ಬ್ಯಾನರ್, ಬಂಟಿಂಗ್ಸ್ ತೆರವು

ಹಾನಗಲ್ಲ: ಲೋಕ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿ, ತಾಪಂ, ಸಣ್ಣ ನೀರಾವರಿ, ಕೃಷಿ ಉತ್ಪನ್ನ ಮಾರುಕಟ್ಟೆ, ಪುರಸಭೆ ಸೇರಿದಂತೆ ವಿವಿಧೆಡೆ ರಾರಾಜಿಸುತ್ತಿದ್ದ ಪ್ರಕಟಣೆಗಳನ್ನು ಪುರಸಭೆ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ಹಲವೆಡೆ ಹಾಕಲಾಗಿದ್ದ ವಿವಿಧ ಧರ್ಮಗಳ ಕೇಸರಿ ಹಾಗೂ ಹಸಿರು ಬಣ್ಣದ ಧ್ವಜಗಳನ್ನೂ ತೆರವುಗೊಳಿಸಿದರು.

ತಾಲೂಕಿನಾದ್ಯಂತ ಸರ್ಕಾರಿ ಕಟ್ಟಡಗಳು, ಸಭಾಭವನಗಳು, ಶಾಲಾ-ಕಾಲೇಜ್ ಕಟ್ಟಡಗಳ ಗೋಡೆಗಳಿಗೆ ಅಳವಡಿಸಿದ ಅಡಿಗಲ್ಲು, ಉದ್ಘಾಟನಾ ಶಿಲಾನ್ಯಾಸ ಫಲಕಗಳನ್ನು ತೆರವುಗೊಳಿಸುವಂತೆ ಅಥವಾ ಚುನಾವಣೆ ಮುಗಿಯುವವರೆಗೆ ಹಾಳೆಗಳನ್ನು ಅಂಟಿಸಿ ಮುಚ್ಚುವಂತೆ ಸಹಾಯಕ ಚುನಾವಣಾಧಿಕಾರಿ ಬಿ. ಮಂಜುನಾಥ್ ಸೂಚನೆ ನೀಡಿದ್ದಾರೆ. ತಾಲೂಕಿನ 42 ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಬೇಕೆಂದು ಆದೇಶಿಸಲಾಗಿದೆ.