ಸಂಡೂರು: ತಾಲೂಕಿನ ಹಳೇ ದರೋಜಿ ಗ್ರಾಮದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಶನಿವಾರ ಸಂಪೂರ್ಣ ನಾಶವಾಗಿದೆ.

ಕಟಾವಿಗೆ ಬಂದಿದ್ದ ಭತ್ತದ ಕಾಳು ನೆಲಕ್ಕುದುರಿದೆ. ಗದ್ದೆ ಹಸಿಯಾಗಿರುವುದರಿಂದ ಕಾಳು ಸಂಗ್ರಹಿಸಲು ಬಾರದಂತಾಗಿದೆ. ಗ್ರಾಮದಲ್ಲಿ ಗಾಳಿ, ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 10ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಗ್ರಾಮದ ಹೊರವಲಯದ ಮಾರೆಮ್ಮ ದೇವಸ್ಥಾನದ ಬಳಿ ಸಿಡಿಲು ಬಡಿದು ಗ್ರಾಮದ ಚೆಲುವಾದಿ ಹಂಪಮ್ಮ ಗಾಯಗೊಂಡಿದ್ದಾರೆ.
ರೈತ ಬಸವರಾಜ್ ಮಾತನಾಡಿ, ನಾನು 4 ಎಕರೆಯಲ್ಲಿ ಭತ್ತ ಬೆಳೆದಿದ್ದೆ, ಆಲಿಕಲ್ಲು ಮಳೆಯಿಂದಾಗಿ ಭತ್ತದ ಕಾಳು ನೆಲಕ್ಕೆ ಉದುರಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದರು. ಕೃಷಿ ಇಲಾಖೆ ಎಡಿ ಮಂಜುನಾಥರೆಡ್ಡಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಂತೋಷ್ ಫಸಲು ಹಾನಿಯಾದ ಜಮೀನುಗಳಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.