ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ತಿರು ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಮರುಗೇಶ್ ಸ್ವಾಮಿ ನೇತೃತ್ವದಲ್ಲಿ ಬೆಳಗಿನಜಾವ 4ಕ್ಕೆ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿಯ ವಿಶ್ವರೂಪ ದರ್ಶನವಾಯಿತು. 5ಗಂಟೆಗೆ ಉತ್ಸವ ಪೂಜೆ, 8ಕ್ಕೆ ಸಂಧಿಪೂಜೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಜರುಗಿತು. ಮಧ್ಯಾಹ್ನ 12 ಗಂಟೆಗೆ ದೇವರಿಗೆ ನೈವೇದ್ಯ ಅರ್ಪಣೆ ಬಳಿಕ ಮಧ್ಯಾಹ್ನದ ಪೂಜೆ ನೆರವೇರಿತು. ಮಧ್ಯಾಹ್ನ 3 ಗಂಟೆಗೆ ಮಕ್ಕಳ ಕೈಯಲ್ಲಿ ಎತ್ತಿಸಿದ ಲಾಟರಿಯಲ್ಲಿ ಆಯ್ಕೆಯಾದ ಭದ್ರಾವತಿ ಮೂಲದ ಮಮತಾ ಎಂಬ 12 ವರ್ಷದ ಕನ್ಯೆ ಹಾಗೂ ಭದ್ರಾವತಿ ಜೇಡಿಕಟ್ಟೆಯ ದಿವಾಕರನ್ ಎಂಬ ಬಾಲಕ ಸ್ನಾನ ಮುಗಿಸಿದ ಬಳಿಕ ಮಡಿಯುಟ್ಟು ತಿರು ಕಾರ್ತಿಕ ದೀಪೋತ್ಸವದ ಪೂಜಾ ಕೈಂಕರ್ಯ ನೆರವೇರಿಸಿ ವಾದ್ಯಗಳೊಂದಿಗೆ ದೇಗುಲ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮೆರವಣಿಗೆಯಲ್ಲಿ ಸಾಗಿದರು.
ಕನ್ಯೆ ಮೇಲೆ ಹೊತ್ತ ಕಳಸದಲ್ಲಿ ತುಂಬಿಸಿದ್ದ ತುಪ್ಪ ಮತ್ತು ಬಾಲಕನ ಕೈಯಲ್ಲಿ ಹೊತ್ತಿ ಉರಿಯುತ್ತಿದ್ದ ದೀಪದ ಜ್ವಾಲೆಯಿಂದಲೇ ಸಂಜೆ ತಿರು ಕಾರ್ತಿಕ ದೀಪೋತ್ಸವದ ಪ್ರಕ್ರಿಯೆ ಆರಂಭವಾಯಿತು. ಸಕಲ ಪೂಜಾ ಕೈಂಕರ್ಯಗಳ ಬಳಿಕ ಸಂಜೆ 6.5ಕ್ಕೆ ತಿರು ಕಾರ್ತಿಕ ದೀಪ ಬೆಳಗಿಸಲಾಯಿತು. ಹರ್ಷೋದ್ಘಾರದ ನಡುವೆ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಜ್ಯೋತಿ ದರ್ಶನ ಪಡೆದು ಭಾವ ಪರವಶವಾದರು.
ಲಕ್ಕವಳ್ಳಿ, ಬಳ್ಳಾವರ, ಕೃಷ್ಣಾಪುರ, ಲಿಂಗದಹಳ್ಳಿ, ಎಂ.ಸಿ.ಹಳ್ಳಿ, ದಾವಣಗೆರೆ, ಚಿಕ್ಕಮಗಳೂರು, ಭದ್ರಾವತಿ, ಶಿವಮೊಗ್ಗ, ತಮಿಳುನಾಡು, ಸೇಲಂ, ಕೊಯಮತ್ತೂರು, ಮಧುರೈ, ಈರೋಡು, ಕುಮಾರ ಪಾಳ್ಯಂ, ಮಾರಿಷಸ್ ಇತರ ಕಡೆಯಿಂದ ಆಗಮಿಸಿದ್ದ ಭಕ್ತರು ಜ್ಯೋತಿ ಮತ್ತು ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು. ಸಂಜೆ 6.30ರಿಂದ ಶಿವಮೊಗ್ಗ ನಟನಂ ಬಾಲನಾಟ್ಯ ಕೇಂದ್ರದಿಂದ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇಗುಲದ ಆಡಳಿತಾಧಿಕಾರಿ ಎ.ಚಂದ್ರಘೋಷನ್, ಸೇವಾ ಸಮಿತಿ ಅಧ್ಯಕ್ಷ ಬೊಮ್ಮರಾಜ್, ಪದಾಧಿಕಾರಿಗಳಾದ ಸೋಮು, ತಿರುಮೂರ್ತಿ, ಡಾ. ವಿಕ್ರಂ ಇತರರಿದ್ದರು.