Friday, 16th November 2018  

Vijayavani

Breaking News

ಬ್ಯಾಗ್ ಭಾರ ಬೇಕು ಪರಿಹಾರ

Saturday, 30.06.2018, 3:02 AM       No Comments

‘ಬ್ಯಾಗ್ ಭಾರವಾಗುತ್ತಿದೆಯಾ?’ ಎಂಬ ಶೀರ್ಷಿಕೆಯಡಿ ಭಾರವಾದ ಶಾಲಾ ಬ್ಯಾಗ್​ನಿಂದಾಗುತ್ತಿರುವ ಸಮಸ್ಯೆಗಳನ್ನು ಬರೆದು ಕಳುಹಿಸಿ ಎಂದು ವಿಜಯವಾಣಿ ನೀಡಿದ ಕರೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದೆ. ಪಾಲಕರು ಹಾಗೂ ವಿದ್ಯಾರ್ಥಿಗಳಿಂದ ಇಮೇಲ್, ಪತ್ರಗಳು ಬಂದಿದ್ದು, ಅದರಲ್ಲಿ ಕೆಲವರು ತೊಂದರೆ, ಪರಿಹಾರ ಎರಡನ್ನೂ ವಿವರಿಸಿದ್ದಾರೆ. ಅವುಗಳಲ್ಲಿ ಆಯ್ದ ಬರಹಗಳನ್ನು ಕಳೆದ ವಾರ ಪ್ರಕಟಿಸಿದ್ದು, ಅದರ ಮುಂದುವರಿದ ಭಾಗ ಇಲ್ಲಿದೆ.

ಗಮನ ಹರಿಸಲಿ ಶಿಕ್ಷಣ ಇಲಾಖೆ

ಎಳೆ ಮಕ್ಕಳು ಬೆನ್ನಮೇಲೆ ಕೇಜಿಗಟ್ಟಲೆ ಪುಸ್ತಕದ ಮೂಟೆಯ ಹೊರೆಯನ್ನು ಹೊತ್ತು ಶಾಲೆಗೆ ಹೋಗಬೇಕು, ಆ ಮಕ್ಕಳ ಮುಖದಲ್ಲಿ ಇನ್ನೆಲ್ಲಿ ನಗುವಿರುತ್ತೆ? ಒಂದು ವಿಷಯಕ್ಕೆ ಮೂರು ನೋಟ್​ಬುಕ್, ಜತೆಗೆ ಪಠ್ಯಪುಸ್ತಕಗಳಿರುತ್ತವೆ. ವೇಳಾಪಟ್ಟಿಯಲ್ಲಿ ಕೂಡ ಪ್ರತಿ ದಿನ ಎಲ್ಲ ವಿಷಯಗಳೂ ಇರುತ್ತವೆ. ಶನಿವಾರ ಮಾತ್ರ ಕಡಿಮೆ ಭಾರ. ಹಾಗಾಗಿ ಅಂದು ಮಕ್ಕಳಿಗೆ ಆನಂದ. ಸೋಮವಾರ ಬಂದರೆ ಸಾಕು, ಮತ್ತೆ ಅದೇ ಸ್ಥಿತಿ. ಸಣ್ಣ ಮಕ್ಕಳ ಬೆನ್ನು, ಮೂಳೆ ಬೆಳೆಯುವ ಹಂತದಲ್ಲಿರುತ್ತವೆ. ಭುಜಗಳು ಭಾರವನ್ನು ಹೊತ್ತು ಮಕ್ಕಳು ಬೆನ್ನು ಬಾಗಿಸಿಕೊಂಡು ನಡೆಯುವಂತಾಗಿದೆ. ಆಗ ಉಸಿರಾಟದ ಪ್ರಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಮನೆಗೆ ಬಂದೊಡನೆಯೇ ಬ್ಯಾಗ್, ಲಂಚ್ ಬಾಕ್ಸ್ ಬಿಸಾಕಿ ಅಂಗಾತ ಮಲಗಿ ಬಿಡುತ್ತಾರೆ. ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಂತೆ ಮತ್ತೆ ಟ್ಯೂಷನ್​ಗೆ ಹೋಗಬೇಕು. ಹೀಗಾಗಿ ಶಿಕ್ಷಣ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು.

-ನಾಗವೇಣಿ ಎಸ್.ಕೆ., ದಾವಣಗೆರೆ

 

ಬ್ಯಾಗಿನದೇ ಚಿಂತೆ

ಬ್ಯಾಗ್​ಗಳು ಗಾತ್ರದ ಕಾರಣದಿಂದಾಗಿ ಶತ್ರುವಿನಂತೆ ಭಾಸವಾಗುತ್ತದೆ. ಆದರೂ ಬ್ಯಾಗ್ ಇಲ್ಲದೆ ಶಾಲೆೆಗೆ ಹೋಗುವಂತಿಲ್ಲ. ನಿತ್ಯವೂ ನಾನು ಶಾಲೆಗೆ ಹೊರಡುವಾಗ ಸಂಭ್ರಮಪಟ್ಟರೂ ಬ್ಯಾಗ್ ಎತ್ತಿಕೊಳ್ಳುವಾಗ ಅಮ್ಮನ ಮುಖದಲ್ಲಿ ಕನಿಕರದ ಭಾವ ಎದ್ದು ಕಾಣುತ್ತದೆ. ಸಂಜೆ ಬೆನ್ನು ಬಾಗಿಸಿಕೊಂಡು ಮನೆಗೆ ಬರುವ ನನ್ನನ್ನು ನೋಡಿದರೆ ಪಾಪ ಎನಿಸುತ್ತದೆ ಅಂತ ಅಮ್ಮನೇ ಆಗಾಗ ಹೇಳುತ್ತಿರುತ್ತಾರೆ. ಒಂದು ವಿಷಯಕ್ಕೆ ಮೂರ್ನಾಲ್ಕು ಪುಸ್ತಕಗಳು ಇರುತ್ತದೆ. ಮಕ್ಕಳೂ ವೇಳಾಪಟ್ಟಿಯಂತೆ ಪುಸ್ತಕ ಜೋಡಿಸಿಕೊಂಡಿರುವುದಿಲ್ಲ. ಇದರ ಜೊತೆಗೆ ನೀರಿನ ಬಾಟಲಿ, ಊಟದ ಡಬ್ಬಿಯೂ ಭಾರವನ್ನು ಹೆಚ್ಚಿಸುತ್ತದೆ. ಚಿಕ್ಕ ಮಕ್ಕಳು ಬ್ಯಾಗಿನ ವಿಪರೀತ ಭಾರವನ್ನು ಹೊರುವುದರಿಂದ ಅತಿಯಾದ ಆಯಾಸವಾಗುವುದರ ಜತೆಗೆ ಬೆನ್ನು ನೋವು ಪ್ರಾರಂಭವಾಗುತ್ತದೆ. ವೈದ್ಯರ ಪ್ರಕಾರ ಹೈಸ್ಕೂಲ್ ಮಕ್ಕಳು 5 ಕೆಜಿ ಭಾರ ಮಾತ್ರ ಹೊರಲು ಸಾಧ್ಯ. ಅದಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಭಾರ ಹೊರುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಶ್ಯವಿದ್ದಷ್ಟೇ ಪಠ್ಯಪುಸ್ತಕಗಳಿಡಬೇಕು, ಹೋಂವರ್ಕ್ ಗಳನ್ನು ಸರಿಯಾಗಿ ಯೋಜಿಸಬೇಕು, ಶಾಲೆಯಲ್ಲಿಯೇ ಪ್ರತಿಯೊಬ್ಬ ವಿದ್ಯಾರ್ಥಿಗೆ ಪುಸ್ತಕಗಳನ್ನಿಡುವ ಲಾಕರ್​ಗಳಿಡಬೇಕು. ಮಕ್ಕಳು ನೂರು ಪುಟಗಳಿರುವ ನೋಟ್​ಪುಸ್ತಕ ಬಳಸಬೇಕು. ಪುಸ್ತಕಗಳಿಗೆ ರಟ್ಟುಗಳ ಬದಲಿಗೆ ತೆಳುವಾದ ಬೈಂಡ್ ಹಾಕಬೇಕು. ವಿಶೇಷವಾಗಿ ಇಬುಕ್ ಬಳಸುವಂತೆ ಶಾಲೆಗಳು ಕ್ರಮ ಕೈಗೊಳ್ಳಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಗಮನಹರಿಸಬೇಕು.

-ಇಂಪು ರಾವ್9ನೇ ತರಗತಿ, ಪೊಡಾರ್ ಇಂಟರ್​ನ್ಯಾಷನಲ್ ಸ್ಕೂಲ್ ಶಿವಮೊಗ್ಗ

 

ಇಳಿಕೆಯಾಗಲಿ ಪುಸ್ತಕಗಳ ಸಂಖ್ಯೆ

ಪುಟಾಣಿಗಳ ಭಾರದ ಬ್ಯಾಗ್ ಜತೆಗೆ ಕೈಯಲ್ಲೊಂದು ಬುತ್ತಿ ಚೀಲವನ್ನೂ ಕಾಣಬಹುದು. ಮಕ್ಕಳು ಆ ಬ್ಯಾಗ್​ಗಳನ್ನು ಹೊರಲು ಕಷ್ಟಪಡುವುದನ್ನು ನೋಡಿ ಪಾಲಕರೇ ತಮ್ಮ ಮಕ್ಕಳ ಬ್ಯಾಗ್ ಹೊರುತ್ತಿದ್ದಾರೆ. ಬಸ್​ನಲ್ಲಿ ಮಕ್ಕಳು ಭಾರದ ಬ್ಯಾಗ್ ಹೊತ್ತೇ ನಿಲ್ಲಬೇಕು. ಬಸ್​ನಲ್ಲಿ ಕುಳಿತುಕೊಂಡ ಕೆಲವರು ಈ ಮಕ್ಕಳ ಬ್ಯಾಗ್ ಹಿಡಿದುಕೊಳ್ಳುವುದೂ ಇಲ್ಲ. ವಾರಕ್ಕೊಂದು ದಿನ ‘ನೋ ಬ್ಯಾಗ್ ಡೇ’ ಇಡುವ ಬದಲು ಶಿಕ್ಷಣ ಇಲಾಖೆಯವರು ಪುಸ್ತಕಗಳ ಸಂಖ್ಯೆ ಇಳಿಸಬಹುದಲ್ಲವೇ? ಒಂದು ವಿಷಯಕ್ಕೆ ಎರಡು, ಮೂರು ಪುಸ್ತಕ ಇಡುವ ಬದಲು ಎರಡಕ್ಕೂ ಒಂದೇ ಪುಸ್ತಕ ಇಟ್ಟರೆ ಸ್ವಲ್ಪ ಮಟ್ಟಿನ ಹೊರೆ ಕಡಿಮೆಯಾಗಬಹುದಲ್ಲವೆ?

| ಕೀರ್ತನಾ ಬಿ. ಸುಳ್ಯ

 

ಆಯಾ ದಿನದಂದೇ ಆಯಾ ತರಗತಿ

ಶಾಲೆಗಳಲ್ಲಿ ಸರಿಯಾದ ವೇಳಾಪಟ್ಟಿ ಹಾಕಬೇಕು. ಯಾವುದಾದರೂ ಅವಧಿಯಲ್ಲಿ ಆಯಾ ಶಿಕ್ಷಕರು ಬರದೇ ಇದ್ದರೆ ಅಂದಿನ ದಿನದ ಶಿಕ್ಷಕರೇ ಆ ಅವಧಿಯನ್ನು ತೆಗೆದುಕೊಳ್ಳಬೇಕು. ಮರುದಿನ ತೆಗೆದುಕೊಳ್ಳಬಾರದು. ಏಕೆಂದರೆ ಆಗ ಮಕ್ಕಳು ಎಲ್ಲ ವಿಷಯಗಳ ಪುಸ್ತಕಗಳನ್ನು ತರುವ ಅನಿವಾರ್ಯತೆ ಉಂಟಾಗುತ್ತದೆ. ಆಯಾ ದಿನದ ಶಿಕ್ಷಕರೇ ತಮ್ಮ ಅವಧಿಯ ಪಾಠ ಮಾಡಿಬಿಟ್ಟರೆ ಮಕ್ಕಳಿಗೆ ಅಷ್ಟರಮಟ್ಟಿಗೆ ಪುಸ್ತಕಗಳ ಭಾರ ಕಡಿಮೆ ಆಗುತ್ತದೆ.

-ಟಿ.ಎಂ.ರತ್ನಾ ಶಿಕ್ಷಕಿ, ಕೋಲಾರ

 

ಷಣ್ಮಾಸಿಕಕ್ಕೆ ಅರ್ಧ ಪಠ್ಯ

ಪಠ್ಯಪುಸ್ತಕವನ್ನು ಎರಡು ಸಂಪುಟಗಳಾಗಿ ವಿಭಾಗಿಸಬೇಕು. ಒಂದು ಸಂಪುಟವನ್ನು ಅರ್ಧ ಶೈಕ್ಷಣಿಕ ವರ್ಷಕ್ಕೆ, ಇನ್ನೊಂದು ಸಂಪುಟವನ್ನು ಉಳಿದ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಬೇಕು. ಆಗ ಪುಸ್ತಕದ ಬ್ಯಾಗ್​ನ ಭಾರ ತಂತಾನೇ ಕಡಿಮೆಯಾಗುತ್ತದೆ.

-ಕೆ.ಎಸ್.ಎಸ್.ರಾಘವನ್, ತ್ಯಾಗರಾಜನಗರ, ಬೆಂಗಳೂರು

Leave a Reply

Your email address will not be published. Required fields are marked *

Back To Top