ಭತ್ತ ಬೆಳೆದ ರೈತ ಕಂಗಾಲು!

ರಾಣೆಬೆನ್ನೂರ: ಬರದ ನಡುವೆಯೂ ಜಿಲ್ಲೆಯಲ್ಲಿ ಭತ್ತದ ಬೆಳೆ ಉತ್ತಮವಾಗಿ ಬಂದಿದೆ. ಆದರೆ, ದರ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು, ಕೈ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಮೊದಲೇ ಜಿಲ್ಲೆಯಲ್ಲಿ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದು, ಇದರ ನಡುವೆಯೇ ರಾಣೆಬೆನ್ನೂರ, ಹಿರೇಕೆರೂರ, ಹಾನಗಲ್ಲ, ಗುತ್ತಲ ಸೇರಿ ತುಂಗಭದ್ರಾ ನದಿಪಾತ್ರದ ನೂರಾರು ಗ್ರಾಮಗಳ ರೈತರು ಹರಸಾಹಸ ಪಟ್ಟು ಭತ್ತ ಬೆಳೆದಿದ್ದಾರೆ. ಆದರೀಗ ಬೆಲೆ ಇಳಿಕೆಯಿಂದಾಗಿ ಭತ್ತ ಬೆಳೆದವರ ಸ್ಥಿತಿ ಬೆಳೆ ಇದ್ದಾಗ ದರವಿಲ್ಲ. ದರವಿದ್ದಾಗ ಬೆಳೆ ಇಲ್ಲ ಎನ್ನುವಂತಾಗಿದೆ.

ಇಳಿದ ಭತ್ತದ ಬೆಲೆ…

ಸಾಮಾನ್ಯ ದಪ್ಪ ಭತ್ತ 75 ಕೆ.ಜಿ.ಗೆ ಕೇವಲ 1350 ರೂ.ನಿಂದ 1400 ರೂ.ವರೆಗೆ ಹಾಗೂ ಶ್ರೀರಾಮ ಸೋನಾ 1500 ರೂ.ಯಿಂದ 1600 ರೂ. ಇದೆ. 1 ಎಕರೆ ಭತ್ತ ಬೆಳೆಯಲು ಗೊಬ್ಬರ, ಔಷಧ, ಕೃಷಿ ಕಾರ್ವಿುಕರ ಕೂಲಿ ಸೇರಿ 30 ಸಾವಿರ ರೂ.ವರೆಗೂ ಖರ್ಚಾಗುತ್ತದೆ. ಆದರೆ, ಭತ್ತವನ್ನು ಇಷ್ಟೊಂದು ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಬೆಳೆಗೆ ಮಾಡಿದ ವೆಚ್ಚವೂ ವಾಪಸ್ ಬರುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಳೆದ ವರ್ಷ ಉತ್ತಮ…

ಕಳೆದ ವರ್ಷ ಇದೇ ಸಮಯದಲ್ಲಿ ರೈತರು ದಪ್ಪ ಭತ್ತವನ್ನು 75 ಕೆ.ಜಿ.ಗೆ 1600 ರೂ.ಯಿಂದ 1800 ರೂ.ವರೆಗೂ ಹಾಗೂ ಶ್ರೀರಾಮಸೋನಾ ಭತ್ತವನ್ನು 1900 ರೂ.ಯಿಂದ 2300 ರೂ.ವರೆಗೂ ಮಾರಾಟ ಮಾಡಿದ್ದಾರೆ. ಹೋದ ವರ್ಷದಷ್ಟು ಬೆಲೆ ಈ ವರ್ಷ ಇದ್ದರೂ ಅನ್ನದಾತರು ಖುಷಿ ಪಡುತ್ತಿದ್ದರು. ಭತ್ತದ ನಾಟಿಗಾಗಿ ಸಾಲ ಮಾಡಿ ಬೆಳೆ ಬಂದ ಮೇಲೆ ಹಣ ಕೊಟ್ಟರಾಯಿತು ಅಂದುಕೊಂಡು ಕೆಲವರು ಕೈ ಸಾಲ ಮಾಡಿಕೊಂಡಿದ್ದಾರೆ. ಆದರೀಗ ಕೈ ಸಾಲವನ್ನೂ ತೀರಿಸಲಾಗದಂಥ ಪರಿಸ್ಥಿತಿ ನಿರ್ವಣವಾಗಿದೆ.

ಸಾಲಗಾರರ ಕಿರುಕುಳ ತಾಳದೆ ಕೆಲ ರೈತರು ಕಡಿಮೆ ಬೆಲೆಗೆ ಭತ್ತ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸುತ್ತಿದ್ದಾರೆ.

ಭತ್ತದ ಬೆಲೆ ತುಂಬ ಕಡಿಮೆಯಿದೆ. ಈಗ ಮಾರಾಟ ಮಾಡಿದರೆ ನಾವು ಮಾಡಿದ ಖರ್ಚು ಸಹ ವಾಪಸ್ ಬರದಂತಹ ಸ್ಥಿತಿ ನಿರ್ವಣವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಸೂಕ್ತ ಕ್ರಮ ಕೈಗೊಂಡು ಭತ್ತದ ಖರೀದಿ ಬೆಲೆ ಹೆಚ್ಚಳ ಮಾಡಲು ಮುಂದಾಗಬೇಕು.

| ಮಂಜು ಜ್ಯೋತಿ, ಭತ್ತದ ಬೆಳೆಗಾರ ಉದಗಟ್ಟಿ ಗ್ರಾಮ

ಬೆಲೆ ಕಡಿಮೆ ಇದ್ದಾಗ ಭತ್ತ ಸಂರಕ್ಷಣೆ ಮಾಡಿಟ್ಟುಕೊಳ್ಳಲು ತಾಲೂಕಿನಲ್ಲಿ ಯಾವುದೇ ಸಂಸ್ಕರಣ ಘಟಕವಿಲ್ಲ. ಆದ್ದರಿಂದ ರೈತರು ಅನಿವಾರ್ಯವಾಗಿ ಬೆಲೆಯಿಲ್ಲದಿದ್ದರೂ ದೂರದ ದಾವಣಗೆರೆ, ತುಮಕೂರಿಗೆ ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದು ರೈತರಿಗೆ ಖರ್ಚಿನ ಮತ್ತೊಂದು ಹೊರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯವಾಗಿ ಭತ್ತ ಸಂಸ್ಕರಣ ಘಟಕ ಹಾಗೂ ಮಾರುಕಟ್ಟೆ ಸ್ಥಾಪಿಸಬೇಕು.

| ಬಸವರಾಜ ಹುಲ್ಲತ್ತಿ, ಎಪಿಎಂಸಿ ಸದಸ್ಯ ಮೇಡ್ಲೇರಿ

Leave a Reply

Your email address will not be published. Required fields are marked *