ಬ್ಯಾಡಗಿ ಉದ್ಯಾನಗಳೆಲ್ಲ ಅಧ್ವಾನ

ಬ್ಯಾಡಗಿ: ಪಟ್ಟಣದ ಸೌಂದರ್ಯ ಹೆಚ್ಚಿಸಲು, ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ವಿುಸಿದ ಉದ್ಯಾನಗಳು ಜಾನುವಾರುಗಳ ದೊಡ್ಡಿಯಾಗುವ ಮೂಲಕ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ಎಲ್ಲೆಡೆ ಗಿಡಗಂಟಿ, ಕಸಗಳಿಂದ ತುಂಬಿಕೊಂಡು ನಾಗರಿಕರ ಬೇಸರಕ್ಕೆ ಕಾರಣವಾಗಿವೆ.

ಪಟ್ಟಣದ 23 ವಾರ್ಡ್​ಗಳ ಪೈಕಿ 45ಕ್ಕೂ ಹೆಚ್ಚು ಕಡೆ ಉದ್ಯಾನ ಹಾಗೂ ಅದಕ್ಕೆ ಮೀಸಲಿಟ್ಟ ಜಾಗ ಇದೆ. ಕೆಲವೆಡೆ ಈವರೆಗೂ ರಕ್ಷಣಾ ಗೋಡೆ ನಿರ್ವಿುಸಿಲ್ಲ. ಗೋಡೆ ಇಲ್ಲದಿದ್ದರೂ ತಂತಿಬೇಲಿ ಆದರೂ ಅಳವಡಿಸಿಲ್ಲ. ಹೀಗಾಗಿ ಕೆಲ ಉದ್ಯಾನಗಳು ದನಗಳ ದೊಡ್ಡಿಯಾಗಿವೆ.

14ನೇ ಹಣಸಕಾಸು ಯೋಜನೆಯಡಿ 2018ರಲ್ಲಿ ಉದ್ಯಾನಗಳ ಅಭಿವೃದ್ಧಿ, ಸೌಲಭ್ಯಕ್ಕೆ 20 ಲಕ್ಷ .ರೂ ಅನುದಾನ ಬಳಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಎಸ್​ಎಫ್​ಸಿಯಲ್ಲಿ 11 ಲಕ್ಷ ರೂ. ಅನುದಾನ ಕಾಯ್ದಿರಿಸಿದೆ. ಪ್ರತಿ ಬಾರಿಯೂ ಉದ್ಯಾನ ಸುಧಾರಣೆ, ಹೊಸ ಉದ್ಯಾನಗಳಿಗೆ ಮೂಲಸೌಲಭ್ಯ, ತಂತಿ ಬೇಲಿ, ಆಟಿಕೆ ಸಾಮಾನು, ಆಸನ ಸೇರಿ ಹಲವು ಉಪಕರಣಗಳನ್ನು ಅಳವಡಿಸುತ್ತ ಬರಲಾಗಿದೆ. ಇದರಲ್ಲಿ ಕೆಲವು ಕಳಪೆಯಾಗಿವೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದರೂ ಪರಿಹಾರ ಕಂಡಿಲ್ಲ.

ನೆಲಕ್ಕುರುಳಿದ ಸಸಿಗಳು: ಮಳೆಗಾಲ ಆರಂಭವಾಗುತ್ತಿದ್ದಂತೆ ಪುರಸಭೆ ಹಾಗೂ ವಲಯ ಅರಣ್ಯಾಧಿಕಾರಿಗಳು ಜಂಟಿಯಾಗಿ ಸಸಿ ನೆಡುತ್ತಾರೆ. ಆದರೆ, ಅವುಗಳ ರಕ್ಷಣೆ, ನಿರ್ವಹಣೆಗೆ ಆಸಕ್ತಿ ತೋರಿಸುವುದಿಲ್ಲ. ಬೇಸಿಗೆಯಲ್ಲಿ ನೀರುಣಿಸದ ಹಿನ್ನೆಲೆಯಲ್ಲಿ ಸಸಿಗಳು ಒಣಗುತ್ತಿವೆ. ಜಾನುವಾರು, ಕುರಿ, ಇತರೆ ಪ್ರಾಣಿಗಳು ಸಸಿಗಳನ್ನು ತಿಂದು ಹಾಕಿವೆ. ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರ ಸಾರ್ವಜನಿಕರ ಕಣ್ಣಿಗೆ ಕಾಣುವಂತೆ ಕೆಲಸ ಮಾಡುವ ಅಧಿಕಾರಿಗಳು ಬಹುತೇಕ ವಾರ್ಡ್​ಗಳ ಉದ್ಯಾನಗಳ ಅಧ್ವಾನ ಸರಿಪಡಿಸುತ್ತಿಲ್ಲ.

ಉದ್ಯಾನಗಳಲ್ಲಿ ಹಣ್ಣು ಹಾಗೂ ಸೌಂದರ್ಯ ಹೆಚ್ಚಿಸುವ ಗಿಡಮರ ಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದರೂ ಗಮನಹರಿಸುತ್ತಿಲ್ಲ. ಪುರಸಭೆ ಉದ್ಯಾನಗಳಲ್ಲಿ ಅಳವಡಿಸಿದ ಆಟಿಕೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ಜಾರುಬಂಡಿ, ಜೋಕಾಲಿ, ಮ್ಯೂಜಿಕ್ ಚೇರ್, ತಿರುಗುಣಿ ಸಾಮಗ್ರಿಗಳು ಅಳವಡಿಸಿದ ಎರಡು ವರ್ಷದಲ್ಲೇ ಹಾಳಾಗಿವೆ. ಕಳಪೆ ಸಾಮಗ್ರಿಗಳ ಬಗ್ಗೆ ಹಿಂದಿನ ಸದಸ್ಯರು ಆಕ್ಷೇಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಜೆಯಾಗುತ್ತಿದ್ದಂತೆ ಕೆಲ ಉದ್ಯಾನಗಳು ಕಿಡಿಗೇಡಿಗಳ ತಾಣವಾಗುತ್ತಿವೆ. ಅಕ್ರಮ ಚಟುವಟಿಕೆ ನಿಯಂತ್ರಿಸಲು ಯಾವ ವ್ಯವಸ್ಥೆಯೂ ಇಲ್ಲ. ಹೀಗಾಗಿ ವಯೋವೃದ್ಧರು ಹಾಗೂ ಮಹಿಳೆಯರು ವಿಶ್ರಾಂತಿಗಾಗಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. 22ನೇ ವಾರ್ಡ್ ನಲ್ಲಿ ಸಾರ್ವಜನಿಕರು ರಾಜಾರೋಷವಾಗಿ ಉದ್ಯಾನ ದಲ್ಲಿ ಎಮ್ಮೆಗಳನ್ನು ಕಟ್ಟುತ್ತಿದ್ದಾರೆ.

ಹಂದಿಗಳ ವಾಸಸ್ಥಾನವಾಗಿರುವ ಉದ್ಯಾನ ಗಳ ಗೋಳು ಕೇಳುವವರೆ ಇಲ್ಲವಾಗಿದೆ. ಈ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದರೂ ಪುರಸಭೆ ಮುಖ್ಯಾಧಿಕಾರಿ ಮೌನ ವಹಿಸಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆ ವ್ಯಾಪ್ತಿಯ ಜಾಗದಲ್ಲಿ ಕೆಲವರು ಅತಿಕ್ರಮಣ ಮಾಡಿಕೊಂಡರೂ ಅಧಿಕಾರಿಗಳು ಮೌನ ಧೋರಣೆ ತೋರುತ್ತಿದ್ದಾರೆ. ಉದ್ಯಾನಗಳ ನಿರ್ವಹಣೆ ಪುರಸಭೆ ಕಾರ್ಯ. ನಿರ್ಲಕ್ಷ್ಯ ತೋರಿದಲ್ಲಿ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲಾಗುವುದು. 
|ರಾಘವೇಂದ್ರ ಭೋವಿ ನಿವಾಸಿ

ಎರಡು ವರ್ಷಗಳಲ್ಲಿ ವಿವಿಧ ಯೋಜನೆಯಲ್ಲಿ 30 ಲಕ್ಷ ರೂ. ಕಾಮಗಾರಿ ನಡೆದಿದ್ದು, ಉದ್ಯಾನಗಳಲ್ಲಿ ಕುರ್ಚಿ, ಆಟಿಕೆ ಸಾಮಗ್ರಿ ಮುರಿದುಬಿದ್ದ ಕುರಿತು ದೂರುಗಳಿವೆ. ಎರಡು ತಾಲೂಕಿನ ಪುರಸಭೆ ಇಂಜಿನಿಯರ್ ಕೆಲಸ ಒಬ್ಬರೇ ಮಾಡುತ್ತಿದ್ದು, ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ನಿರ್ವಹಣೆಗೆ ಸಿಬ್ಬಂದಿಯನ್ನು ನೇಮಿಸಿಲ್ಲ. ಅತಿಕ್ರಮಣ ಮಾಡಿಕೊಂಡಲ್ಲಿ ಕಾನೂನು ಕ್ರಮ ಕೈಗೊಳ್ಳುವೆ. 
| ಸಂಗಮೇಶ ಹಾದಿಮನಿ ಕಿರಿಯ ಇಂಜಿನಿಯರ್

Leave a Reply

Your email address will not be published. Required fields are marked *