ಬ್ಯಾಂಕ್ ಲಾಕರ್​ನಲ್ಲಿ 6.23 ಕೋಟಿ ಪತ್ತೆ

ಶಿವಮೊಗ್ಗ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಂಬಂಧಿ, ಶಿವಮೊಗ್ಗದ ಶ್ರುತಿ ಮೋಟರ್ಸ್ ಮಾಲೀಕ ಪರಮೇಶ್ವರಪ್ಪ ಅವರ ಬ್ಯಾಂಕ್ ಲಾಕರ್​ನಲ್ಲಿ 6.23 ಕೋಟಿ ರೂ. ಸಿಕ್ಕಿದೆ.

ಈಚಿಗೆ ನಡೆದ ಐಟಿ ದಾಳಿ ಸಂದರ್ಭದಲ್ಲಿ ಬ್ಯಾಂಕ್ ಲಾಕರ್​ನ ಕೀ ಲಭ್ಯವಾಗದ ಕಾರಣ ಲಾಕರ್ ತೆರೆದು ಪರಿಶೀಲನೆ ಮಾಡಲು ಸಾಧ್ಯವಾಗಿರಲಿಲ್ಲ. ಕೀ ಲಭ್ಯವಾದ ನಂತರ ಲಾಕರ್ ತೆರೆದು ಪರಿಶೀಲನೆ ಮಾಡಿದಾಗ 6.23 ಕೋಟಿ ರೂ. ಸಿಕ್ಕಿದೆ ಎಂದು ಗೊತ್ತಾಗಿದೆ.

ಪರಮೇಶ್ ಅವರ ಮಾಲೀಕತ್ವದ ಶ್ರುತಿ ಮೋಟಾರ್ಸ್ ಶೋ ರೂಂ ಮತ್ತು ಮನೆ ಮೇಲೆ ಮಾ.28ರಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅವರ 2 ಬ್ಯಾಂಕ್ ಲಾಕರ್​ಗಳು ದೊರೆತಿದ್ದವು. ಐಟಿ ಅಧಿಕಾರಿಗಳು ಹಣ ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

ಒಂದು ಲಾಕರ್​ನಲ್ಲಿ 4 ಕೋಟಿ ರೂ., ಮತ್ತೊಂದು ಲಾಕರ್​ನಲ್ಲಿ 2.23 ಕೋಟಿ ರೂ. ಪತ್ತೆಯಾಗಿದೆ ಎನ್ನಲಾಗಿದೆ. ಎರಡು ಲಾಕರ್​ಗಳ ವಿಳಾಸ ಪತ್ತೆ ಆದ ನಂತರ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದರು. ಲಾಕರ್​ಗಳನ್ನು ತೆರೆದಾಗ 2,000 ಹಾಗೂ 500 ರೂ. ಮುಖಬೆಲೆಯ ನೋಟುಗಳು ಸಿಕ್ಕಿವೆ. ಗುರುವಾರ ತಡರಾತ್ರಿ ವೇಳೆಗೆ ಸಿಕ್ಕ ಲೆಕ್ಕದ ಪ್ರಕಾರ 6.23 ಕೋಟಿ ರೂ. ಹಣ ಪತ್ತೆಯಾಗಿದೆ.

Leave a Reply

Your email address will not be published. Required fields are marked *