ಭಕ್ತಿಯಿಂದ ಪೂಜಿಸಿ ಪಾವನರಾಗಿರಿ

ಹುಬ್ಬಳ್ಳಿ: ಬಸವಣ್ಣನವರು ಸಮಾಜಕ್ಕೆ ವಚನ ಸಾಹಿತ್ಯ ಕೊಟ್ಟರು. ವಚನ ಸಾಹಿತ್ಯ ಅಮೋಘ, ಅಚೇತನ, ಅಪ್ರತಿಮವಾದುದು. ಹಾಗಾಗಿಯೇ ರಾಷ್ಟ್ರಕವಿ ಕುವೆಂಪು ಅವರು ವಿಶ್ವಗುರು ಬಸವಣ್ಣನವರನ್ನು ‘ಕಾರ್ತಿಕ ಕತ್ತಲಲ್ಲಿ ಆಕಾಶದೀಪವಾಗಿ ನೀ ಬಂದೆ’ ಎಂದು ಬಣ್ಣಿಸಿದ್ದರು ಎಂದು ಹಾವೇರಿ ಜಿಲ್ಲೆಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿಯ ಬೆಂಗೇರಿಯಲ್ಲಿ ನಡೆಯುತ್ತಿರುವ ಧಾರ್ವಿುಕ ಕಾರ್ಯಕ್ರಮದ ಅಂಗವಾಗಿ ಅವರು ಕಲ್ಯಾಣ ದರ್ಶನ ಪ್ರವಚನ ನೀಡಿದರು.

ಸಾಮಾನ್ಯವಾಗಿ ಬೆಳಗಿನ ಜಾವ ಬೇಗ ಎದ್ದು ನಮ್ಮ ಕಾಯಕದಲ್ಲಿ ತೊಡುಗುವುದು ಸ್ವಾಭಾವಿಕ. ಕಾರಣ ಬೆಳಗಿನ ಸಮಯ ಬ್ರಾಹ್ಮಿ ಮುಹೂರ್ತ, ಈ ವೇಳೆಯಲ್ಲಿ ಪೂಜಿಸುವದರಿಂದ ಭಗವಂತನು ಒಲಿಯುವನು ಎಂದರು.

ಕಾಶ್ಮೀರದ ಮಹಾರಾಜ ಮಹಾದೇವ ಭೂಪಾಲರು ಕೋಪಗೊಂಡು ಚೂರಿ ಚಿಕ್ಕಣ್ಣನಿಗೆ ಸುಪಾರಿ ಕೊಟ್ಟು ಬಸವಣ್ಣನ್ನು ಮುಗಿಸಲು ಕಳಿಸಿದರು. ಇದನ್ನು ತಿಳಿದ ಮಹಾದೇವರ ಸಹೋದರಿ ಬೊಂತಾದೇವಿ ಅವರನ್ನು ಕಾಪಾಡಲು ಬೆನ್ನತ್ತಿ ಬಂದದ್ದು, ಸಹೋದರಿ ಪ್ರೇಮದಿಂದಾಗಿ ಮಹಾದೇವ ಭೂಪಾಲರು ಕರ್ನಾಟಕಕ್ಕೆ ಬಂದು ಬಸವಣ್ಣನ ಪ್ರಭಾವದಿಂದ ಎಲ್ಲರೂ ಶರಣರಾಗಿ ಉಳಿದ ಪ್ರಸಂಗವನ್ನು ಶ್ರೀಗಳು ಅಚ್ಚುಕಟ್ಟಾಗಿ ವಿವರಿಸಿ, ಕೇಳುಗರ ಚಪ್ಪಾಳೆ ಗಿಟ್ಟಿಸಿದರು.

ಜನರು ದುಶ್ಚಟಗಳಿಂದ ದೂರವಿರಬೇಕು. ಅದರಿಂದ ಸ್ವಸ್ಥ ಸಮಾಜ ನಿರ್ವಿುಸಲು ಸಾಧ್ಯ ಎಂದರು. ದೆಹಲಿಯಿಂದ ಬಂದಿದ್ದ ಮಹಾಂತಪ್ಪನವರು ಭಕ್ತಿಯ ಪೂಜೆ ಬಗ್ಗೆ ವಿವರಿಸಿದರು.