ಭದ್ರಾ ನೀರು ಹರಿಸಲು ಪ್ರಸ್ತಾವನೆ

ಹಾವೇರಿ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವ ಮುನ್ನ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ನೀರು ಹರಿಸುವಂತೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಖಾಸಗಿ ಕೊಳವೆ ಬಾವಿ ಗುರುತಿಸಿ, ಅವುಗಳಿಂದ ಜನರಿಗೆ ನೀರಿನ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಳ್ಳದಂತೆ ಕ್ರಮವಹಿಸಬೇಕು. ಕೆಲವೆಡೆ ವಿದ್ಯುತ್ ಬಾಕಿ ಕಾರಣ ಶುದ್ಧ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಮಾಹಿತಿಯಿದೆ. ಅದನ್ನು ಪರಿಶೀಲಿಸಿ ಮರು ಆರಂಭ ಮಾಡಿಸಬೇಕು. ಜಾನುವಾ ರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಇಡಬೇಕು ಎಂದು ಸೂಚಿಸಿದರು.

ಇಲಾಖೆ ಅನುದಾನದೊಂದಿಗೆ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಬಳಸಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆಗಳ ಪುನಶ್ಚೇತನ, ಲೋಕೋಪಯೋಗಿ ಇಲಾಖೆ ಹಾಗೂ ಜಿಪಂ ಇಂಜಿನಿಯರಿಂಗ್ ಇಲಾಖೆಯಿಂದ ರಸ್ತೆಗಳ ತಗ್ಗುಗಳನ್ನು ತುಂಬುವುದು ಹಾಗೂ ರಸ್ತೆ ಬದಿಯ ಜಂಗಲ್ ತೆರವುಗೊಳಿಸಲು ತ್ವರಿತ ಕ್ರಮಕೈಗೊಳ್ಳಬೇಕು. ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ತೆರವುಗೊಳಿಸಬೇಕು. ನೀರಾವರಿ ಕಾಲುವೆ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ತುಂಗಾ ಮೇಲ್ದಂಡೆ ಯೋಜನೆ ಇಂಜಿನಿಯರ್​ಗೆ ಸೂಚಿಸಿದರು. ಮಿಷನ್ ಅಂತ್ಯೋದಯ ಯೋಜನೆಯಡಿ ಮಂಜೂರಾದ ಹೊಸ ಪಶು ವೈದ್ಯಕೀಯ ಸಂಸ್ಥೆಗಳನ್ನು ತ್ವರಿತವಾಗಿ ಆರಂಭಿಸಬೇಕು. ಬೇಸಿಗೆಯಲ್ಲಿ ಕಾಡುವ ಜಾನುವಾರುಗಳ ರೋಗ ತಡೆಗೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಪಂ ಸಿಇಒ ಕೆ. ಲೀಲಾವತಿ, ಪ್ರಭಾರ ಉಪ ಕಾರ್ಯದರ್ಶಿ ಮಂಜುನಾಥ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಾರುತಿ ರಾಠೋಡ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ನೀಲಮ್ಮ ಚವ್ಹಾಣ ಹಾಗೂ ಜಿಪಂ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ರೈತರಿಗೆ ಮಾಹಿತಿ ನೀಡಿ

ಕೃಷಿ ಇಲಾಖೆಯಿಂದ ಗುಣಮಟ್ಟದ ತಾಡಪತ್ರೆಗಳನ್ನು ಪೂರೈಸಬೇಕು. ಹಿರೇಕೆರೂರು ಭಾಗದಲ್ಲಿ ಬಾಳೆ ಗಿಡಕ್ಕೆ ಬೂಸ್ಟ್ ಮಾದರಿಯ ರೋಗ ಅಂಟಿಕೊಂಡಿದೆ. ತಜ್ಞರನ್ನು ಸ್ಥಳಕ್ಕೆ ಭೇಟಿ ಮಾಡಿಸಿ ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಅನುಸರಿಸುವ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಜಿಪಂ ಅಧ್ಯಕ್ಷರು ಸೂಚಿಸಿದರು.</

Leave a Reply

Your email address will not be published. Required fields are marked *