ಶಿರಸಿ: ಮನುಷ್ಯ ಮಾಡುವ ಕರ್ಮಗಳ ಫಲವನ್ನು ಆತ ಸ್ವತಃ ಅನುಭವಿಸಬೇಕು. ಭಗವಂತನ ಧ್ಯಾನ, ಆರಾಧನೆಯಿಂದ ಎಲ್ಲ ಕರ್ಮಗಳಿಂದ ಮುಕ್ತಿ ಪಡೆದು ನೆಮ್ಮದಿ ಕಾಣಬಹುದು ಎಂದು ಸೋಂದಾ ಜೈನ ದಿಗಂಬರ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹೇಳಿದರು.
ಜೈನಮಠದಲ್ಲಿ ಗುರುವಾರ ತಮ್ಮ ಸಪ್ತಮ ವರ್ಷದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವದಿಸಿದ ಅವರು, ಸಿದ್ದ ಚಕ್ರ ಜಪ ಮಾಡುವ ಜತೆ ಪೂಜೆ ಮಾಡುವುದರಿಂದ ಅಷ್ಟಗುಣಗಳನ್ನು ಪ್ರಾಪ್ತಿ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಅಷ್ಟ ಕರ್ಮಗಳನ್ನು ನಾಶ ಮಾಡಿಕೊಳ್ಳಬೇಕು. ನಿತ್ಯ ಯಾವುದಾದರೂ ಒಂದು ಕರ್ಮ, ಕಷ್ಟ ಬರುತ್ತಾ ಇರುತ್ತದೆ. ಆದರೆ, ಅನುಭವಿಶಾಲಿಗಳು, ಗುರುಗಳ ಕೃಪೆ, ಮಾರ್ಗದರ್ಶನದಿಂದ ಉತ್ತಮ ಜೀವನ ನಡೆಸಬೇಕು. ನಿರಂತರ ದೇವರ ಧ್ಯಾನ, ಮೊರೆ ಹೋಗಿ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಬದುಕಬೇಕು ಎಂದರು. ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿದ್ದರು.