ಭಕ್ತರ ನಡಿಗೆ ವಿಠ್ಠಲನ ಕಡೆಗೆ…

| ಚರಿತ ರಾಜು, 

ಬಿಳಿಯ ಜುಬ್ಬಾ-ಪೈಜಾಮದೊಂದಿಗೆ ಬಿಳಿಯ ಟೊಪ್ಪಿಗೆ, ತಲೆಯ ಮೇಲಿನ ಸೆರಗು ಜಾರದಂತೆ ಕಚ್ಚೆ ಸೀರೆ ಉಟ್ಟು ಸಂತ ತುಕಾರಾಮರ ನಾಮಸ್ಮರಣೆಯೊಂದಿಗೆ ಸುಮಾರು 50-60ರ ಆಸುಪಾಸಿನ ಹಿರಿಯರು ರಭಸದಿಂದ ಹೆಜ್ಜೆ ಹಾಕುತ್ತಿದ್ದರು. ಅವರು ಸಾಗುತ್ತಿದ್ದುದು ಪಂಢರಪುರದ ಕಡೆಗೆ. ಅದು ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಹಾರಾಷ್ಟ್ರದ ಪಾಲಕಿ ಉತ್ಸವ. 17ನೆಯ ಶತಮಾನದ ಪ್ರಸಿದ್ಧ ಹಿಂದೂ ಸಂತ, ಭಕ್ತಿಮಾರ್ಗದ ಪ್ರವಾಹಕ ತುಕಾರಾಮ ಮಹಾರಾಜರು ವಾರಕರಿ ಪಂಥದ ಆಚರಣೆಗೆ ಸೇರಿದವರು. ವಿಷ್ಣುವಿನ ಅವತಾರವಾದ ವಿಠ್ಠಲನ ಭಕ್ತರು. ಅಭಂಗಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಪಸರಿಸಿದರು. ಅವರ ಸ್ಮರಣಾರ್ಥ ಪ್ರತಿ ವರ್ಷವೂ ಲಕ್ಷಾಂತರ ಯಾತ್ರಾರ್ಥಿಗಳನ್ನೊಳಗೊಂಡ ಪಲ್ಲಕ್ಕಿ ಉತ್ಸವವು ಪಂಢರಪುರದ ವಿಠೋಬ ಮಂದಿರ ತಲುಪಿ ಕೊನೆಗೊಳ್ಳುತ್ತದೆ. ಸಂತ ಜ್ಞಾನೇಶ್ವರರು ಮತ್ತು ತುಕಾರಾಮರು ಈ ಯಾತ್ರೆಯನ್ನು ಆರಂಭಿಸಿದರು ಎಂಬುದು ಒಂದು ಊಹೆ. ಪಾದುಕೆಗಳನ್ನು ಹೊತ್ತು ನಡೆಯುವ ಪದ್ಧತಿ ತುಕಾರಾಮರ ಕೊನೆಯ ಪುತ್ರ ನಾರಾಯಣರಿಂದ ಶುರುವಾದದ್ದೆಂಬ ವಾದವಿದೆ. ಗ್ವಾಲಿಯರ್ ಮಹಾರಾಜನ ಆಸ್ಥಾನಿಕನೊಬ್ಬನಿಂದಾಗಿ ಈ ಉತ್ಸವದಲ್ಲಿ ಕುದುರೆಗಳು ಹಾಗೂ ದಿಂಡಿಗಳು ಪ್ರಮುಖ ಆಕರ್ಷಣೆಯಾದವೆಂಬ ವಾದವೂ ಇದೆ.

ವಾರಿ ಎಂದರೆ ಏನು?: ಇದು ಸುಮಾರು 21 ದಿನಗಳ ಯಾತ್ರೆ. ಇದರ ವೈಶಿಷ್ಟ್ಯೇನೆಂದರೆ ಆಷಾಢ ಏಕಾದಶಿಯಂದು ಮುಕ್ತಾಯಗೊಳ್ಳುತ್ತದೆ. ಒಟ್ಟು ಯಾತ್ರಾರ್ಥಿಗಳನ್ನೆಲ್ಲ ವಿಂಗಡಿಸಿ ದಿಂಡಿ ರಚಿಸಲಾಗಿರುತ್ತದೆ. ಪ್ರತಿ ದಿಂಡಿಯಲ್ಲೂ 100ರಿಂದ 500 ಜನರಿರುತ್ತಾರೆ. ಮಧ್ಯಭಾಗದಲ್ಲಿ ಪಲ್ಲಕ್ಕಿ ಇದ್ದು ಹಿಂದೆ-ಮುಂದೆ ಸಮಸಂಖ್ಯೆಯ ಜನರಿರುತ್ತಾರೆ. ಪ್ರತಿ ದಿಂಡಿಗೂ ಕ್ರಮಸಂಖ್ಯೆ ಹಾಗೂ ಅವರ ಜಾಗವನ್ನು ಮೊದಲೇ ನಿಗದಿಪಡಿಸಲಾಗುತ್ತದೆ. ವಾರಿಯ ವೇಳಾಪಟ್ಟಿ, ಊಟ, ವಸತಿ ಎಲ್ಲವೂ ಮೊದಲೇ ನಿರ್ಧರಿಸಲ್ಪಟ್ಟಿರುತ್ತವೆ. ಸಾರ್ವಜನಿಕರು ಸೇವೆಗಾಗಿ ಅವರವರ ಶಕ್ತ್ಯಾನುಸಾರ ಪ್ರತಿ ನಿಲುಗಡೆಯ ಸ್ಥಳದಲ್ಲೂ ಊಟದ ವ್ಯವಸ್ಥೆ ಮಾಡಿರುತ್ತಾರೆ. ಅಂತೆಯೇ ಪ್ರತಿ ಮುಂಜಾವಿನ 6ಕ್ಕೆ ಶುರುವಾಗಿ 4-5 ಕಿ.ಮೀ.ಗಳಿಗೊಮ್ಮೆ ತಿಂಡಿ-ಊಟದ ಮಧ್ಯಂತರ ಬಿಡುವಿರುತ್ತದೆ. ಪ್ರತಿ ದಿಂಡಿಯೊಂದಿಗೆ ಸಾಮಾನುಗಳನ್ನು ಶೇಖರಿಸಿಡುವ ಲಾರಿಗಳಂತಹ ವಾಹನಗಳಿರುತ್ತವೆ. ಪ್ರತಿ ನಿಲುಗಡೆಯಲ್ಲೂ ವಾರಿಯ ಸದಸ್ಯರು ತಲುಪುವ ಮುನ್ನವೇ ಊಟ ಸಿದ್ಧವಿದ್ದು ವಸತಿಯ ವ್ಯವಸ್ಥೆಯಾಗಿರುತ್ತದೆ. ತುಳಸಿ ಎಲೆಯ ಮಾಲೆಯನ್ನು ಧರಿಸಿ, ‘ಗ್ಯಾನ್ಬಾ ತುಕಾರಾಂ’ (ತುಕಾರಾಮರ ನೆನಪು) ಎಂಬ ಅಭಂಗಗಳನ್ನು ಹಾಡುತ್ತ ಸಾಗುತ್ತಾರೆ. ತುಳಸಿಮಾಲೆ ಧರಿಸಿದ ವ್ಯಕ್ತಿ ಮಾಲಕಾರಿ; ವೀಣೆ ಹಿಡಿದವ ವೀಣಾಕಾರಿ ಎಂದು ಗುರುತಿಸಲ್ಪಡುತ್ತಾರೆ. ದಿಂಡಿಯಲ್ಲಿ ಅವರಿಗೆ ಸ್ವಲ್ಪ ವಿಶೇಷ ಸ್ಥಾನಮಾನ ಇರುತ್ತದೆ. ಕೊನೆಗೆ ಏಕಾದಶಿಯಂದು ಪಂಢರಪುರ ತಲುಪಿ ಚಂದ್ರಭಾಗಾ ನದಿಯಲ್ಲಿ ಮಿಂದೆದ್ದು ವಿಠ್ಠಲನ ದರ್ಶನ ಪಡೆಯುತ್ತಾರೆ.

ಇಂದಿನ ಪಾಲಕಿ: ಯಾತ್ರೆಯ ಸಂದರ್ಭದಲ್ಲಿ ನಿಶ್ಯಕ್ತಿಯಿಂದ ಬಳಲುವವರಿಗಾಗಿ ಇತ್ತೀಚಿನ ವರ್ಷಗಳಲ್ಲಿ ವೈದ್ಯರ ಸಹಾಯ ದೊರೆಯುತ್ತಿದೆ. ಕೆಲವು ಸ್ವಯಂಸೇವಕರು ಸೇವೆಯಲ್ಲಿ ತೊಡಗಿಸಿಕೊಂಡು ಊಟಕ್ಕೆ ಬಳಸಿದ ಪ್ಲಾಸ್ಟಿಕ್/ಇನ್ನಿತರ ಡಬ್ಬಗಳನ್ನು ಆಯ್ದು ಶುಚಿಗೊಳಿಸುತ್ತಾರೆ. ಎಲ್ಲ ಕಡೆಯೂ ಮೊಬೈಲ್ ಟಾಯ್ಲೆಟ್ ವ್ಯವಸ್ಥೆಯಿದೆ. ಈ ವರ್ಷ ಮಹಾರಾಷ್ಟ್ರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಯಾತ್ರಾರ್ಥಿಗಳಿಗೆ ರೈನ್ ಜಾಕೆಟ್​ಗಳನ್ನು ಒದಗಿಸಿದೆ. ಈ ಆಚರಣೆಯಲ್ಲಿ ಬಹುವಾಗಿ ಗಮನ ಸೆಳೆಯುವುದು ಇಲ್ಲಿನ ಜನರ ಸ್ವಾಮಿನಿಷ್ಠೆ, ಶಿಸ್ತು ಹಾಗೂ ಸೇವಾಪ್ರವೃತ್ತಿ. ಇಳಿವಯಸ್ಸಿನವರ ಈ ಉತ್ಸಾಹ ಅನುಕರಣೀಯ.

One Reply to “ಭಕ್ತರ ನಡಿಗೆ ವಿಠ್ಠಲನ ಕಡೆಗೆ…”

Leave a Reply

Your email address will not be published. Required fields are marked *