Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಭಕ್ತ ಕುಂಬಾರ ಇದು 70 ವರ್ಷಗಳ ಹಿಂದಿನ ಕಥೆ – ವ್ಯಥೆ

Friday, 09.03.2018, 3:05 AM       No Comments

| ಗಣೇಶ್ ಕಾಸರಗೋಡು

ಇದು ವರನಟ ಡಾ. ರಾಜಕುಮಾರ್ ನಾಲ್ಕು ದಶಕಗಳ ಹಿಂದೆ ನಟಿಸಿದ ‘ಭಕ್ತ ಕುಂಬಾರ’ ಚಿತ್ರದ ಕಥೆಯಲ್ಲ. ಏಳು ದಶಕಗಳ ಹಿಂದೆ ಹೊನ್ನಪ್ಪ ಭಾಗವತರು ನಿರ್ವಿುಸಿ, ನಟಿಸಿ, ಸಂಗೀತ ನೀಡಿದ ‘ಭಕ್ತ ಕುಂಬಾರ’ ಚಿತ್ರದ ನಿರ್ಮಾಣ ಹಂತದ ಕಥೆ-ವ್ಯಥೆ! ತಾಂತ್ರಿಕವಾಗಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲಿ ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ 70 ವರ್ಷಗಳ ಹಿಂದಿನ ಸಾಹಸಕ್ಕೊಂದು ಸಾಕ್ಷಿ! ಆ ಕಾಲದ ಸುಂದರ ಪುರುಷರೆಂದೇ ಖ್ಯಾತರಾದ ಹೊನ್ನಪ್ಪ ಭಾಗವತರು, ತಮ್ಮ ಈ ಸಾಹಸಕ್ಕೆ ಉಂಟಾದ ಅಡೆತಡೆಗಳನ್ನು ಲೆಕ್ಕಿಸದೆ ಒಂದು ತಪಸ್ಸಿನಂತೆ, ಎರಡು ವರ್ಷಗಳ ಕಾಲ ಚಿತ್ರೀಕರಿಸಿ ಬಿಡುಗಡೆಗೊಳಿಸಿದ ಈ ಚಿತ್ರಕ್ಕಾದ ಅಂದಿನ ಖರ್ಚು ಬರೋಬ್ಬರಿ ನಾಲ್ಕು ಲಕ್ಷ ರೂ.ಗಳು!

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಖ್ಯಾತರಾಗಿದ್ದ ಹೊನ್ನಪ್ಪ ಭಾಗವತರು ‘ಭಕ್ತ ಕುಂಬಾರ’ ಚಿತ್ರಕ್ಕೆ ಕೈ ಹಾಕಿದ್ದು ಒಂದು ವಿಚಿತ್ರ ಪ್ರಸಂಗದಲ್ಲಿ. ಭಕ್ತಿ ಪ್ರಧಾನ ಚಿತ್ರಗಳಿಗೆ ಬೇಡಿಕೆಯಿದ್ದ ಆ ಕಾಲದಲ್ಲಿ ಚಿತ್ರ ನಿರ್ವಣಕ್ಕೆ ಅವರು ಹೊರಟರು. ಆಗ ತಮಿಳು ಚಿತ್ರರಂಗದಲ್ಲಿ ಅತ್ಯಂತ ಬಿಜಿಯಾಗಿದ್ದ ಅವರು, ಕಥೆ ಮತ್ತು ಸಂಭಾಷಣೆಯನ್ನು ಬರೆಸಲೆಂದೇ ಬೆಂಗಳೂರಿನಿಂದ ಮದರಾಸಿಗೆ ಹುಣಸೂರು ಕೃಷ್ಣಮೂರ್ತಿಗಳನ್ನು ಕರೆಸಿಕೊಂಡರು. ಕೆಲಸ ಶುರುವಾಗುವ ಹೊತ್ತಿಗೆ ಅದೇನು ತಕರಾರು ಬಂತೋ ಗೊತ್ತಿಲ್ಲ, ಈ ಪ್ರಾಜೆಕ್ಟ್ ನಿಂದ ಹುಣಸೂರು ಕೃಷ್ಣಮೂರ್ತಿ ಹೊರನಡೆದರು. ಇದು ಹೊನ್ನಪ್ಪ ಭಾಗವತರಿಗೆ ಬಂದೊದಗಿದ ಮೊದಲ ಮಾನಸಿಕ ಆಘಾತ. ಅದರಿಂದ ಹೊರಬಂದ ಅವರು ಗೀತೆರಚನೆಗಾಗಿಯೇ ಕರೆಸಿಕೊಂಡಿದ್ದ ಕು.ರಾ. ಸೀತಾರಾಮ ಶಾಸ್ತ್ರಿಗಳಿಗೆ ಕಥೆ ಮತ್ತು ಸಂಭಾಷಣೆ ಬರೆಯುವ ಹೊಣೆಯನ್ನು ಹೊರಿಸಿದರು. ಆದರೆ ಚಿತ್ರೀಕರಣ ಆರಂಭಿಸುವುದು ತಡವಾಯಿತು. ಅಷ್ಟರಲ್ಲೇ ಶುರುವಾಯಿತು ನೋಡಿ ಪತ್ರಿಕೆಗಳ ಕಟುಟೀಕೆ. ಈ ಟೀಕೆಗಳು ಭಾಗವತರ ಮಾನಸಿಕ ಸ್ಥಿತಿಯನ್ನು ಎಷ್ಟೊಂದು ಘಾಸಿಗೊಳಿಸಿದವು ಎಂದರೆ, ಇಡೀ ಸಿನಿಮಾವನ್ನೇ ರದ್ದುಗೊಳಿಸುವ ಬಗ್ಗೆ ಕೂಡ ಯೋಚಿಸಿದ್ದರು! ಆದರೂ ಹಿಡಿದ ಹಠ ಬಿಡಲಿಲ್ಲ.

ಕನ್ನಡಿಗರೇ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಬೆಂಗಳೂರಿನಿಂದ 15 ಮಂದಿಯ ತಂಡದ ವಾದ್ಯಗೋಷ್ಠಿಯನ್ನು ಕರೆಸಿಕೊಂಡು ಎರಡು ತಿಂಗಳ ಕಾಲ ವೃಥಾ ಕಾಲಹರಣ ಮಾಡಿದ್ದಕ್ಕೆ ಹೊನ್ನಪ್ಪ ಭಾಗವತರು ತೆತ್ತ ಬೆಲೆ 30 ಸಾವಿರ ರೂ.ಗಳು! ಹಠ ಬಿಡದ ಭಾಗವತರು ಮತ್ತೆ ಬೆಂಗಳೂರಿಗೆ ಬಂದು ಪಂಡರಿಬಾಯಿ, ಲಕ್ಷ್ಮೀಬಾಯಿ, ರಾಘವೇಂದ್ರರಾವ್ ಮುಂತಾದ ಕಲಾವಿದರಿಗೆ ಅಡ್ವಾನ್ಸ್ ಕೊಟ್ಟು ಮದರಾಸಿಗೆ ಆಹ್ವಾನಿಸಿದರು. ಅವರಿಗಾಗಿಯೇ ಅಲ್ಲೊಂದು ಬಂಗಲೆಯನ್ನು ಬಾಡಿಗೆಗಿಡಿದರು. ಚಿತ್ರದ ನಿರ್ದೇಶನಕ್ಕೆಂದು ಬೊಮ್ಮನ್ ಡಿ.ಇರಾನಿ ಎಂಬುವವರನ್ನು ಆಯ್ಕೆ ಮಾಡಿಕೊಂಡ ಭಾಗವತರು ಅವರಿಂದ ಸ್ವಲ್ಪ ಮಟ್ಟಿಗೆ ಹಣದ ನಿರೀಕ್ಷೆಯಲ್ಲಿದ್ದರು. ಪ್ರಾಮಿಸ್ ಮಾಡಿದ್ದರೂ ಇರಾನಿ ಸಾಹೇಬರು ಗಂಟು ಬಿಚ್ಚಲಿಲ್ಲ. ಹೀಗಾಗಿ ಅದನ್ನೇ ನಂಬಿಕೊಂಡಿದ್ದ ಭಾಗವತರು ಆರ್ಥಿಕವಾಗಿ ತೊಂದರೆಗೊಳಗಾದರು. ಈ ನಡುವೆ ಕಥೆ, ಚಿತ್ರಕಥೆ, ಸಂಭಾಷಣೆಯ ಬಗ್ಗೆ ಪ್ರತಿದಿನವೂ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಭಾಗವತರ ಜತೆ ಇರಾನಿ ಮತ್ತು ಸೀತಾರಾಮ ಶಾಸ್ತ್ರಿಗಳು ಭಾಗವಹಿಸುತ್ತಿದ್ದರು. ಯಾವಾಗ ಹಣದ ವಿಚಾರವಾಗಿ ತಕರಾರು ಶುರುವಾಯಿತೋ ಇರಾನಿ ಅವರನ್ನು ಭಾಗವತರು ದೂರವಿಟ್ಟರು. ಅವರ ಬದಲು ನಿರ್ದೇಶನದ ಹೊಣೆಯನ್ನು ಪಿ.ಫುಲ್ಲಯ್ಯಗೆ ವಹಿಸಿದರು. ಆಗಲೂ ಪತ್ರಿಕೆಗಳು ವಾಚಾಮಗೋಚರವಾದ ಕಟುಟೀಕೆ ಮಾಡಿದವು. ಇವುಗಳಿಂದಾಗಿ ರೋಸಿ ಹೋದ ಹೊನ್ನಪ್ಪ ಭಾಗವತರಿಗೆ ಹಠ, ಛಲದ ಹೊರತಾಗಿ ಬೇರೇನೂ ಸಹಾಯಕ್ಕೆ ಬರಲಿಲ್ಲ.

ಕೊನೆಗೂ ಮದರಾಸಿನ ಎ.ವಿ.ಎಂ.ಸ್ಟುಡಿಯೋದಲ್ಲಿ ‘ಭಕ್ತ ಕುಂಬಾರ’ ಚಿತ್ರದ ಚಿತ್ರೀಕರಣ ಆರಂಭವಾಯಿತು. ಇನ್ನೇನು ಎಲ್ಲ ಸಮಸ್ಯೆಗಳು ಪರಿಹಾರವಾಯಿತೆಂದು ಭಾಗವತರು ನಿಟ್ಟುಸಿರು ಬಿಡುತ್ತಿರುವಂತೆಯೇ ಮತ್ತೊಂದು ಸಮಸ್ಯೆ ಎದುರಾಯಿತು. ಅದು ಚಿತ್ರೀಕರಣ ನಡೆಯುತ್ತಿದ್ದಾಗ ಘಟಿಸಿದ ಸಮಸ್ಯೆ. ಎ. ವಿ.ಎಂ.ಸ್ಟುಡಿಯೋದಲ್ಲಿ ಹಾಕಲಾದ ಸೆಟ್​ನಲ್ಲಿ ಭಕ್ತ ಕುಂಬಾರ ಪಾತ್ರದ ಭಾಗವತರು ಕಾಲಿನಿಂದ ಮಣ್ಣು ತುಳಿಯುತ್ತ ಹಾಡಬೇಕು, ಅಷ್ಟರಲ್ಲಿ ಅದೆಲ್ಲಿತ್ತೋ ಏನೋ ಒಂದು ಕಬ್ಬಿಣದ ಮೊಳೆ ಭಾಗವತರ ಕಾಲಿಗೆ ಚುಚ್ಚಿಬಿಟ್ಟಿತು. ಅದು ತುಕ್ಕು ಹಿಡಿದ ಮೊಳೆಯಾದುದರಿಂದ ಸೆಪ್ಟಿಕ್ ಆಗಿ ಕಾಲಿಗೆ ನಂಜೇರಿಬಿಟ್ಟಿತು. ಪರಿಣಾಮವಾಗಿ ಚಿತ್ರೀಕರಣ ನಿಂತು ಹೋಯಿತು. ಕಾಲಿಗೆ ಚಿಕಿತ್ಸೆ ಕೊಡಿಸಿ ಮತ್ತೆ ಚಿತ್ರೀಕರಣಕ್ಕೆ ಭಾಗವತರು ತಯಾರಾದರು. ಆಗಲೂ ದುರಾದೃಷ್ಟ ಅವರ ಬೆನ್ನು ಬಿಡಲಿಲ್ಲ. ಮಣ್ಣಿನಲ್ಲಿ ಹೂತು ಹೋಗಬೇಕಾದ ಮಗುವಿಗೆ ಜ್ವರ ಬಂದು ಮತ್ತೆ ಚಿತ್ರೀಕರಣ ನಿಂತು ಹೋಯಿತು! ಜ್ವರ ಬಿಟ್ಟು ಮಗು ಚಿತ್ರೀಕರಣಕ್ಕೆ ರೆಡಿಯಾದಾಗ ನಟಿ ಲಕ್ಷ್ಮೀಬಾಯಿ ಅವರ ಕಾಲ್​ಶೀಟ್ ಸಮಸ್ಯೆ ಎದುರಾಯಿತು. ಅನಿವಾರ್ಯವಾಗಿ ಲಕ್ಷ್ಮೀಬಾಯಿ ಅವರ ಹಳೆಯ ಶಾಟ್​ಗಳನ್ನು ನಡುವೆ ಸೇರಿಸಿ ಅಡ್ಜಸ್ಟ್ ಮಾಡುವಷ್ಟರಲ್ಲಿ ಭಾಗವತರು ಸುಸ್ತಾಗಿದ್ದರು!

ಈ ನಡುವೆ ಅರ್ಧಕ್ಕೇ ಕೈಕೊಟ್ಟು ಹೋಗಿದ್ದ ಮಾಜಿ ನಿರ್ದೇಶಕ ಬೊಮ್ಮನ್ ಡಿ.ಇರಾನಿ ಕೋರ್ಟ್ ಮೊರೆಹೋದರು. ಎಲ್ಲವೂ ಸಿದ್ಧವಾಗಿತ್ತು, ಇನ್ನೇನು ಚಿತ್ರವನ್ನು ಬಿಡುಗಡೆ ಮಾಡಬೇಕು ಎನ್ನುವಷ್ಟರಲ್ಲಿ ಕೋರ್ಟ್​ನಿಂದ ಸ್ಟೇ ಬಂದಿತು. ಆದರೆ, ಭಾಗವತರು ಈ ಸಾರಿ ತಲೆ ಮೇಲೆ ಕೈ ಹೊತ್ತು ಕೂರಲಿಲ್ಲ. ಕೊನೆಯ ಹಂತದ ಫೈಟ್​ಗೆ ಸಿದ್ಧರಾಗಿಬಿಟ್ಟರು! ಕೊನೆಗೂ ಒಬ್ಬ ರಿಸೀವರ್​ನನ್ನು ನೇಮಿಸಿ, ಕೋರ್ಟ್ ಅನುಮತಿ ಪಡೆದು ಬೆಂಗಳೂರಿನ ‘ಸ್ಟೇಟ್ಸ್’ (ಈಗಿನ ‘ಭೂಮಿಕ’) ಚಿತ್ರಮಂದಿರದಲ್ಲಿ ತೆರೆಕಾಣಿಸಲು ರಂಗಪ್ಪ ಎನ್ನುವವರ ಬಳಿ ಮಾತುಕತೆ ನಡೆಸಿದ್ದರು. ಅದಕ್ಕೂ ಮೊದಲು ‘ಭಕ್ತ ಕುಂಬಾರ’ ಚಿತ್ರದ ಕಥೆಯನ್ನೇ ಇಟ್ಟುಕೊಂಡು ’ಚಕ್ರಧಾರಿ’ ಎಂಬ ತಮಿಳು ಚಿತ್ರ ತಯಾರಾಗಿತ್ತು. ಈ ಚಿತ್ರದ ಕಮಿಟ್ಮೆಂಟ್​ನಿಂದಾಗಿ ‘ಸ್ಟೇಟ್ಸ್’ ಚಿತ್ರಮಂದಿರ ಭಾಗವತರ ಕೈತಪ್ಪಿ ಹೋಯಿತು. ಕೊನೆಗೂ ಒಂದೇ ಕಥೆಯ ಎರಡು ಚಿತ್ರಗಳು (‘ಭಕ್ತ ಕುಂಬಾರ’ ಮತ್ತು ‘ಚಕ್ರಧಾರಿ’) ಒಂದೇ ದಿನ ತೆರೆ ಕಂಡವು. ಕನ್ನಡದ ‘ಭಕ್ತ ಕುಂಬಾರ’ ಚಿತ್ರ ‘ವಿಜಯಲಕ್ಷ್ಮೀ’ ಚಿತ್ರಮಂದಿರದಲ್ಲಿ ತೆರೆಕಂಡು ಅದ್ಭುತ ಯಶಸ್ಸು ಪಡೆಯಿತು. ಆದರೆ ತಮಿಳಿನ ’ಚಕ್ರಧಾರಿ’ ಸೋತು ಹೋಯಿತು.

ನಾಲ್ಕು ಲಕ್ಷ ಬಜೆಟ್​ನಲ್ಲಿ ತಯಾರಾದ ‘ಭಕ್ತ ಕುಂಬಾರ’ ಚಿತ್ರ ಕರ್ನಾಟಕದ ಹತ್ತು ಕೇಂದ್ರಗಳಲ್ಲಿ ರಿಲೀಸ್ ಆಗಿ ದೊಡ್ಡ ಯಶಸ್ಸು ಕಂಡಿತು. ಹೊನ್ನಪ್ಪ ಭಾಗವತರಿಗೆ ಕರ್ನಾಟಕದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡರು! ಕೋರ್ಟ್​ನಲ್ಲಿ ಬೊಮ್ಮನ್ ಡಿ.ಇರಾನಿ ಸೋತು ಹೋದರು. ಆದರೆ, ಅಷ್ಟರಲ್ಲಾಗಲೇ ಗೆಲುವಿನ ರುಚಿ ಕಂಡಿದ್ದ ಭಾಗವತರು ಆತನಿಂದ ನಯಾಪೈಸೆ ನಷ್ಟದ ಬಾಬತ್ತನ್ನು ವಸೂಲು ಮಾಡದೆ ಔದಾರ್ಯ ಮೆರೆದರು. ದುರಂತವೆಂದರೆ ಮದರಾಸಿನ ಲಾಬೋರೇಟರಿಯೊಂದರಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್​ನಿಂದಾಗಿ ‘ಭಕ್ತ ಕುಂಬಾರ’ ಚಿತ್ರದ ನೆಗೆಟಿವ್ ಸುಟ್ಟು ಹೋದವು. ಆ ಚಿತ್ರದಿಂದಾಗಿ ಹೊನ್ನಪ್ಪ ಭಾಗವತರು ದೊಡ್ಡ ಮೊತ್ತದ ಲಾಭ ಗಳಿಸದಿದ್ದರೂ, ದೊಡ್ಡಮಟ್ಟದ ಹೆಸರು ಸಂಪಾದಿಸಿಕೊಂಡರು.

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top