ಭಗವದ್ಗೀತೆ ಜಗತ್ತಿನ ಮಾತೆ

ವಿಜಯವಾಣಿ ಸುದ್ದಿಜಾಲ ಕುಮಟಾ

ಜೀವನದಲ್ಲಿ ಶೋಕ-ಮೋಹಗಳೆಂಬ ಸಮುದ್ರ ದಾಟಿಸಿ ದ್ವಂದ್ವರಹಿತ ಸಮಚಿತ್ತ ಮಾರ್ಗವನ್ನು ಭಗವದ್ಗೀತೆ ಕರುಣಿಸುತ್ತದೆ ಎಂದು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಹಾಗೂ ಭಗವದ್ಗೀತೆ ಕುರಿತು ಡಾಕ್ಟರೇಟ್ ಪಡೆದ ಡಾ. ವಿನಾಯಕ ಭಟ್ಟ ಗಾಳಿಮನೆ ಹೇಳಿದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸ್ವಾಮಿಗಳ ಆಶಯದಂತೆ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದಡಿ ಪಟ್ಟಣದ ಮಹಾಸತಿ ಸಭಾಭವನದಲ್ಲಿ ಮಂಗಳವಾರ ನಡೆದ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.

ಗೀತೆ ಕೃಷ್ಣನ ಮಾತು ಹೌದು, ಜಗತ್ತಿನ ಮಾತೆಯೂ ಹೌದು. ಭಗವದ್ಗೀತೆ ರಾಷ್ಟ್ರ ಗ್ರಂಥವಾಗುವತ್ತ ನಾವೆಲ್ಲ ಪಣತೊಡಬೇಕು ಎಂದರು.

ಅಭಿಯಾನದ ಜಿಲ್ಲಾಧ್ಯಕ್ಷ ಮುರಲೀಧರ ಪ್ರಭು ಅಧ್ಯಕ್ಷತೆ ವಹಿಸಿ, ಭಗವದ್ಗೀತೆಯ ಪ್ರೇರಣೆ ಬದುಕಿಗೆ ದೈವಿಕತೆ ತುಂಬುತ್ತದೆ ಎಂದರು.

ಅಭಿಯಾನದ ತಾಲೂಕು ಅಧ್ಯಕ್ಷ ಜಿ.ಎಸ್. ನಾಯ್ಕ, ಉದ್ಯಮಿ ಎಸ್.ಕೆ. ನಾಯ್ಕ ಮಿರ್ಜಾನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ನಾಗರಾಜ ನಾಯ್ಕ ಇದ್ದರು.

ಸಾಮೂಹಿಕ ಗೀತಾಪಠಣ ನಡೆಸಿದರು. ಅಂಕಿತಾ ಗಾಂವಕರ ಪ್ರಾರ್ಥಿಸಿದರು. ಆನಂದ ನಾಯಕ ಸ್ವಾಗತಿಸಿದರು. ಅರುಣ ಹೆಗಡೆ ನಿರೂಪಿಸಿದರು. ಗಣೇಶ ಭಟ್ಟ, ಮಹಾಬಲೇಶ್ವರ ಶೇಟ್, ರೋಹಿದಾಸ ಗಾವಡಿ, ದಯಾನಂದ ದೇಶಭಂಡಾರಿ, ಸುಧಾ ಶಾನಭಾಗ ಮತ್ತಿತರರು ಸಹಕರಿಸಿದರು. ಪ್ರಮುಖರಾದ ಜಿ.ಎಸ್. ಹೆಗಡೆ, ಡಾ. ವಿ.ಜಿ. ಶೆಟ್ಟಿ, ಹನುಮಂತ ಶಾನಭಾಗ ಮೊದಲಾದವರು ಪಾಲ್ಗೊಂಡಿದ್ದರು. ಸಭಾಕಾರ್ಯಕ್ರಮಕ್ಕೆ ಮುನ್ನ ದೇವರಹಕ್ಕಲ ದೇವಸ್ಥಾನ ಬಳಿಯಿಂದ ಗೀತೋಪದೇಶ ಸಾರುವ ರಥದ ಮೆರವಣಿಗೆ ನಡೆದು ಮಹಾಸತಿ ಸಭಾಭವನದೆದುರು ಸಮಾಪ್ತಿಗೊಂಡಿತು.