ಭಟ್ಕಳದಲ್ಲಿ ಹೊರ ರೋಗಿಗಳಿಗೆ ತಟ್ಟಿದ ಮುಷ್ಕರದ ಬಿಸಿ

ಭಟ್ಕಳ: ತಾಲೂಕಿನಲ್ಲಿ ವೈದ್ಯರ ಮುಷ್ಕರದ ಬಿಸಿ ಹೊರರೋಗಿಗಳಿಗೆ ತಟ್ಟಿದೆ. ಪಟ್ಟಣದಲ್ಲಿ ನೂರಾರು ಸಂಖ್ಯೆಯ ಜನರು ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರತ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಕರೆ ನೀಡಿದ ಮುಷ್ಕರಕ್ಕೆ ಭಟ್ಕಳದಾದ್ಯಂತ ಹೊರ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಆರೋಗ್ಯ ಸೇವೆಗಳು ಸೇರಿ ಹೊರರೋಗಿ ವಿಭಾಗ ಬಂದ್ ಆಗಿದ್ದು, ಗ್ರಾಮೀಣ ಭಾಗದ ರೋಗಿಗಳು ಆಸ್ಪತ್ರೆಯ ಬಾಗಿಲು ನೋಡಿ ಹೋಗುತ್ತಿದ್ದಾರೆ. ತಾಲೂಕಿನಾದ್ಯಂತ ಜ್ವರ, ಶೀತ, ಮೈಕೈ ನೋವು ಸೇರಿ ಭೇದಿಯಂಥ ರೋಗಗಳು ವೈರಲ್ ಆಗಿದ್ದು, ವೈದ್ಯರ ಮುಷ್ಕರದಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಸರ್ಕಾರಿ ಆಸ್ಪತ್ರೆ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಹಲವರು ಚಿಕಿತ್ಸೆಗಾಗಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಇತರ ದಿನಗಳಿಗಿಂತ ಸೋಮವಾರ ರೋಗಿಗಳ ಸಂಖ್ಯೆ ಹೆಚ್ಚಿಗೆ ಇತ್ತು. ರೋಗಿಗಳಿಗೆ ತೊಂದರೆಯಾಗದಂತೆ ಸೇವೆ ನೀಡುವಂತೆ ಆಡಳಿತ ವೈದ್ಯಾಧಿಕಾರಿ ಸವಿತಾ ಕಾಮತ ಸಹೋದ್ಯೋಗಿಗಳಿಗೆ ಸೂಚಿಸಿದ್ದರು. ವೈದ್ಯರು ಸರತಿ ಪ್ರಕಾರ ರೋಗಿಗಳಿಗೆ ಚಿಕಿತ್ಸೆ ನೀಡಿದರು.

Leave a Reply

Your email address will not be published. Required fields are marked *