Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

‘ಭಕ್ತಿಯ ಅರಮನೆ ಕಟ್ಟಲು ಶೇಷದಾಸರಿಟ್ಟ ಮೊದಲ ಕಲ್ಲು’

Thursday, 12.07.2018, 3:03 AM       No Comments

|ಡಾ. ಕೆ.ಎಸ್. ಸುಮನ್

ವಿಜಯದಾಸರ ಅವಿಚ್ಛಿನ್ನ ದಾಸಪರಂಪರೆಯು ಇತ್ತೀಚಿನ ಶ್ರೀಯುತ ಗುರುಗೋವಿಂದವಿಟ್ಠಲದಾಸರ ವರೆಗೂ ಸಲ್ಲಿಸಿರುವ ಹರಿ-ಗುರುಸೇವೆಯು ಅಸದಳ. ಅಂಖ ಪರಂಪರೆಯಲ್ಲಿ ಬಂದ ದಾಸವರೇಣ್ಯರೇ ಮೊದಲಕಲ್ಲು ಶೇಷದಾಸರು. ತುಂಗಭದ್ರಾ, ಕೃಷ್ಣಾನದಿಗಳನ್ನು ಇಕ್ಕೆಲಗಳಲ್ಲಿ ತಬ್ಬಿಕೊಂಡಿರುವ ಗ್ರಾಮವೇ ಮೊದಲಕಲ್ಲು. ಇಲ್ಲಿನ ಬೃಹತ್ ಬಂಡೆ ಅಥವಾ ಶಿಲೆಯಿಂದಲೇ ಈ ಗ್ರಾಮವು ಆದಿಶಿಲೆ ಅಥವಾ ಮೊದಲ ಕಲ್ಲೆಂದು ಪ್ರಥಿತವಾಗಿದೆ. ಈ ಗ್ರಾಮದಲ್ಲೇ ಇದ್ದು ತಪಃಸಿದ್ಧಿ ಪಡೆದು ಅಪರೋಕ್ಷಜ್ಞಾನಿಯೆಂದು ಪ್ರಸಿದ್ಧಿ ಪಡೆದರು ಶೇಷದಾಸರು. ಗದ್ವಾಲ ಸಂಸ್ಥಾನಕ್ಕೆ ಸೇರಿದ ಈ ಗ್ರಾಮದಿಂದ ಐದು ಮೈಲಿ ದೂರದಲ್ಲಿರುವುದೇ ದರೂರು ಗ್ರಾಮ. ಇಲ್ಲಿನ ಕುಲಕರ್ಣಿ ಮನೆತನದಲ್ಲಿ ಕ್ರಿ.ಶ. 1806ನೇ ಇಸವಿಯಲ್ಲಿ ಅವತರಿಸಿದವರೇ ಶೇಷಪ್ಪ. ಆಗ ಮಹಾರಾಣಿ ವೆಂಕಟಲಕ್ಷ್ಮಮ್ಮನ ದತ್ತುಪುತ್ರ ಸೋಮಭೂಪಾಲನು ಗದ್ವಾಲ ಸಂಸ್ಥಾನವನ್ನಾಳುತ್ತಿದ್ದ. ವೃಥಾ ಪ್ರಜೆಗಳನ್ನು ದಂಡಿಸುತ್ತಿದ್ದ, ವಿದ್ವಾಂಸರನ್ನು ಕಡೆಗಣಿಸುತ್ತಿದ್ದ ರಾಜನ ಪ್ರವೃತ್ತಿ ಸ್ವತಃ ಮಹಾರಾಣಿಗೇ ಬೇಸರವನ್ನುಂಟುಮಾಡಿತ್ತು. ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಶ್ರೀಮಂತ ಉಡುಪಿನೊಂದಿಗೆ ಸಂಸ್ಕಾರಶೀಲರಾಗಿದ್ದ ಕುಲಕರ್ಣಿ ಶೇಷಪ್ಪನೂ ವೃಥಾಪವಾದಕ್ಕೊಳಗಾದರು. ಇಲ್ಲಸಲ್ಲದ ಆರೋಪದಿಂದ ನೊಂದ ಪ್ರಾಮಾಣಿಕ ಶೇಷಪ್ಪನು ಆ ಕ್ಷಣವೇ ರಾಜನನ್ನೂ ಪದವಿಯನ್ನೂ ತಿರಸ್ಕರಿಸಿ ಗದ್ವಾಲದಿಂದ ಹೊರನಡೆದು ಏಕಾಂಗಿಯಾಗಿ ಚಿಂತಲರೇವಲಿಯನ್ನು ತಲುಪಿ ವ್ಯಾಸರಾಯರಿಂದ ಪ್ರತಿಷ್ಠಾಪಿತವಾಗಿದ್ದ ಹನುಮಂತನ ಅಡಿದಾವರೆಗಳನ್ನು ಆಶ್ರಯಿಸಿ ಲೌಕಿಕ ಜೀವನಕ್ಕೇ ತಿಲಾಂಜಲಿಯನ್ನಿತ್ತರು. ರಾಜ್ಯವೆಲ್ಲ ಹುಡುಕಾಡಿ ಬೇಸತ್ತ ಪರಿವಾರದವರು ಕೊನೆಗೆ ಇವರಿರುವಲ್ಲಿಗೆ ಬಂದು ಮನೆಗೆ ಹಿಂದಿರುಗುವಂತೆ ಎಷ್ಟೇ ಬೇಡಿಕೊಂಡರೂ ಮರಳದೆ ಭಗವತ್ ಕೈಂಕರ್ಯದಲ್ಲೇ ತೊಡಗಿಸಿಕೊಂಡು ನಿತ್ಯ ಕೃಷ್ಣವೇಣಿಯಲ್ಲಿ ಮಿಂದು ಒಂಟಿಗಾಲಿನಲ್ಲೇ ನಿಂತು ಆಂಜನೇಯನನ್ನು ಧ್ಯಾನಿಸುತ್ತ ಕಾಲ ಕಳೆಯುತ್ತಿದ್ದರು. ಹೀಗಿರಲು ಒಮ್ಮೆ ವಿಜಯದಾಸರು ಕನಸಿನಲ್ಲಿ ಪ್ರತ್ಯಕ್ಷರಾಗಿ ‘ಶೀಘ್ರದಲ್ಲೇ ಭಕ್ತನೊಬ್ಬನು ಬಂದು ನಿಮಗೆ ಪ್ರತಿನಿತ್ಯ ನೈವೇದ್ಯಕ್ಕೆ ಅಣಿಮಾಡಿಕೊಡುವನು. ಅದನ್ನು ಆ ಮುಖ್ಯಪ್ರಾಣನಿಗೆ ಎರಡು ವರ್ಷ ನಿರಂತರವಾಗಿ ಅರ್ಪಿಸಿ ಇಷ್ಟಸಿದ್ಧಿ ಪಡೆಯಿರಿ’ ಎಂದಾದೇಶಿಸಿದರು.

ಅಂತೆಯೇ ಆಚರಿಸಿದ ಶೇಷಪ್ಪನಿಗೆ ದಾಸರು ತಿಳಿಸಿದಂತೆ ಆ ಮಾರುತಿ ಹಾಗೂ ರಾಮಚಂದ್ರದೇವರ ಅಪರೋಕ್ಷವಾಗಿ ಜನಾದರ, ಶಾಸ್ತ್ರ ವೈಚಕ್ಷಣ್ಯಗಳೆರಡೂ ಸಿದ್ಧಿಸಿದವು. ನಂತರ ವಿಜಯದಾಸರ ಜನ್ಮಸ್ಥಳವಾದ ಚೀಕಲಪರವಿಗೆ ತೆರಳಿದ ಶೇಷಪ್ಪನವರು ಅಲ್ಲಿನ ಅಶ್ವತ್ಥ ನರಸಿಂಹನನ್ನು ಸೇವಿಸಿ ತರುವಾಯ ಚಿಪ್ಪಗಿರಿಯೆಡೆಗೆ ನಡೆದರು. ಆಗ ಅವರ ಸೇವೆಗೆ ಮೆಚ್ಚಿದ ವಿಜಯರಾಯರು ಕನಸಿನಲ್ಲಿ ಬಂದು ‘ಗುರು ವಿಜಯವಿಟ್ಠಲ’ ಎಂಬ ಅಂಕಿತವನ್ನು ಅನುಗ್ರಹಿಸಿದರು. ನಂತರ ಚಕ್ರತೀರ್ಥಕ್ಕೂ, ನವಬೃಂದಾವನಕ್ಕೂ ತೆರಳಿ ವಿಜಯದಾಸರ ಆಣತಿಯಂತೆ ಹರಿವಾಯುಗಳನ್ನು ಸೇವಿಸಿ ಯಂತ್ರೋದ್ಧಾರಕ ಪ್ರಾಣದೇವನನ್ನು ಪ್ರತ್ಯಕ್ಷೀಕರಿಸಿಕೊಂಡು, ‘ನಂಬಿದೆ ನಿನ್ನ ಪಾದ ಮುಖ್ಯಪ್ರಾಣ’ ಎಂಬ ಕೀರ್ತನೆಯೊಂದನ್ನು ರಚಿಸಿ ವಿಜಯವಿಟ್ಠಲದಾಸರೆಂದು ಪ್ರಖ್ಯಾತರಾದರು. ಇವರೇ ಹಿಂದೆ ವೈಕುಂಠದಾಸರಾಗಿ ಪುರಂದರದಾಸರ ಸಾಮೀಪ್ಯವನ್ನೂ ತರುವಾಯ ಪಂಗನಾಮದ ತಿಮ್ಮಣ್ಣನಾಗಿ ಜನಿಸಿ ಹರಿಗುರುಗಳನ್ನು ಸೇವಿಸಿದ್ದರೆಂದು ಜ್ಞಾನಿಗಳ ಅಂಬೋಣ. ದನಂತರ ನವವೃಂದಾವನದಲ್ಲಿ ಚಂದ್ರಿಕಾಚಾರ್ಯರನ್ನೂ, ಮಂಚಾಲೆಯಲ್ಲಿ ಅವರದ್ದೇ ಮತ್ತೊಂದು ರೂಪವಾದ ಪರಿಮಳಾಚಾರ್ಯರನ್ನೂ ಸೇವಿಸಿ ಬಿಂಬಾಪರೋಕ್ಷವನ್ನು ಪಡೆದರೆಂದು ತಿಳಿದುಬಂದಿದೆ. ದಾಸರ 43 ಸುಳಾದಿಗಳೂ, 13 ಉಗಾಭೋಗಗಳೂ, 4 ಕೀರ್ತನೆಗಳಲ್ಲದೆ ಅನೇಕ ಗುರೂಪಾಸನಾಕ್ರಮ ಕೃತಿಗಳೂ ನಮಗಿಂದು ದೊರೆಯುತ್ತವೆ. ಗುರುರಾಯರನ್ನು ಕುರಿತು ಇವರು ರಚಿಸಿರುವ ಸುಳಾದಿಯೊಂದು ಗಾಂಭೀರ್ಯದಿಂದಲೂ ಪದವೈಚಿತ್ರ್ಯಂದಲೂ ರಮಣೀಯವಾಗಿದೆ. ‘ಘನದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ ವನಜಪಾದ ಯುಗಕೆ ನಮೋ ನಮೋ’ ಎಂದು ಪ್ರಾರಂಭವಾಗುವ ಈ ಸುಳಾದಿಯು ಗುರುರಾಘವೇಂದ್ರರ ಕಾರುಣ್ಯಸ್ವರೂಪದ ಸುಳಿವನ್ನೂ, ಶಾಸ್ತ್ರಗಳಲ್ಲಿ ರಾಯರಿಗಿದ್ದ ವೈದುಷ್ಯದ ಸುಳಿವನ್ನೂ ನೀಡುತ್ತ, ರಾಯರ ಸದಾಚಾರದ ಮಹತ್ತ್ವವನ್ನೂ ಅರುಹುತ್ತ ಅಂಥ ತಪಸ್ವಿಗಳನ್ನು ಸುಲಭವಾಗಿ ಒಲಿಸಿಕೊಳ್ಳುವುದರ ಸರಳೋಪಾಯವನ್ನೂ ವ್ಯಕ್ತಪಡಿಸುತ್ತ ಅನ್ವರ್ಥಕವಾಗಿ ಸುಳಾದಿಯೆನಿಸಿದೆ.

‘ತಾವು ಜನುಮಾರಭ್ಯ ಒಮ್ಮೆಯೂ ನಿಮಗೆ ನಮಿಸಲಿಲ್ಲ. ಹೀಗಿದ್ದರೂ ಈ ಯಾವ ಅಪರಾಧವನ್ನೂಣಿಸದೆ ನನ್ನನ್ನು ಸಲಹಿದ್ದನ್ನು ನೋಡಿದರೆ ತಾವು ಎಂಥ ಕಾರುಣ್ಯಮೂರ್ತಿ ಎಂದು ತಿಳಿದುಬರುತ್ತದೆ. ಹಿಂದೆ ಜಯತೀರ್ಥರು ಸಂಸ್ಥಾಪಿಸಿದ್ದ ಸುಖತೀರ್ಥರ ಮತವನ್ನು ಇನ್ನಷ್ಟು ದೃಢಪಡಿಸಿದ ಹೇ ಟಿಪ್ಪಣ್ಣಾಚಾರ್ಯ! ನಿಮ್ಮ ಪಾಂಡಿತ್ಯಕ್ಕೆ ನಾ ಎಣೆಗಾಣೆ’ ಎಂದು ಸ್ತುತಿಸುವರು ಶ್ರೀ ಗುರು ವಿಜಯವಿಟ್ಠಲದಾಸರು.

(ಕಳೆದ ಸಂಚಿಕೆಯಲ್ಲಿ ‘ತೇರಾನೇರಿ ಮೆರೆದು ಬರುವ’ ಎಂಬ ಕೃತಿಯನ್ನು ರಾಮರಾವ್ ಕುಲಕರ್ಣಿ ಎಂಬುದಾಗಿ ಪ್ರಸಿದ್ಧರಾಗಿದ್ದ ಆನಂದವಿಟ್ಠಲದಾಸರ ಕೃತಿಯನ್ನಾಗಿ ವಿಮಶಿಸಲಾಗಿತ್ತು. ಆದರೆ ನಂಜನಗೂಡಿನ ಸಿ.ಕೆ. ವೇಂಕಟೇಶಾಚಾರ್ಯರೆಂಬ ಮತ್ತೊಬ್ಬರು ಆನಂದವಿಟ್ಠಲಾಂಕಿತರು ಇದನ್ನು ರಚಿಸಿದ್ದಾಗಿ ಹೆಚ್ಚಿನ ಅನುಸಂಧಾನದಿಂದ ತರುವಾಯ ತಿಳಿದುಬಂದಿದೆ. ಆದರೆ ಈರ್ವರೂ ಗುರುರಾಯರ ಪರಮಭಕ್ತರಾಗಿದ್ದು ರಾಯರ ಮೇಲಣ ಕೃತಿಗಳನ್ನು ರಚಿಸಿದ್ದಾರೆಂಬುದರಲ್ಲಿ ಸಂಶಯವಿಲ್ಲ. ಈ ವ್ಯತ್ಯಯವನ್ನು ಓದುಗರು ಮನ್ನಿಸಿ ತಿದ್ದಿಕೊಳ್ಳಬೇಕಾಗಿ ಪ್ರಾರ್ಥನೆ.)

Leave a Reply

Your email address will not be published. Required fields are marked *

Back To Top