ಬ್ಯಾಂಕ್ ಎದುರು ಚಿತ್ರನಟನ ಪ್ರತಿಭಟನೆ

ಶಿವಮೊಗ್ಗ: ಸಾಲ ನೀಡದೆ ವಂಚಿಸಿದ ಆರೋಪ ಎದುರಿಸುತ್ತಿರುವ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರ ವೇದಿಕೆ ನ್ಯಾಯಾಲಯದ ಆದೇಶಕ್ಕೂ ಮನ್ನಣೆ ನೀಡದ ಹಿನ್ನೆಲೆಯಲ್ಲಿ ನೊಂದ ಚಿತ್ರನಟನೊಬ್ಬ ಶುಕ್ರವಾರ ತಾಯಿ ಜತೆ ಸೇರಿ ತುಂಗಾನಗರದ ಬ್ಯಾಂಕ್ ಶಾಖೆ ಎದುರು ಪ್ರತಿಭಟನೆ ನಡೆಸಿದರು.

ಹೊಳಲೂರಿನ ಸಂತೋಷ್ ಮತ್ತು ಆತನ ತಾಯಿ ದಾಕ್ಷಾಯಣಮ್ಮ ಬ್ಯಾಂಕ್ ಎದುರು ಪ್ರತಿಭಟಿಸಿದವರು. ನಟ ಸಂತೋಷ್ 2016ರಲ್ಲಿ ದಿನಸಿ ಅಂಗಡಿ ಅಭಿವೃದ್ಧಿಗೆ ಶಿವಮೊಗ್ಗದ ತುಂಗಾನಗರ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಅಡಮಾನ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಇದಕ್ಕಾಗಿ 2 ಮನೆ ಅಡವಿಟ್ಟದ್ದರು. ಸಾಲ ಮಂಜೂರಾದರೂ ಸಂತೋಷ್ ಖಾತೆಗೆ 12 ಲಕ್ಷ ರೂ. ಪಾವತಿಸದೆ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಪ್ರತಿಭಾ ಬೇರೆ ನಕಲಿ ಖಾತೆಗಳಿಗೆ ವರ್ಗಾಯಿಸಿದ ಬಗ್ಗೆ ಆರೋಪ ಕೇಳಿಬಂದಿತ್ತು.

ಈ ನಡುವೆ ಸಾಲ ಪಡೆಯದಿದ್ದರೂ ಕಂತು ಕಟ್ಟುವಂತೆ ಪ್ರತಿ ತಿಂಗಳು ನೋಟಿಸ್ ಬರುತ್ತಿದ್ದರಿಂದ ಬ್ಯಾಂಕ್ ವಿರುದ್ಧ ಸಂತೋಷ್, ಬಿಡಿಗಾಸು ಹಣ ನೀಡದೆ ಸಾಲ ಹೇಗೆ ತೀರಿಸಲಿ ಎಂದು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಬ್ಯಾಂಕ್​ನ ಲೋಪ ಎತ್ತಿಹಿಡಿದಿದ್ದ ಗ್ರಾಹಕರ ವೇದಿಕೆ ನ್ಯಾಯಾಲಯ ಸಂತೋಷ್​ಗೆ ಸಾಲದ ಮೊತ್ತವನ್ನು ಬಡ್ಡಿ ಸೇರಿ ಏಪ್ರಿಲ್ 18ರೊಳಗೆ ಹಣ ಪಾವತಿಸುವಂತೆ ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶಕ್ಕೆ ಕ್ಯಾರೇ ಎನ್ನದ ಸಿಂಡಿಕೇಟ್ ಬ್ಯಾಂಕ್ ಸಾಲ ಖಾತೆಗೆ ಜಮಾ ಮಾಡಲು ಹಿಂದೇಟು ಹಾಕುತ್ತಿದೆ. ಆದ್ದರಿಂದ ಬ್ಯಾಂಕ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿರುವ ಸಂತೋಷ್ ಸಿಂಡಿಕೇಟ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.

ಪಂಟರು, ಮಲ್ಲಿಕಾರ್ಜುನ, ಬಂಡೆ ಸಿನಿಮಾದ ನಾಯಕ ನಟ ಹಾಗೂ ಧಾರಾವಾಹಿಗಳಾದ ಕೃಷ್ಣ ರುಕ್ಮಿಣಿ, ಆಕಾಶದೀಪ, ಅಮ್ಮ ನಿನಗಾಗಿ, ಚುಕ್ಕಿ, ಭಾಗ್ಯವಂತರು, ಜೋಕಾಲಿಯಲ್ಲಿ ಸಂತೋಷ್ ನಟಿಸಿದ್ದಾರೆ.

Leave a Reply

Your email address will not be published. Required fields are marked *