More

  ಭಕ್ತೋದ್ಧಾರಕಿ ಕುಂಚಿಗನಾಳ್ ಕಣಿವೆಮಾರಮ್ಮ

  ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ಹೊರವಲಯದ ಕುಂಚಿಗನಾಳ್‌ನಲ್ಲಿ ನೆಲೆನಿಂತು ವಿರಾಜಮಾನಳಾಗಿ ಬೇಡಿದ ಭಕ್ತರನ್ನು ಪೊರೆವ ಶಕ್ತಿದೇವತೆ ಕಣಿವೆಮಾರಮ್ಮ ಚಿತ್ರದುರ್ಗ ಅಷ್ಟೇ ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳ ಹಲವರ ಮನೆದೇವತೆ, ಆರಾಧ್ಯ ದೇವತೆಯಾಗಿದ್ದಾಳೆ.

  ಚಿತ್ರದುರ್ಗದ ರಕ್ಷಕ ದೇವತೆಗಳೆಂದೇ ಖ್ಯಾತಿ ಪಡೆದ ನವದುರ್ಗೆಯರ ಪೈಕಿ ಕಣಿವೆಮಾರಮ್ಮ ಪ್ರಮುಖ ದೇವತೆಯಾಗಿದ್ದು, ಈ ತಾಯಿಯ ಅಪ್ಪಣೆಯ ಬಳಿಕ ಭಕ್ತರು ತಮ್ಮ ಕೆಲಸ ಕಾರ್ಯದಲ್ಲಿ ತೊಡಗುವ ಪರಿಪಾಠ ಮುಂದುವರೆದಿದೆ.

  ದೇಗುಲಕ್ಕೆ ಆಧುನಿಕ ಸ್ಪರ್ಶ: ದೇವಿಯ ದೇಗುಲ 1921ರಿಂದ ಜೀರ್ಣೋದ್ಧಾರ ಕಾಣುತ್ತಿದ್ದು, ಪ್ರಸ್ತುತ ಆಧುನಿಕ ಶೈಲಿಯೊಂದಿಗೆ ಅಭಿವೃದ್ಧಿಪಡಿಸಿ ಶ್ರದ್ಧಾಭಕ್ತಿಯಿಂದ ಭಕ್ತರು ಆರಾಧನೆ ಮಾಡುತ್ತ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಲೇ ಇದೆ.

  ಕಂಕಣ, ಸಂತಾನ ಭಾಗ್ಯ, ಸ್ವಂತ ವ್ಯವಹಾರ, ಆಸ್ತಿ ಖರೀದಿ, ಉದ್ಯೋಗ-ಆರೋಗ್ಯ ಹರಸಿ ಬೇಡಿದ ವರವನ್ನು ಪುಷ್ಪದ ಮೂಲಕ ಕರುಣಿಸುತ್ತಾಳೆ ಎಂಬ ನಂಬಿಕೆಯೊಂದಿಗೆ ಈಗಲೂ ಒಳಿತನ್ನು ಕಂಡ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಆಕೆಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತಾರೆ. ದೇಗುಲ ಪಕ್ಕದಲ್ಲೇ ಮಾತಂಗಿ ಗುಡಿ ಇದ್ದು, ಮದಕರಿಪುರ ಗಡಿ ವ್ಯಾಪ್ತಿಗೆ ತಿರುಗಿಕೊಂಡಿದೆ.

  ಜಾತ್ರೆ ವಿಶೇಷ: ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬವಾದ ಮೂರು ವಾರದೊಳಗೆ ದೇವಿಯ ಜಾತ್ರೆ ನಡೆಯುತ್ತದೆ. 2024ನೇ ಸಾಲಿನ ದೇವಿಯ ಜಾತ್ರೆಯೂ ಮಾ. 26ರಂದು ರಾತ್ರಿ 8ಕ್ಕೆ ಕಂಕಣಧಾರಣೆ ಹಾಗೂ ಮಧುವಣಗಿತ್ತಿ ಪೂಜಾ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ. 27ರಂದು ಜಲ್ದಿ ಮಹೋತ್ಸವ ಜರುಗಲಿದೆ.

  ಕಂಕಣಧಾರಣೆಗೂ ಮುನ್ನ ಬರುವ ಶುಕ್ರವಾರ ದೇವಿಯ ತವರಾದ ಪಾಲವ್ವನಹಳ್ಳಿ, ಕ್ಯಾದಿಗೆರೆ, ದೊಡ್ಡಸಿದ್ದವ್ವನಹಳ್ಳಿಯಲ್ಲಿ ದೇವಿಗೆ ಮೀಸಲು ಸಮರ್ಪಿಸುತ್ತಾರೆ. ಕ್ರಮವಾಗಿ ಈಶ್ವರ ದೇಗುಲ, ಲಕ್ಷ್ಮೀ ದೇವಿ ದೇಗುಲ ಸೇರಿ ಬೆರಳೆಣಿಕೆಯಷ್ಟು ಭಕ್ತರ ಮನೆಗಳಲ್ಲಿ ಪೂಜೆ ಸ್ವೀಕಾರ ನಡೆಯಲಿದೆ. ಆದರೆ, ದೇವಿ ಮುಂಭಾಗದ ಬಸವನಮೂರ್ತಿ ಮಾತ್ರ ಮೂರು ಗ್ರಾಮಗಳ ಎಲ್ಲ ಭಕ್ತರ ಮನೆಗಳಿಗೂ ತೆರಳಿ ಮೀಸಲು ಪಡೆದ ನಂತರ ದೇಗುಲಕ್ಕೆ ಮರಳುವ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

  ನಾಯಕ ಸಮುದಾಯದವರೇ ಮುಂಚಿನಿಂದಲೂ ದೇವಿಯ ಅರ್ಚಕರಾಗಿ ಪೂಜೆ ನೆರವೇರಿಸುತ್ತ ಬಂದಿದ್ದು, ಬುಡಕಟ್ಟು ಸಂಸ್ಕೃತಿ, ಪರಂಪರೆಗೆ ಹತ್ತಿರವಿರುವ ಗೊಲ್ಲ ಸಮುದಾಯದವರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.

  ವರ್ಷಕ್ಕೊಮ್ಮೆ ವಿಶೇಷ ಪೂಜೆ: ಗಂಗಾಪೂಜೆಯಾದ ಬಳಿಕ ವರ್ಷಕೊಮ್ಮೆ ಮಾತ್ರ ಕಣಿವೆಮಾರಮ್ಮ, ಕೊಲ್ಲಾಪುರದಮ್ಮ ದೇವಿಯ ಪೂಜೆ, ಉತ್ಸವ ಮೂರ್ತಿಗಳನ್ನು ಭಕ್ತರು ಕಣ್ತುಂಬಿಕೊಳ್ಳಬಹುದು. ಈ ಬಾರಿ 27ರಂದು ಜರುಗಲಿದ್ದು, ಇದನ್ನು ಬೇರೆ ಇನ್ಯಾವ ದಿನದಲ್ಲೂ ಕಾಣಲು ಸಾಧ್ಯವಿಲ್ಲ. ಕೊಲ್ಲಾಪುರದಮ್ಮ ದೇವಿಯನ್ನು ಹೊತ್ತ ಅರ್ಚಕರು ಕುಣಿದು ದೇಗುಲ ಪ್ರವೇಶಿಸುವ ಆಚರಣೆ ಜಾತ್ರೆಯಲ್ಲೇ ಅತ್ಯಂತ ವಿಶೇಷ. 29ಕ್ಕೆ ದೇವಿಯ ದೊಡ್ಡ ಜಾತ್ರೆ, ಭಕ್ತರಿಂದ ಹರಕೆ ಸಲ್ಲಿಕೆಯಾಗಲಿದೆ ಎನ್ನುತ್ತಾರೆ ದೇಗುಲದ ಅರ್ಚಕರು.

  28ರಂದು ಮೆರವಣಿಗೆ: ನಗರ ಪೊಲೀಸ್‌ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಿಯ ಜಾತ್ರೆಯೂ ಇದೇ ಅವಧಿಯಲ್ಲೇ ನಡೆಯಲಿದೆ. ಪ್ರಮುಖ ರಸ್ತೆಗಳಲ್ಲಿ ದೇವಿಯ ಭವ್ಯ ಮೆರವಣಿಗೆ ದಿನಾಂಕ ಈ ಬಾರಿ 28ಕ್ಕೆ ನಿಗದಿಯಾಗಿದೆ. ಈ ದೇಗುಲಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ನಡೆಯುವ ವಿಶೇಷ ಪೂಜೆ, ಅನ್ನಸಂತರ್ಪಣೆಯಲ್ಲೂ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts