ಬೆಳಗಾವಿ: ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದವರು ನಗರದ ಆರ್‌ಪಿಡಿ ವೃತ್ತದಲ್ಲಿ ಪ್ರತಿಭಟಿಸಿದರು.
ಸಿದ್ದರಾಮಯ್ಯ ಅವರಿಗೆ ‘ಸಿದ್ಧರಾಮುಲ್ಲಾ ಖಾನ್’ ಮತ್ತು ಕುಮಾರಸ್ವಾಮಿ ಅವರಿಗೆ ‘ಸುಮಾರಸ್ವಾಮಿ’ ಎಂಬ ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರನ್ನು ಯಾರೂ ಟೀಕೆ ಮಾಡಲಿಲ್ಲ. ಆದರೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದನ್ನು ಕೇಳುತ್ತಲೇ ಇಡೀ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪ್ರಲ್ಹಾದ ಜೋಶಿ ಅವರನ್ನು ಬೇಕಿದ್ದರೆ ರಾಜಕೀಯವಾಗಿ ಟೀಕೆ ಮಾಡಿ. ಆದರೆ, ಅವರು ಬ್ರಾಹ್ಮಣ ಸಮುದಾಯದವರು ಎಂದು ತಿಳಿದು ಅವಹೇಳನ ಮಾಡುವುದನ್ನು ಸಹಿಸುವುದಿಲ್ಲ. ಒಂದು ಸಮುದಾಯವನ್ನು ಓಲೈಕೆ ಮಾಡುವ ಉದ್ದೇಶದಿಂದ ಬ್ರಾಹ್ಮಣರನ್ನು ಗುರಿಯಾಗಿಟ್ಟುಕೊಂಡು ನಿಂದಿಸುತ್ತಿರುವುದನ್ನು ಸಹಿಸಲ್ಲ. ಆದ್ದರಿಂದ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು ತಕ್ಷಣ ಬಹಿರಂಗ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ವಿಲಾಸ ಜೋಶಿ, ಆರ್.ಎಸ್. ಮುತಾಲಿಕ ದೇಸಾಯಿ, ಪಾಲಿಕೆ ಸದಸ್ಯೆ ವಾಣಿ ಜೋಶಿ, ಉದ್ಯಮಿ ಮಧ್ವಾಚಾರ್ಯ, ಪ್ರಿಯಾ ಪುರಾಣಿಕ, ಅನಿಲ ಕುಲಕರ್ಣಿ, ಪ್ರಜ್ವಲ ಕುಲಕರ್ಣಿ, ಅಕ್ಷಯ ಕುಲಕರ್ಣಿ, ಪಾಲಿಕೆ ಮಾಜಿ ಸದಸ್ಯೆ ಅನುಶ್ರೀ ದೇಶಪಾಂಡೆ, ಗೋವಿಂದ ಫಡಕೆ, ಅರವಿಂದ ಹುನಗುಂದ, ಅರ್ಚನಾ ತೆಲಂಗ ಮತ್ತಿತರರು ಇದ್ದರು.