ಬ್ಯಾಡಗಿ ತಾಲೂಕು ಬರಗಾಲ ಪಟ್ಟಿಗೆ ಸೇರಿಸಿ

ಬ್ಯಾಡಗಿ: ಬ್ಯಾಡಗಿ ತಾಲೂಕನ್ನು ಒಂದು ವಾರದೊಳಗೆ ಬರಗಾಲ ಪಟ್ಟಿಗೆ ಸೇರ್ಪಡೆ ಮಾಡಬೇಕು, ಇಲ್ಲದಿದ್ದರೆ ಬ್ಯಾಡಗಿ ಬಂದ್ ನಡೆಸುವ ಮೂಲಕ ಸರ್ಕಾರದ ತಾರತಮ್ಯ ನೀತಿ ಹಾಗೂ ರೈತ ವಿರೋಧಿ ದೋರಣೆ ಖಂಡಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

ತಹಸೀಲ್ದಾರ್ ಕಾರ್ಯಾಲಯ ಎದುರು ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ರೈತರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರದ ಕ್ರಮಕ್ಕೆ ರೈತರು ಬೇಸತ್ತಿದ್ದಾರೆ. ಮೂರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಪ್ರಮಾಣ ಕೂಡ ಇಳಿಮುಖವಾಗಿದೆ. ಕೂಡಲೇ ಸರ್ಕಾರ ರೈತರ ಹಿತಕಾಯಬೇಕು ಎಂದರು.

ವಿಧಾನಸೌಧ ಚಲೋ: ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು. ಸರ್ಕಾರಕ್ಕೆ ವಾರದ ಗಡುವು ನೀಡಲಾಗಿದೆ. ಬರಗಾಲ ಘೊಷಣೆ ಮಾಡದಿದ್ದಲ್ಲಿ ಬ್ಯಾಡಗಿ ಬಂದ್ ಮಾಡುವ ಮೂಲಕ ಹೋರಾಟ ತೀವ್ರಗೊಳಿಸುತ್ತೇವೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ವಿಧಾನಸೌಧ ಚಲೋ ಕಾರ್ಯಕ್ರಮ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಲೂಕು ರೈತ ಸಂಘದ ಉಪಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿದರು. ಬಳಿಕ ತಹಸೀಲ್ದಾರ್ ಜಯಪ್ಪ ತಳವಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಗಂಗಣ್ಣ ಎಲಿ, ಕೆ.ವಿ.ದೊಡ್ಡಗೌಡ್ರ, ಚಿಕ್ಕಪ್ಪ ಛತ್ರದ, ಶಂಕರ ಮರಗಾಲ, ಬಿ.ಎಸ್. ಪಾಟೀಲ, ಮಲ್ಲೆಶಪ್ಪ ಡಂಬಳ, ನಂಜುಂಡಯ್ಯ ಹಾವೇರಿಮಠ ಇದ್ದರು.