ಭಟ್ಕಳದಲ್ಲಿ ಧಾರಾಕಾರ ಮಳೆ

ಭಟ್ಕಳ: ತಾಲೂಕಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ.

12.30ಕ್ಕೆ ಶುರುವಾದ ಮಳೆ ಸಮಯ ಹೋದಂತೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ತಗ್ಗು ಪ್ರದೇಶವೆಲ್ಲ ಜಲಾವೃತಗೊಂಡಿದೆ. ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ. ಐಆರ್​ಬಿ ಸಂಸ್ಥೆಯ ನಿರ್ವಿುಸಿದ ರಸ್ತೆ ಕುಸಿದು ಬಿದ್ದಿದೆ. ಪಟ್ಟಣದ ರಂಗಿನಕಟ್ಟೆಯಂತೂ ಅಕ್ಷರಶಃ ಕೆರೆಯಂತೆ ಕಾಣುತ್ತಿತ್ತು.

ಸಂಶುದ್ದೀನ ಸರ್ಕಲ್, ಪುಷ್ಪಾಂಜಲಿ ಸರ್ಕಲ್, ಬೈಪಾಸ್ ಮೂಡಭಟ್ಕಳ, ಮಾರುತಿನಗರದ ರಾಘವೇಂದ್ರ ಸ್ವಾಮಿ ಮಠದ ಆವರಣ, ಚೌಥನಿ, ತಲಾಂದ, ಮಣ್ಕುಳಿ, ಆಸರಕೇರಿ, ಮುರ್ಡೆಶ್ವರ, ಕಾಯ್ಕಿಣಿ ಮುಂತಾದೆಡೆ ಕೃತಕ ನೆರೆ ವಾತಾವರಣ ಸೃಷ್ಟಿಯಾಗಿತ್ತು.

ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ: ಮಳೆಯಿಂದ ಅನಾಹುತವಾದರೆ ಸ್ಥಿರ ದೂರವಾಣಿ ಸಂಖ್ಯೆ 08385-226422 ಗೆ ಕರೆ ಮಾಡಲು ತಹಸೀಲ್ದಾರರು ಪ್ರಕಟಣೆ ನೀಡಿದ್ದರು. ಅಲ್ಲದೆ 24 ಗಂಟೆಗಳ ಕಾಲ ಇದು ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದರು. ಆದರೆ ಭಾನುವಾರ ಸುರಿದ ಮಳೆಗೆ ವಿನಾಯಕ ಎಂಬುವವರು ಹಲವು ಬಾರಿ ಕರೆ ಮಾಡಿದರು ಸ್ವೀಕರಿಸಿಲ್ಲ.

ಉಳಿದೆಡೆ ಆಗಾಗ ಮಳೆ: ಹೊನ್ನಾವರ, ಕುಮಟಾ ಕಾರವಾರ ಸೇರಿ ಹಲವೆಡೆ ಬೆಳಗಿನಿಂದ ಸಣ್ಣದಾಗಿ ಮಳೆಯಾಗುತ್ತಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಲೆನಾಡಿನ ಭಾಗದಲ್ಲೂ ಆಗೊಂದು, ಈಗೊಂದು ಮಳೆ ಬಂದು ಮಾಯವಾಗುತ್ತಿದೆ.

Leave a Reply

Your email address will not be published. Required fields are marked *