶಿಕ್ಷಕರು ಅವರಿಗೆ ಸಮರ್ಪಕ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಬೇಕು. ಇದಕ್ಕೆ ಪಾಲಕರು ಪ್ರೋತ್ಸಾಹ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀರಾಮ ದೇವಾಲಯದ ಅರ್ಚಕ ನರಸಿಂಹ ಭಟ್, ಶ್ರೀರಾಮೋತ್ಸವ ಸಂಕೀರ್ತನಾ ಸೇವಾ ಟ್ರಸ್ಟ್​ನ ಅಧ್ಯಕ್ಷ ಬಿ.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಐಯ್ಯರ್ ಅವರಿಗೆ ’ಪಟ್ಟಾಭಿರಾಮ ಸೇವಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಶಾಂತಲಾ ಕಲಾ ಕೇಂದ್ರ ವಿದ್ಯಾರ್ಥಿಗಳಿಂದ ನಡೆಸಿದ ಸಾಂಸ್ಕೃಕ ಕಾರ್ಯಕ್ರಮ ಗಮನ ಸೆಳೆಯಿತು.

ಕರ್ನಾಟಕ ಜಾನಪದ ಪರಿಷತ್​ನ ಜಿಲ್ಲಾ ಘಟಕದ ಕಾರ್ಯದರ್ಶಿ ವಸಂತ್ ಕುಮಾರ್, ನೃತ್ಯ ಕಲಾವಿದೆ ಚಿತ್ರರಾವ್, ಮುಖಂಡರಾದ ಶೇಷಗಿರಿ, ಗಂಗಾಧರಯ್ಯ, ಬಿ.ಟಿ. ರಾಜೇಂದ್ರ, ಜಯಣ್ಣ, ನಾಗೇಂದ್ರರಾವ್, ಟಿ.ಎಸ್. ಸಿದ್ದೇಗೌಡ ಇತರರು ಇದ್ದರು.

Leave a Reply

Your email address will not be published. Required fields are marked *