ಭತ್ತದ ಕೊಯ್ಲು ಮಾಡಿದ ವಿದ್ಯಾರ್ಥಿಗಳು

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹುಲ್ಕುತ್ರಿಯಲ್ಲಿ ತಾವೇ ನಾಟಿ ಮಾಡಿದ ಭತ್ತದ ಗದ್ದೆಯ ಕೊಯ್ಲು ಮಾಡಿ ಸೋಮವಾರ ಸಂಭ್ರಮಿಸಿದರು.

ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕೆನ್ನುವ ಶಿಕ್ಷಣ ಇಲಾಖೆಯ, ಶಿಕ್ಷಕರ, ಎಸ್​ಡಿಎಂಸಿ ಸದಸ್ಯರ ಹಾಗೂ ಪಾಲಕರ ನಿರ್ಣಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಆಗಸ್ಟ್ 27ರಂದು ಸ್ವತಃ ಶಾಲೆಯ ವಿದ್ಯಾರ್ಥಿಗಳು ಜಿಟಿಜಿಟಿ ಮಳೆಯಲ್ಲಿ ಕಂಬಳಿಕೊಪ್ಪೆ, ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಗದ್ದೆ ನಾಟಿ ಮಾಡಿ ಊರಿನವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ 120 ದಿನಗಳ ನಂತರ 4ರಿಂದ 7ನೇ ತರಗತಿಯ 14 ವಿದ್ಯಾರ್ಥಿಗಳು 12 ಗುಂಟೆ ಭತ್ತದ ಕ್ಷೇತ್ರವನ್ನು ಎರಡೂವರೆ ತಾಸಿನಲ್ಲಿ ಕಟಾವು ಮಾಡಿ ತಾವೇನು ಕೃಷಿ ಕೆಲಸದಲ್ಲಿ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಗದ್ದೆಯನ್ನು ನಾಟಿ ಮಾಡಿದಾಗಿನಿಂದ ಕೊಯ್ಲು ಮಾಡುವವರೆಗೂ ವಿದ್ಯಾರ್ಥಿಗಳು ಆಗಾಗ ಗದ್ದೆಗೆ ತೆರಳಿ ಭತ್ತದ ಸಸಿಗಳ ಬೆಳವಣಿಗೆ ಕುರಿತು ಹೆಚ್ಚು ಗಮನ ನೀಡುತ್ತಿದ್ದರು ಎಂದು ಶಿಕ್ಷಕರು ಹಾಗೂ ಪಾಲಕರು ಹೇಳಿದರು.

ವಿದ್ಯಾರ್ಥಿಗಳು ಹಾಡು, ವಿವಿಧ ಕಥೆಗಳನ್ನು ಹೇಳುತ್ತ, ನಾಟಿ ಮಾಡಿದಾಗಿನಿಂದ ಕೊಯ್ಲು ಹಂತಕ್ಕೆ ಬರುವವರೆಗೆ ಗದ್ದೆಗೆ ಭೇಟಿ ನೀಡಿದ ಅನುಭವಗಳನ್ನು ಹಂಚಿಕೊಳ್ಳುತ್ತ, ಹರಟೆ ಹೊಡೆಯುತ್ತ ನಿರಾಯಾಸವಾಗಿ ಕೊಯ್ಲು ಮಾಡುತ್ತಿರುವುದನ್ನು ನೋಡಿದವರು ಗದ್ದೆಯಲ್ಲಿ ಯಾರೋ ಅನುಭವಿ ಕೃಷಿಕರು ಕೆಲಸ ಮಾಡುತ್ತಿದ್ದಾರೋ ಎನ್ನುವಂತೆ ಕಂಡು ಬರುತ್ತಿತ್ತು ಎಂದು ಸ್ಥಳೀಯರು ಹೇಳಿದರು.

ಕತ್ತಿ ಹಿಡಿಯುವ ಮಾಹಿತಿ: ಗದ್ದೆಯ ಮಾಲೀಕ ಕೆರಿಯಾ ಗಣಪ ಗೌಡ ವಿದ್ಯಾರ್ಥಿಗಳಿಗೆ ಭತ್ತದ ಕೊಯ್ಲು ಮಾಡುವಾಗ ಕತ್ತಿಯನ್ನು ಹೇಗೆ ಹಿಡಿದುಕೊಳ್ಳಬೇಕು, ಹೇಗೆ ಮೆದೆ ಹಾಕಬೇಕು ಎನ್ನುವುದನ್ನು ತಿಳಿಸಿಕೊಟ್ಟರು.

ಸೋವಿನಕೊಪ್ಪ ಗ್ರಾಪಂ ಸದಸ್ಯೆ ಸುಶೀಲಾ ವೆಂಕಟೇಶ ಗೌಡ, ಎಸ್​ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಎಂ. ಗೌಡ, ಉಪಾಧ್ಯಕ್ಷೆ ರಾಧಾ ವೆಂಕಟ್ರಮಣ ಗೌಡ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ ಪದ್ಮನಾಭ ಗೌಡ, ವಿಘ್ನೕಶ್ವರ ಕೆರಿಯಾ ಗೌಡ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

ಇದೇ ಮೊದಲು: ವಿದ್ಯಾರ್ಥಿಗಳೇ ಗದ್ದೆ ನಾಟಿ ಮಾಡಿ, ಸಮಯಕ್ಕೆ ಸರಿಯಾಗಿ ಗೊಬ್ಬರ ಹಾಕಿ, ಗದ್ದೆಗೆ ನೀರು ಕಟ್ಟಿ-ಬಿಟ್ಟು,ಕೊಯ್ಲು ಮಾಡಿರುವುದು ಸಿದ್ದಾಪುರ ತಾಲೂಕಿನಲ್ಲಿ ಇದೇ ಮೊದಲಾಗಿದೆ.