ಭಕ್ತಿ, ಪರೋಪಕಾರ ದೇವರಿಗೆ ಇಷ್ಟ

ಹೊಳೆಆಲೂರ: ದುಃಖದ ಮೂಲಗಳಾಗಿರುವ ಅಷ್ಟೈಶ್ವರ್ಯಗಳನ್ನು ಭಕ್ತರಿಂದ ಅಪೇಕ್ಷಿಸದೇ ಪರಿಶುದ್ಧ್ದ ಭಕ್ತಿ, ಜ್ಞಾನ, ಕಾಯಕ, ಪರೋಪಕಾರ ಗುಣವುಳ್ಳವರನ್ನು ಭಗವಂತ ಇಷ್ಟ ಪಡುತ್ತಾನೆ ಎಂದು ಅಸೂಟಿಯ ರೇವಣಸಿದ್ಧೇಶ್ವರ ಶ್ರೀಗಳು ಹೇಳಿದರು.

ಗ್ರಾಮದ ಯಚ್ಚರೇಶ್ವರ ದೇವಸ್ಥಾನದಲ್ಲಿ ಭಾನುವಾರ ಜರುಗಿದ ಭಗವತ್ ಚಿಂತನಾ 8ನೇ ಮಾಸಿಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ‘ನೆಮ್ಮದಿ, ಶಾಂತಿಯಿಂದ ಬದುಕಲು ಕೇವಲ ಭೌತಿಕ ವಸ್ತುಗಳು ಬೇಕಾಗಿಲ್ಲ. ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ಸಾಮಾಜಿಕ ಕಳಕಳಿ ಇಟ್ಟುಕೊಂಡು ಬದುಕಿದರೆ ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಯಚ್ಚರಸ್ವಾಮಿಗಳು ಮಾತನಾಡಿ, ಹುಟ್ಟಿದಾಗಲೂ ಏನನ್ನೂ ತರದ, ಸತ್ತಾಗಲೂ ಏನನ್ನೂ ಒಯ್ಯದ ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಆಸ್ತಿ, ಐಶ್ವರ್ಯ ಸಂಪಾದನೆಯಲ್ಲಿ ತೊಡಗಿರುವುದು ತರವಲ್ಲ. ಕಾಗೆಯ ಕೂಗಿ ಕರೆಯುವ ಗುಣ, ನಾಯಿಯ ಪ್ರಾಮಾಣಿಕತೆ, ಕೋಳಿಯ ಹಂಚಿಕೊಂಡು ತಿನ್ನುವ ಗುಣವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಎಸ್.ಎಸ್. ಪಟ್ಟಣಶಟ್ಟಿ, ಪಿ.ಡಿ. ಶೇಬಣ್ಣವರ ಅವರನ್ನು ಸನ್ಮಾನಿಸಲಾಯಿತು. ಯಚ್ಚರೇಶ್ವರ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಎ.ಎನ್. ಬಡಿಗೇರ, ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಜಿ. ತೋಟದ, ಚಂದ್ರಶೇಖರಯ್ಯ ಹಿರೇಮಠ, ಶ್ರೀಶೈಲ ಬದಾಮಿ, ಶಿವಾನಂದ ಕೆಲೂರ, ಕೆ.ಬಿ. ಕಡೆಮನಿ, ಸಿಂಚನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರಯ್ಯ ವಸ್ತ್ರದ, ಎಚ್.ವಿ. ಬ್ಯಾಡಗಿ, ಇತರರು ಉಪಸ್ಥಿತರಿದ್ದರು.