ಬ್ಯಾಂಕ್ ಮುಂದೆ ರೈತರ ಸಾಲು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೊರೆವ ಚಳಿಯನ್ನು ಲೆಕ್ಕಿಸದೆ ರೈತರು ಬೆಳ್ಳಂಬೆಳಗ್ಗೆಯೇ ಬಂದು ಬ್ಯಾಂಕ್ಗಳ ಮುಂದೆ ಸರದಿಯಲ್ಲಿ ನಿಂತುಕೊಳ್ಳುತ್ತಿದ್ದಾರೆ. ಒಂದೆಡೆ ಚಳಿಗೆ ನಡುಗುತ್ತಿದ್ದರೆ, ಇನ್ನೊಂದೆಡೆ ನನಗೆ ಇವತ್ತಿನ ಟೋಕನ್ ಸಿಗುತ್ತದೆಯೋ ಇಲ್ಲವೇ ದುಗುಡು ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ರೈತರು ಬಿಗಿಯುಸಿರು ಹಿಡಿದುಕೊಂಡಿರುವಂತ ಸ್ಥಿತಿ.
ಇದು ನಗರ ಸೇರಿ ಜಿಲ್ಲೆಯ ಎಲ್ಲೆಡೆ ಇರುವ ಪ್ರಮುಖ ಬ್ಯಾಂಕ್ಗಳ ಮುಂದೆ ಅನ್ನದಾತರು ಸರದಿ ಕಳೆದೊಂದು ವಾರದಿಂದ ಕಂಡು ಬರುತ್ತಿದೆ. ರೈತರು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿನ ಸಾಲ ಸರ್ಕಾರ ಮನ್ನಾ ಮಾಡುವುದಾಗಿ ಘೋಷಣೆ ಮಾಡಿ, ಪ್ರಕ್ರಿಯೆ ಆರಂಭಿಸಿದೆ. ಸಾಲದ ಮಾಹಿತಿ ನೀಡಲು ಆಯಾ ಬ್ಯಾಂಕ್ಗಳಲ್ಲಿರುವ ನಮೂನೆ ಅರ್ಜಿ ಭರ್ತಿ ಮಾಡಿಕೊಡಬೇಕಾಗಿದೆ.
ಹೀಗಾಗಿ ರೈತರು ಪಹಣಿ, ಬ್ಯಾಂಕ್ ಪಾಸ್ ಬುಕ್,ಆಧಾರ ಹೀಗೆ ಹಲವು ದಾಖಲೆಗಳೊಂದಿಗೆ ಬೆಳಗ್ಗೆಯೇ ಬ್ಯಾಂಕ್ಗಳ ಮುಂದೆ ಸಾಲುಗಟ್ಟಿ ನಿಂತು ಟೋಕನ್ ಪಡೆದುಕೊಳ್ಳಲು ಹರಸಾಹಸ ಮಾಡುತ್ತಿರುವುದು ಸಾಮಾನ್ಯವಾಗಿದೆ. ದಿನವೊಂದಕ್ಕೆ 40 ರೈತರ ಸಾಲ ಮನ್ನಾ ದಾಖಲೆಗಳನ್ನು ಸಲ್ಲಿಸುವಂತ ರೀತಿಯಲ್ಲಿ ಟೋಕನ್ ನೀಡಲಾಗುತ್ತಿದೆ. ಹೀಗಾಗಿ ಇಂದೆ ತಮ್ಮ ಟೋಕನ್ ಪಡೆದುಕೊಳ್ಳಲು ರೈತರು ಒಡಾಟ ಶುರುವಿಟ್ಟಿದ್ದಾರೆ. ಕೆಲವೊಬ್ಬರು ಎರಡ್ಮೂರು ದಿನಗಳಿಂದ ಹಳ್ಳಿಯಿಂದ ಬಂದು ವಾಪಸ್ಸು ಹೋಗುತ್ತಿದ್ದಾರೆ.
ಹೆಚ್ಚಿನ ಕೌಂಟರ್​ಗಳನ್ನು ಆರಂಭಿಸುವ ಮೂಲಕ ಅನುವು ಮಾಡಿಕೊಡಬೇಕು ಎಂಬುದು ರೈತರ ಬೇಡಿಕೆ. ಅಲ್ಲದೆ ತಹಸೀಲ್ದಾರ್ ಕಚೇರಿಯಲ್ಲಿಯೂ ಪಹಾಣಿ ಸಕಾಲಕ್ಕೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಬ್ಯಾಂಕ್ಗಳಲ್ಲಿ ಸಾಲ ಮನ್ನಾ ವಿವರ ಹಾಗೂ ದಾಖಲೆಗಳನ್ನು ಸಲ್ಲಿಸಲು ಈ ತಿಂಗಳ ಅಂತ್ಯದವರೆಗೂ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ರೈತರು ಅವಸರ ಮಾಡದೆ, ಶಾಂತಿ ಮತ್ತು ಸಮಾಧಾನದಿಂದ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು. ಬ್ಯಾಂಕ್ಗೆ ದಿನಕ್ಕೆ ಬಂದಷ್ಟು ರೈತರಿಗೆ ಟೋಕನ್ ನೀಡಲು ಕೌಂಟರ್ ಕಾರ್ಯ ನಿರ್ವಹಿಸುತ್ತದೆ. ಆದರೆ, ಒಂದು ದಿನಾಂಕವನ್ನು 40 ರೈತರಿಗೆ ಮಾತ್ರ ನೀಡಲಾಗುತ್ತದೆ. ಹೀಗಾಗಿ ರೈತರು ಯಾವುದೇ ಗೊಂದಲಕ್ಕೊಳಗಾಗಬಾರದು.

| ಆರ್.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ