More

  ಭಯ ಬಿಟ್ಟು ಪರೀಕ್ಷೆ ಬರೆಯಲು ಸಿದ್ಧರಾಗಿ

  ಬಂಕಾಪುರ: ಮಕ್ಕಳ ಸಾಮರ್ಥ್ಯವನ್ನು ಭಯ ಕಡಿಮೆ ಮಾಡುತ್ತದೆ. ಪರೀಕ್ಷೆ ಸಮಯದಲ್ಲಿ ಭಯ ಬಂದರೆ ನೆನಪಿನ ಶಕ್ತಿ ಕಡಿಮೆಯಾಗಿ ರಕ್ತದೊತ್ತಡ ಹೆಚ್ಚಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ ನಿದ್ದೆ ಕಡಿಮೆ ಮಾಡಿದರೆ ಬರೆಯುವ ಸಾಮರ್ಥ್ಯ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಭಯ ದೂರ ಮಾಡಬೇಕು ಎಂದು ಎಂಆರ್​ಎಂ ಕಾಲೇಜ್​ನ ಪ್ರಾಚಾರ್ಯ ಎಂ. ರಾಮಮೋಹನರಾವ್ ಹೇಳಿದರು.

  ವಿಜಯವಾಣಿ, ಲಯನ್ಸ್ ಕ್ಲಬ್, ಎಂಆರ್​ಎಂ ಕಾಲೇಜ್ ಸವತಿಯಿಂದ ಪಟ್ಟಣದ ದಿ. ಲಯನ್ಸ್ ನವಭಾರತ ವಿದ್ಯಾಸಂಸ್ಥೆಯಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

  ಪರೀಕ್ಷೆಯ ಮುನ್ನಾ ದಿನ ರಾತ್ರಿ 10ರವರೆಗೆ ಮಾತ್ರ ಓದಬೇಕು. ಬೆಳಗಿನ ಜಾವ 4 ರಿಂದ 7.30ರ ವರೆಗೆ ಓದಬೇಕು. ಗಾಳಿ ಬೆಳಕು ಬರುವ ಜಾಗದಲ್ಲಿ ಕುಳಿತು ಓದಬೇಕು. ಓದುವುದು ಬೇಸರವಾದರೆ ಬರೆಯಬೇಕು, ಬರೆಯುವುದು ಬೇಸರವಾದರೆ ಓದಬೇಕು. ಪರೀಕ್ಷಾ ಸಮಯದಲ್ಲಿ ಆರೋಗ್ಯವಂತರು ನಿತ್ಯ 6 ಗಂಟೆ ನಿದ್ದೆ ಮಾಡಬೇಕು. ಅತಿ ಸುಲಭವಾಗಿ ಜೀರ್ಣವಾಗುವ ಇಡ್ಲಿ, ಹಣ್ಣು ತಿನ್ನಬೇಕು. ಪರೀಕ್ಷೆಗಳು ಹೆಚ್ಚಾಗಿ ಬೇಸಿಗೆ ಸಮಯದಲ್ಲಿರುವುದರಿಂದ ನಿತ್ಯ 10 ಲೋಟ ನೀರು ಕುಡಿಯಬೇಕು. ಪರೀಕ್ಷೆಗೆ ಹೋಗುವಾಗ ಕಾಟನ್ ಬಟ್ಟೆ ಧರಿಸುವುದು ಉತ್ತಮ ಎಂದರು.

  ಪರೀಕ್ಷಾ ದಿನಕ್ಕೂ ಒಂದು ದಿನ ಮೊದಲೇ ಪೆನ್ನು, ಪ್ರವೇಶ ಪತ್ರ ಸೇರಿ ಎಲ್ಲ ಬಗೆಯ ವಸ್ತುಗಳನ್ನು ಸಿದ್ಧಪಡಿಸಿಟ್ಟಿರಬೇಕು. ಕನಿಷ್ಠ 15 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿಯಲ್ಲಿರಬೇಕು. ಪರೀಕ್ಷಾ ಅವಧಿ ಮುಗಿಯುವವರೆಗೂ ಕೊಠಡಿಯಲ್ಲಿರಬೇಕು. ಪರೀಕ್ಷಾ ಸಮಯದಲ್ಲಿ ತಲೆ ಓಡಲ್ಲ ಎನ್ನುವುದಾದರೆ ಎಡಗೈ ಗಟ್ಟಿಯಾಗಿ ಹಿಡಿದು ಜೋರಾಗಿ ಉಸಿರಾಡಬೇಕು. ಆಗ ಓದಿದ್ದು ನೆನಪಿಗೆ ಬರುತ್ತದೆ ಎಂದರು.

  ಪಟ್ಟಣದ ಲಯನ್ಸ್ ಪ್ರೌಢಶಾಲೆ, ದಿ.ಮಾಡರ್ನ್ ಇಂಗ್ಲಿಷ್ ಹೈಸ್ಕೂಲ್, ಕೀರ್ತಿ ಪ್ರೌಢಶಾಲೆ, ಲಿಟಲ್ ಪ್ಲಾವರ್ ಹೈಸ್ಕೂಲ್, ಸರ್ಕಾರಿ ಪ್ರೌಢಶಾಲೆಗಳ 200ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಡಾ. ಕೆ.ಎಂ. ಬಮ್ಮನಹಳ್ಳಿ, ಜಿ.ಎಸ್. ಸಜ್ಜನಗೌಡ್ರ, ಆರ್.ಎಸ್. ಕೊಲ್ಲಾವರ, ಎಸ್.ಬಿ. ಆದವಾನಿಮಠ, ಎಸ್.ಬಿ. ಉಂಕಿ, ಆರ್. ಹೊನಕೊಪ್ಪಿ, ರೇಣುಕಾ ಪೂಜಾರ, ಇದ್ದರು. ಮುಖ್ಯ ಶಿಕ್ಷಕಿ ಗಂಗಮ್ಮ ದೇಸಾಯಿ, ಶಿಕ್ಷಕ ಎಂ.ಬಿ. ರಾಯಾಪುರ ಕಾರ್ಯಕ್ರಮ ನಿರ್ವಹಿಸಿದರು.

  ಕಳೆದ ಬಾರಿಯ ಕಾರ್ಯಾಗಾರದಿಂದ ನಮ್ಮ ಶಾಲೆಯ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ವಿಜಯವಾಣಿ ಪತ್ರಿಕೆ ಇಂತಹ ಕಾರ್ಯಕ್ರಮಗಳನ್ನು ಜಿಲ್ಲಾದ್ಯಂತ ಆಯೋಜಿಸಿ ವಿದ್ಯಾರ್ಥಿಗಳ ಪರೀಕ್ಷೆ ಭಯ ಹೋಗಲಾಡಿಸಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸುತ್ತಿರುವುದು ಶ್ಲಾಘನೀಯ. | ಡಾ. ಆರ್.ಎಸ್. ಅರಳೆಲೆಮಠ ಲಯನ್ಸ್ ಕ್ಲಬ್ ಅಧ್ಯಕ್ಷ, ಬಂಕಾಪುರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts