ಬ್ಯಾಂಕ್ ಕಳ್ಳರಿಗೆ 5 ವರ್ಷ ಕಠಿಣ ಶಿಕ್ಷೆ

ಕಾರವಾರ: ತಾಲೂಕಿನ ಅಮದಳ್ಳಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ನಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿ ಬಿದ್ದ ಮೂವರು ಅಂತಾರಾಜ್ಯ ಕಳ್ಳರಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 30 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.

2015ರ ಅಕ್ಟೋಬರ್ 11 ರಂದು ಅಮದಳ್ಳಿಯ ಕೆವಿಜಿ ಬ್ಯಾಂಕ್​ನ ಶಟರ್ ಮುರಿದ 8 ಜನರು ನಗದು ಹಾಗೂ ಹಣ ದೋಚಿದ್ದರು. ಬ್ಯಾಂಕ್​ನ ಸಿಸಿ ಕ್ಯಾಮರಾಗಳನ್ನು ನಾಶ ಮಾಡಿದ್ದರು. ವಾಪಸಾಗುವಾಗ ಗ್ರಾಮಸ್ಥರು ಅಡ್ಡಗಟ್ಟಿದ್ದರಿಂದ ಮೂವರು ಓಡುವ ಬರದಲ್ಲಿ ಬಾವಿಗೆ ಬಿದ್ದು ಸಿಕ್ಕಿ ಬಿದ್ದಿದ್ದರು. ಇನ್ನು ಐವರು ವಾಹನದಲ್ಲಿ ಪರಾರಿಯಾಗಿದ್ದರು. ಕೆವಿಜಿ ಬ್ಯಾಂಕ್ ಮ್ಯಾನೇಜರ್ ಶಿಲ್ಪಾ ಮಹಾಲೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.

ಸಿಪಿಐ ಶರಣಗೌಡ ಪಾಟೀಲ್ ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರಾದ ಟಿ.ಜಿ.ಶಿವಶಂಕರೆಗೌಡ ಅವರು ಆರ್. ಮುರುಗನ್, ಮಣಿಕಂಠನ್ ಮತ್ತು ಸಂಪತ್ ಕುಮಾರ್ ಎಂಬ ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡದ ಹಣದಲ್ಲಿ 50 ಸಾವಿರ ರೂ.ಗಳನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ಗೆ ಪರಿಹಾರವಾಗಿ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

ಮೊದಲ ಬಾರಿ ಶಿಕ್ಷೆ

ಪ್ರಮುಖ ಆರೋಪಿ ಮುರುಗನ್ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯಲ್ಲಿ 70 ಲಕ್ಷ ರೂ. ಮೌಲ್ಯದ ಮನೆ, 10 ಎಕರೆ ಹೊಲ, ಬೆಂಗಳೂರಿನ ಎಚ್. ಗೊಲ್ಲರಹಳ್ಳಿಯಲ್ಲಿ 1.2 ಕೋಟಿ ರೂ. ಮೌಲ್ಯದ 4 ಸೈಟ್ ಹೊಂದಿದ್ದ. ಛತ್ತೀಸ್​ಗಡದ ಮಣಿಕಂಠನ್ ಹಾಗೂ ಸಂಪತ್​ಕುಮಾರ್ ಜೊತೆ ಸೇರಿ ಅಮವಾಸ್ಯೆಯ ಸಂದರ್ಭದಲ್ಲಿ ಬ್ಯಾಂಕ್ ಜ್ಯುವೆಲರಿ ಅಂಗಡಿಗಳನ್ನು ಲೂಟಿ ಮಾಡುವುದು ಅವನ ವೃತ್ತಿಯಾಗಿತ್ತು. ಈ ಸಂಬಂಧ ಅವರ ವಿರುದ್ಧ ಹಾಸನ, ಬೆಂಗಳೂರು, ಕೇರಳ, ತಮಿಳುನಾಡಿನಲ್ಲಿ ಪ್ರಕರಣವಿತ್ತು. ಆದರೆ, ಯಾರೂ ಆತನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಅಮದಳ್ಳಿ ನಾಗರಿಕರ ಸಾಹಸದಿಂದ ಕಳ್ಳರು ಸಿಕ್ಕಿ ಬಿದ್ದಿದ್ದರು. ಅವರ ಹಿಂದಿನ ಬೃಹತ್ ಜಾಲವನ್ನು ಸಿಪಿಐ ಶರಣಗೌಡ ಬೇಧಿಸಿದ್ದರು. ಬೆಂಗಳೂರಿನ ಸೈಟ್​ನಲ್ಲಿ ಹೂತಿಟ್ಟಿದ್ದ 51 ಲಕ್ಷ ರೂ. ಮೌಲ್ಯದ 2.43 ಕೆಜಿ ಬಂಗಾರ ವಶಕ್ಕೆ ಪಡೆದಿದ್ದರು. ಕಳ್ಳತನ ಮಾಡಿ ಸದಾ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳಿಗೆ ಮೊದಲ ಬಾರಿ ಶಿಕ್ಷೆಯಾಗಿದೆ. ಇನ್ನೂ ಹಾಸನ ಸೇರಿ ಇತರ ಹಲವು ಪ್ರಕರಣಗಳಲ್ಲಿ ಶಿಕ್ಷೆ ಬಾಕಿಯಿದೆ.

ಗ್ರಾಮಸ್ಥರ ಸಾಹಸ

ಬ್ಯಾಂಕ್​ಗೆ ಕಳ್ಳರು ನುಗ್ಗಿದ್ದಾರೆ ಎಂಬ ಸುದ್ದಿ ಕೇಳಿ ಮಧ್ಯರಾತ್ರಿ ಎದ್ದು ಬಂದು ಊರಿನ ಜನರನ್ನು ಸೇರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪರೇಶ ದೇವಸ್ಕರ್ ನೆರವಾಗಿದ್ದರು. ಅವರೇ ಪ್ರಮುಖ ಸಾಕ್ಷಿಯಾಗಿದ್ದರು. ಅವರಿಗೆ ನ್ಯಾಯಾಲಯ 5 ಸಾವಿರ ರೂಪಾಯಿ ಬಹುಮಾನ ಘೊಷಿಸಿದೆ.

Leave a Reply

Your email address will not be published. Required fields are marked *