ಭತ್ತದ ಹುಲ್ಲಿಗೂ ಭರ್ಜರಿ ಬೇಡಿಕೆ

ರಾಣೆಬೆನ್ನೂರ: ತಾಲೂಕಿನಲ್ಲಿ ಭತ್ತದ ಹುಲ್ಲಿಗೆ ಭಾರಿ ಬೇಡಿಕೆ ಬಂದಿದ್ದು, ಪಕ್ಕದ ಜಿಲ್ಲೆಗಳ ರೈತರು ಹುಲ್ಲನ್ನು ತಂದು ಮಾರಾಟ ಮಾಡುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನಲ್ಲಿ ಬರದ ಛಾಯೆ ಆವರಿಸಿದೆ. ಈ ಬಾರಿಯೂ ಮುಂಗಾರು ಮತ್ತು ಹಿಂಗಾರು ಮಳೆ ಸಮರ್ಪಕವಾಗಿ ಬಂದಿಲ್ಲ. ಇನ್ನೇನು ಬೇಸಿಗೆ ಸಮೀಪಿಸುತ್ತಿದ್ದು, ಜಾನುವಾರುಗಳಿಗೆ ಎದುರಾಗಲಿರುವ ಮೇವಿನ ಕೊರತೆ ನೀಗಿಸಲು ರೈತರು ಮುಂದಾಗಿದ್ದಾರೆ.
ತುಂಗಭದ್ರಾ ನದಿ ಪಾತ್ರಗಳಾದ ಐರಣಿ, ಹಿರೇಬಿದರಿ, ನಾಗೇನಹಳ್ಳಿ, ಮುದೇನೂರ, ಬೇಲೂರ, ಅಂಕಸಾಪುರ, ಚೌಡದಾನಪುರ, ಚಿಕ್ಕಕುರುವತ್ತಿ ಸೇರಿ ಹಲವು ಗ್ರಾಮಗಳಲ್ಲಿ ಸುಮಾರು 6508 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. ಇತ್ತೀಚೆಗೆ ಅಕಾಲಿಕ ಮಳೆ ಮತ್ತು ಅನಾವೃಷ್ಠಿಯಿಂದ ಬೆಳೆ ಕೈಕೊಟ್ಟಿದೆ. ಅಳಿದುಳಿದ ಭತ್ತದ ಹುಲ್ಲನ್ನು ರೈತರು ಜಾನುವಾರುಗಳ ಮೇವಿಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ತಾಲೂಕಿನಲ್ಲಿ ಅತಿ ಹೆಚ್ಚು ಗೋವಿನ ಜೋಳ ಬೆಳೆಯಲಾಗುತ್ತದೆ. ಈ ಬಾರಿ 40,839 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬೆಳೆಯಲಾಗಿದ್ದು, ಗೋವಿನ ಜೋಳದ ದಂಟನ್ನು ಜಾನುವಾರುಗಳಿಗೆ ಕೇವಲ ಮೂರು ತಿಂಗಳಿಗೆ ಮಾತ್ರ ಪೂರೈಸಬಹುದು. ಭತ್ತದ ಹುಲ್ಲನ್ನು ವರ್ಷದ ವರೆಗೂ ಕಾಯ್ದಿಟ್ಟುಕೊಳ್ಳಬಹುದು. ಇದರಿಂದ ಸಹಜವಾಗಿಯೇ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚುತ್ತಿದೆ.
ಜಿಲ್ಲೆಯ ಬಹುತೇಕ ಕಡೆ ಭತ್ತ ಬೆಳೆಯುವುದಿಲ್ಲ. ಈ ನಿಟ್ಟಿನಲ್ಲಿ ಭತ್ತದ ಹುಲ್ಲಿಗೆ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ಹುಲ್ಲು ಸಂಗ್ರಹಿಸುವ ಕಾರ್ಯ ನಡೆಸುತ್ತಿದ್ದಾರೆ. ಜಾನುವಾರುಗಳು ಬೇಸಿಗೆ ಸಂದರ್ಭ ಮೇವಿನ ಸಮಸ್ಯೆ ಎದುರಿಸಬಾರದು ಎಂದು ಎಚ್ಚೆತ್ತುಕೊಂಡಿದ್ದಾರೆ. ಜತೆಗೆ ಯಂತ್ರೋಪಕರಣ ಬಳಸಿ ಕಟಾವು ಮಾಡಿದ ಭತ್ತದ ಹುಲ್ಲು ಮೇವನ್ನಾಗಿ ಬಳಸಲು ಅಸಾಧ್ಯವಾಗಿದೆ. ಆದರೆ, ನೆರೆಯ ಜಿಲ್ಲೆಗಳಲ್ಲಿ ಭತ್ತವನ್ನು ಕೊಯ್ಲು ಮಾಡುವುದರಿಂದ ಉತ್ತಮ ಹುಲ್ಲು ದೊರೆಯುತ್ತದೆ ಎಂಬ ಭರವಸೆ ಇಲ್ಲಿನ ರೈತರದ್ದಾಗಿದೆ.
ನೆರೆಯ ಜಿಲ್ಲೆಯಿಂದ ಆಮದು:ಇಲ್ಲಿನ ಸುತ್ತಮುತ್ತ ನೀರಾವರಿ ಪ್ರದೇಶದಲ್ಲಿ ರೈತರು ಬೆಳೆದ ಭತ್ತದ ಹುಲ್ಲು ಮಾತ್ರವಲ್ಲದೆ, ನೆರೆಯ ಜಿಲ್ಲೆಯ ಶಿಕಾರಿಪುರ, ಸಾಗರ, ಸೊರಬ ಸೇರಿ ವಿವಿಧಡೆಯಿಂದ ಭತ್ತದ ಹುಲ್ಲು ತಾಲೂಕಿಗೆ ಆಗಮಿಸುತ್ತಿದೆ. ಒಂದು ಟ್ರ್ಯಾಕ್ಟರ್ ಭತ್ತದ ಹುಲ್ಲಿಗೆ 10 ಸಾವಿರದಿಂದ 12 ಸಾವಿರ ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಉಳಿದಂತೆ ಒಂದು ಪೆಂಡಿ ಸುರುಳಿ ಸುತ್ತಿದ ಹುಲ್ಲಿಗೆ ಗದ್ದೆಯಲ್ಲಿಯೇ 40 ರೂ. ವರೆಗೆ ಮಾರಾಟ ಮಾಡಲಾಗುತ್ತಿದ್ದು, ಸಾಗಾಣಿಕೆ ವೆಚ್ಚ ಸೇರಿ 50-60 ರೂ. ವರೆಗೆ ಮಾರಾಟವಾಗುತ್ತಿದೆ.
ಮೇವಿನ ಕೊರತೆಯಾಗದಂತೆ ಕ್ರಮ: ಬರ ಪೀಡಿತ ಪ್ರದೇಶವೆಂದು ಘೊಷಣೆಯಾದ ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಮೇವಿನ ತೊಂದರೆಯಾಗದಂತೆ ಹೋಬಳಿಗೆ ಒಂದರಂತೆ 3 ಮೇವು ಬ್ಯಾಂಕ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ಹೋಬಳಿಗಳಲ್ಲಿ ಸುಮಾರು 1.83 ಲಕ್ಷ ಜಾನುವಾರುಗಳಿಗೆ ನ್ಯೂಟ್ರೇಶನ್, ಮೇವಿನ ಕಿಟ್, ಗ್ರಾಪಂ ವಾರು ಜಾನುವಾರುಗಳ ತಪಾಸಣೆಗೆಂದು 1.35 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ತಾಲೂಕಿನಲ್ಲಿ ಮೇವಿನ ಕೊರತೆ ಎದುರಾಗದಂತೆ ತಾಲೂಕು ಆಡಳಿತ ಕ್ರಮ ವಹಿಸಿದೆ.
“ತಾಲೂಕಿನಲ್ಲಿ ಮಳೆಯ ಅಭಾವದಿಂದ ಬೆಳೆ ಕೈಕೊಟ್ಟಿದೆ. ನದಿ ಪಾತ್ರದ ಗ್ರಾಮಗಳ ಜನತೆಗೆ ಭತ್ತದ ಹುಲ್ಲು ದೊರೆಯಬಹುದು. ಉಳಿದಂತೆ ತಾಲೂಕಿನ ಬಹುತೇಕ ಗೋವಿನ ಜೋಳ ಬೆಳೆಯುವ ಮಂದಿ ಜಾನುವಾರಿಗೆ ಮೇವು ಪೂರೈಸಲು ಭತ್ತದ ಹುಲ್ಲಿಗೆ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ಮೇವಿಗಾಗಿ ಪರದಾಡುವ ಬದಲು ಈಗಲೇ ಹುಲ್ಲನ್ನು ಖರೀದಿಸುತ್ತಿದ್ದಾರೆ.”
| ಕರಬಸಪ್ಪ ಅಗಸಿಬಾಗಿಲು, ರೈತ ಮುಖಂಡ.