ಬ್ರಾಹ್ಮಣರಲ್ಲಿ ಏಕತೆ ಅಗತ್ಯ

ತುಮಕೂರು: ಜಗತ್ತಿನ ಸರ್ಕಾರ ಪರಮಾತ್ಮ, ಪರಮಾತ್ಮನಿಗೂ ಕರ್ತವ್ಯ ಎಂಬ ತೆರಿಗೆ ಕಟ್ಟಬೇಕು ಎಂದು ಉಡುಪಿ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಾಧ್ವ ಬ್ರಾಹ್ಮಣರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅಧ್ಯಾತ್ಮ ಮತ್ತು ಸಮಾಜ ಎರಡೂ ಸತ್ಯ. ಪರಮಾತ್ಮನ ಧ್ಯಾನ ಮಾಡುವಂತೆ ಪ್ರಪಂಚವನ್ನು ಪ್ರೀತಿಸಬೇಕು. ಸಮಾಜಮುಖಿ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದರು.

ಪರಮಾತ್ಮನಲ್ಲಿ ಭಕ್ತಿ ಎಂದು ಹೇಳಿಕೊಂಡು ಸಮಾಜ ಮರೆಯುವುದಲ್ಲ. ಸಮಾಜಸೇವೆಯಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು, ಜ್ಞಾನ ಪ್ರಸಾರದ ಕರ್ತವ್ಯ ಎಲ್ಲರ ಮೇಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಬ್ರಾಹ್ಮಣರಲ್ಲಿ ಏಕತೆ ಅಗತ್ಯವಾಗಿದೆ. ಮಧ್ವರಾಗಿ, ಬ್ರಾಹ್ಮಣರಾಗಿ, ಹಿಂದೂಗಳಾಗಿ ಮೂರು ಸ್ತರದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

‘ಪೂರ್ಣಪ್ರಮತಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದ ಸೋಸಲೆ ಶ್ರೀವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಸಮಾಜಕ್ಕೆ ಮಧ್ವ ಪರಂಪರೆ ಕೊಡುಗೆ ಅಸಾಧಾರಣವಾಗಿದೆ. ರಾಘವೇಂದ್ರ ಶ್ರೀಗಳಿಗೆ ಎಲ್ಲ ಸಮುದಾಯದ ಭಕ್ತರಿದ್ದಾರೆ. ಮಧ್ವಬ್ರಾಹ್ಮಣರು ಸಂಘಟಿತರಾಗಿ ಸಮಾಜದ ಏಳ್ಗೆಗೆ ಶ್ರಮಿಸಬೇಕು ಎಂದರು.

ಯಾವುದಕ್ಕೂ ವಿರೋಧ ಬರದಂತೆ ಸಾಮಾಜಿಕ ಸಂಘಟನೆ ಮಾಡಿಕೊಳ್ಳಬೇಕು. ತುಮಕೂರು ಜಿಲ್ಲೆಯಲ್ಲಿ ಮಧ್ವರ ಸಂಘ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಅದೇ ರೀತಿಯಲ್ಲಿ ರಾಜ್ಯದ ಎಲ್ಲ್ಲ ಜಿಲ್ಲೆಗಳಲ್ಲೂ ಒಳ್ಳೆಯ ಕೆಲಸವಾಗಬೇಕು. ಒಳ್ಳೆಯ ವಿಷಯ ಮಾದರಿಯಾಗಿಟ್ಟು ಸಂಘಟಿತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಜಯವಾಣಿ ಅಂಕಣಕಾರ ಡಾ.ಸುಮನಾಚಾರ್ಯ ‘ಭಾರತೀಯ ಸಂಸ್ಕೃತಿಗೆ ಆಚಾರ್ಯ ಮಧ್ವರ ಪರಂಪರೆ ಕೊಡುಗೆ’ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಲ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್, ಪಾಲಿಕೆ ಸದಸ್ಯ ಎನ್.ಆರ್.ನಾಗರಾಜರಾವ್ ಮತ್ತಿತರರು ಇದ್ದರು.

ಸಮಾರಂಭದ ಪೂರ್ವದಲ್ಲಿ ಕೆ.ಆರ್.ಬಡಾವಣೆಯಿಂದ ಸಮಾರಂಭ ನಡೆದ ಶ್ರೀಕೃಷ್ಣ ಕಲ್ಯಾಣ ಮಂಟಪದವರೆಗೆ ಶ್ರೀಕೃಷ್ಣ ಮಾಧ್ವರ, ಮಾಧ್ವ ಯತಿಗಳ-ದಾಸವರೇಣ್ಯರ ಭಾವಚಿತ್ರ-ಸ್ತಬ್ಧಚಿತ್ರಗಳೊಂದಿಗೆ ಮತ್ತು ವೇದಘೊಷ, ಭಜನೆ, ನಾದಸ್ವರ, ಚಂಡೆವಾದ್ಯ ಸಹಿತ ಬೃಹತ್ ಶೋಭಾಯಾತ್ರೆ ನಡೆಯಿತು. ಜಿಲ್ಲೆಯ ಮಾಧ್ವ ಸಮುದಾಯದ ನೂರಾರು ಜನರು ಶೋಭಾಯಾತ್ರೆಯಲ್ಲಿ ಭಾಗಿಯಾದರು.

ಸರ್ವಪಕ್ಷದ ಸರ್ಕಾರ ರಚನೆ ಅಗತ್ಯ: ತುಮಕೂರು: ಸರ್ವಪಕ್ಷದ ಸರ್ಕಾರ ರಚನೆಯಾದರೆ ಸ್ಥಿರ ಸರ್ಕಾರ ಸಾಧ್ಯ ಎಂದು ಉಡುಪಿ ಶ್ರೀ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಚುನಾವಣೆ ಮುನ್ನ ಪರಸ್ಪರ ಬೈದಾಡಿಕೊಂಡಿದ್ದ ಜೆಡಿಎಸ್, ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚಿಸಿದ್ದು ಸೋಜಿಗ. ಈಗ ಪದವಿಗಾಗಿ ಭಿನ್ನಾಭಿಪ್ರಾಯ ಮೂಡಿದೆ. ಇಂಥ ಕೆಟ್ಟ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸರ್ವಪಕ್ಷದ ಸರ್ಕಾರ ರಚನೆಯಾಗಬೇಕು ಎಂದರು.

ಮೋದಿ ಸರ್ಕಾರ ಕೊನೆಯ ವರ್ಷದಲ್ಲಿರುವುದರಿಂದ ಹೆಚ್ಚು ಕೆಲಸ ಮಾಡುವ ವಿಶ್ವಾಸವಿದೆ. ಆದರೆ 2019ರಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದರೆ ಕೂಸು ಹುಟ್ಟುವ ಮುಂಚೆಯೇ ಕುಲಾವಿ ಸಿದ್ಧ ಮಾಡಿಕೊಂಡಂತಾಗುತ್ತದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಒತ್ತಾಯಿಸಲು ಸಾಧ್ಯವಿಲ್ಲ. ಪ್ರಕರಣ ಕೋರ್ಟ್​ನಲ್ಲಿದೆ. ಸರ್ಕಾರ ನಿರ್ಧರಿಸಲು ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಹಾಗಾಗಿ, ಕೋರ್ಟ್ ಬೇಗ ತೀರ್ವನಿಸಲಿ ಎಂದಷ್ಟೇ ಒತ್ತಾಯಿಸಬಹುದು ಎಂದರು. ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಲು ಸಿದ್ಧ. ಆದರೆ, ಕೆಲ ಮುಸ್ಲಿಮರಿಗೇ ಆಸಕ್ತಿ ಇಲ್ಲ, ಕೆಲ ಹಿಂದುಗಳ ವಿರೋಧವಿದೆ. ಈ ಗಡಿಬಿಡಿಯಲ್ಲಿ ಕಾಲ ಹೊಂದಿಸಿಕೊಳ್ಳುವುದು ಕಷ್ಟ ಎಂದರು.

Leave a Reply

Your email address will not be published. Required fields are marked *