ಬೌದ್ಧರು ಕಾಣೆಯಾಗಿದ್ದು ಹೇಗಿರಬಹುದು ಗೊತ್ತಾ?

ವರ್ಣಪದ್ಧತಿಯನ್ನು ಧಿಕ್ಕರಿಸುವ, ಒಬ್ಬರನ್ನು ತೆಗಳಿ ಮತ್ತೊಬ್ಬರಿಗೆ ಹತ್ತಿರವಾಗುವ ಧಾವಂತದಲ್ಲಿ ನಮ್ಮ ಇತಿಹಾಸ ಸಂಶೋಧನೆ ದಾರಿತಪ್ಪಿದ್ದು ಹೌದು. ಕಾಲಕ್ರಮದಲ್ಲಿ ಅಗತ್ಯಾನುಸಾರ ಇತಿಹಾಸವನ್ನು ಬದಲಿಸುವ ಇಲ್ಲವೇ ತಿರುಚುವ ಯತ್ನಗಳೂ ಶುರುವಾದವು. ಅದಕ್ಕೆ ಬೇಕಾದ ಬೋಧನೆಗೆ ವಿಶ್ವವಿದ್ಯಾಲಯಗಳು, ಪ್ರೊಫೆಸರುಗಳೂ ಸೃಷ್ಟಿಯಾದರು, ಸಮಾಜದಲ್ಲಿ ಕಂದಕ ನಿರ್ವಿುಸಿದರು.

ಎಂದಾದರೊಮ್ಮೆ ಜಗತ್ತಿನ ಇತಿಹಾಸವನ್ನು ತಿರುವಿಹಾಕಿದಾಗ ಭಾರತದ ಕುರಿತಂತೆ ಅಚ್ಚರಿಯಾಗುವುದು ಬಲು ಸಹಜ. ಪ್ರತಿಯೊಂದು ರಾಷ್ಟ್ರವೂ ಮತ್ತೊಂದು ರಾಷ್ಟ್ರದ ಆಕ್ರಮಣಕ್ಕೆ ಒಳಗಾಗಿ ಪೂರ್ತಿ ನಾಶವಾಗಿದೆ. ಮೂಲಸ್ವರೂಪವನ್ನೇ ಕಳೆದುಕೊಂಡು ವಿರೂಪಗೊಂಡಿದೆ. ಅಲ್ಲಿನ ಧರ್ಮ-ಸಂಸ್ಕೃತಿಗಳು ಉಧ್ವಸ್ತಗೊಂಡಿವೆ. ಆದರೆ ಭಾರತ ಮಾತ್ರ ಹಾಗಾಗಲಿಲ್ಲ. ಗ್ರೀಕರಿಂದ ಹಿಡಿದು ಇಂಗ್ಲಿಷರವರೆಗೆ, ಹೂಣರಿಂದ ಹಿಡಿದು ಮೊಘಲರವರೆಗೆ ಕ್ರೂರಿಗಳು, ರಕ್ತಪಿಪಾಸುಗಳು, ಕುತಂತ್ರಿಗಳು ಎಲ್ಲರೂ ಆಕ್ರಮಣಮಾಡಿ ಇಲ್ಲಿನ ಗಡಿಯನ್ನು ಬದಲು ಮಾಡಿದರು. ಸಾರಾಸಗಟಾಗಿ ಜನರನ್ನು ಕೊಂದು ಬಿಸಾಡಿದರು. ಬಲವಂತದ ಮತಾಂತರ ಮಾಡಿದರು. ಒಂದೆರಡಲ್ಲ ಸಾವಿರ ವರ್ಷಗಳಿಗೂ ಮಿಕ್ಕಿದ ಕಿರಿಕಿರಿ ಅದು. ಅಷ್ಟಾದರೂ ಇಲ್ಲಿನ ಧರ್ಮ-ಸಂಸ್ಕೃತಿಗಳು ರೂಪಾಂತರ ಹೊಂದಿದವೇ ಹೊರತು ನಾಶವಾಗಲಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳುತ್ತ ಮೂಲವನ್ನು ನಾಶವಾಗದಂತೆ ಕಾಪಾಡಿಕೊಳ್ಳುವ ಸ್ಥಿತಿಸ್ಥಾಪಕ ಗುಣ ಇಲ್ಲಿನ ಸಂಸ್ಕೃತಿಗೆ ಸಿದ್ಧಿಸಿದೆ.

ವೇದಗಳ ನಿರಂತರ ಹರಿವು: ಯಾವುದಾದರೊಂದು ಶ್ರೇಷ್ಠ ಸಿದ್ಧಾಂತ ದೀರ್ಘಕಾಲ ಬದುಕಲು ಎರಡು ಸಂಗತಿಗಳು ಬಲುಮುಖ್ಯ. ಮೊದಲನೆಯದು ಬಲು ಸಾಂದ್ರವಾದ ಮೂಲಸಿದ್ಧಾಂತ ವಸ್ತು. ಎರಡನೆಯದು ಅದನ್ನು ದೀರ್ಘಕಾಲ ಉಳಿಸಬಲ್ಲ, ಹರಡಿಸಬಲ್ಲ ಸಂಘಟನಾತ್ಮಕ ವ್ಯವಸ್ಥೆ. ಭಾರತದ ವೈಶಿಷ್ಟ್ಯೇ ಅದು. ಋಷಿ-ಮುನಿಗಳು ಮೂಲಸಿದ್ಧಾಂತವನ್ನು ಸಾರ್ವಕಾಲಿಕ ಸತ್ಯವಾಗುವಂತೆ ರೂಪಿಸಿದರು. ಅದು ಜನಮಾನಸದಲ್ಲಿ ಆಳವಾಗಿ ಬೇರೂರುವಂತೆ ಮಾಡಲು ವರ್ಣ, ಆಶ್ರಮ ಇವೆಲ್ಲವೂ ಸಂಘಟನಾತ್ಮಕ ವ್ಯವಸ್ಥೆಯಾಗಿ ರಚನೆಯಾದವು. ಬೇರೆಲ್ಲ ಅಧ್ಯಯನ ಬಿಡಿ, ಋಷಿವಾಕ್ಯಗಳಾದ ವೇದಗಳನ್ನುಳಿಸಲು ಭಾರತೀಯ ಪರಂಪರೆ ಮಾಡಿಕೊಂಡ ಸಿದ್ಧತೆಗಳನ್ನು ನೀವು ಗಮನಿಸಿದರೆ ಅವಾಕ್ಕಾಗುವಿರಿ. ಇಲ್ಲವಾದಲ್ಲಿ ಜಾಗತಿಕ ಇತಿಹಾಸದ ಅತ್ಯಂತ ಪ್ರಾಚೀನ ಸಾಹಿತ್ಯವಾದ ವೇದಗಳು ಇಂದಿಗೂ ಹೀಗೆಯೇ ಉಳಿದು ಬಂದಿರುವುದಾದರೂ ಹೇಗೆ? ಬರಹವೇ ಇಲ್ಲದಿದ್ದ ಕಾಲದಿಂದ ಕಂಪ್ಯೂಟರ್ ಕೀಲಿಮಣೆಯ ಯುಗದವರೆಗೆ ನಾಲ್ಕೂ ವೇದಗಳು ಅನೂಚಾನವಾಗಿ ಹರಿದುಬಂದಿತಲ್ಲ ಅದರ ನಿರಂತರ ಪ್ರವಾಹದ ಹರಿವನ್ನು ಕುತೂಹಲಕ್ಕಾದರೂ ಗಮನಿಸೋದು ಬೇಡವೇ?

ಬ್ರಾಹ್ಮಣವರ್ಣ ಈ ಪ್ರವಾಹದ ನಿರಂತರತೆಗೆ ಬಲುದೊಡ್ಡ ಕೊಡುಗೆ ಕೊಟ್ಟಿದೆ. ಅದನ್ನು ಅಂಬೇಡ್ಕರರೂ ಅನುಮೋದಿಸುತ್ತಾರೆ. ವೇದದ ಒಂದೊಂದು ಶಾಖೆಗೇ ಮೀಸಲಾದ ಒಂದೊಂದು ಕುಟುಂಬ, ವೇದಶಾಖೆಯನ್ನು ಬಾಯಿಪಾಠ ಮಾಡಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅವರ ಕೈಂಕರ್ಯ ಇವೆಲ್ಲವೂ ವಿಶಿಷ್ಟವಾದವು. ಭಂಡಾರಕರರ ‘ಇಂಡಿಯನ್ ಆಂಟಿಕ್ವೆರಿ’ಯನ್ನು ಉಲ್ಲೇಖಿಸುವ ಅಂಬೇಡ್ಕರ್, ಮುಂಬಯಿಯಲ್ಲಿ ತೆಲಂಗಾಣದ ಬ್ರಾಹ್ಮಣನೊಬ್ಬ ಅಧ್ಯಯನ ಮಾಡಿದ್ದನ್ನು ಒಪ್ಪಿಸಿ, ದಕ್ಷಿಣೆ ಕೊಂಡೊಯ್ಯುವ ಪರಿಪಾಠವನ್ನು ನೆನಪಿಸುತ್ತಾರೆ. ಹೀಗೆ ಸನಾತನವಾದುದನ್ನು ಉಳಿಸಿದವರೆಂಬ ಕಾರಣಕ್ಕಾಗಿಯೇ ಬ್ರಾಹ್ಮಣವರ್ಣಕ್ಕೆ ಬಲು ಗೌರವವಿತ್ತು ಅಷ್ಟೇ. ಸುಮ್ಮನೆ ತುಲನೆಗೆಂದು ಹೇಳುತ್ತೇನೆ. ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡಕೊಂಡ ವ್ಯಕ್ತಿಗೆ ಸಮಾಜದಲ್ಲಿ ಗೌರವವಿದ್ದಂತೆ ಅದು. ಅವರು ಸಂಶೋಧನೆ ಮತ್ತು ಜ್ಞಾನಪ್ರಸಾರದಲ್ಲಿ ನಿರತರಾಗಿರುತ್ತಾರೆಂಬ ನಂಬಿಕೆಗೆ ಸಿಗುವ ಗೌರವ ಅದು. ಅವರಲ್ಲಿ ಕೆಲವರು ಮುಂದೆ ಬುದ್ಧಿಜೀವಿಗಳಾಗಿ ಎಲ್ಲದರಲ್ಲೂ ಮೂಗು ತೂರಿಸುತ್ತಾ ಸಮಾಜದ ಸ್ವಾಸ್ಥ್ಯ ಕೆಡಿಸಲಾರಂಭಿಸಿದರೆ ಕೊನೆಗೊಮ್ಮೆ ಅವರನ್ನು ಧಿಕ್ಕರಿಸಿ ಮೂಲೆಗುಂಪು ಮಾಡುವ ಪರಿಸ್ಥಿತಿ ಬರುತ್ತಲ್ಲ ಹಾಗೆಯೇ ಇಂದು ಕೂಡ ವರ್ಣಾಶ್ರಮ ಗೊಂದಲದಲ್ಲಿದೆ! ಹಾಗಂತ ಡಾಕ್ಟರೇಟ್ ಪಡೆದವರೆಲ್ಲ ಕೆಡುಕರೇ, ಬುದ್ಧಿಜೀವಿಗಳೇ? ಹಾಗೇನಿಲ್ಲ. ಶಿಥಿಲತೆ ಬಂದಿರಬಹುದು, ಆದರೆ ಸಾರಾಸಗಟಾಗಿ ಎಲ್ಲವನ್ನೂ ತಳ್ಳಿಹಾಕುವಂತಿಲ್ಲ.

ನಿಷೇಧಾತ್ಮಕವಲ್ಲದ ದೃಷ್ಟಿಕೋನ: ಬಿಡಿ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ಹೀಗೆ ನಾಲ್ಕು ಆಶ್ರಮಗಳನ್ನು ಮಾಡಿದ್ದರೂ ಸ್ಥೂಲವಾಗಿ ಎರಡೇ ಗುಂಪು. ಒಂದು ಗೃಹಸ್ಥರದ್ದು ಮತ್ತೊಂದು ತ್ಯಾಗಿಗಳದ್ದು. ಎರಡೂ ಗುಂಪಿನ ಜನ ಧಾರ್ವಿುಕ ವಿಧಿ-ವಿಧಾನಗಳನ್ನು ಆಚರಿಸಲೇಬೇಕು. ಗೃಹಸ್ಥರು ಜೀವನೋಪಾಯಕ್ಕಾಗಿ ಲೌಕಿಕ ಉದ್ಯೋಗವನ್ನು ಅವಲಂಬಿಸುತ್ತಾರೆ, ತ್ಯಾಗಿಗಳು ಅಧ್ಯಯನ ಅಧ್ಯಾಪನದಲ್ಲಿ ಕಾಲಕಳೆದು ಪರಂಪರೆಯಿಂದ ಹರಿದುಬಂದ ಆಚರಣೆಗಳನ್ನು ಸಮಾಜಕ್ಕೆ ವಿವರಿಸುತ್ತಾರೆ. ಧರ್ಮಮಾರ್ಗದಿಂದ ವಿಮುಖರಾಗದಂತೆ ನೋಡಿಕೊಳ್ಳುತ್ತಾರೆ. ಈ ವ್ಯವಸ್ಥೆ ಯಾವುದನ್ನೂ ನಿಷೇಧಾತ್ಮಕವಾಗಿ ಕಾಣಲಿಲ್ಲ; ಭಗವಂತನ ಸೃಷ್ಟಿಕಾರ್ಯಕ್ಕೆ ಪೂರಕವಾಗಿ ನಿಲ್ಲುವ ಗೃಹಸ್ಥರನ್ನು ಮತ್ತು ಪರಬ್ರಹ್ಮದ ಮೂಲಸ್ವರೂಪವನ್ನು ಎಲ್ಲರಿಗೂ ತಿಳಿಸುವ ಹೊಣೆಹೊತ್ತ ತ್ಯಾಗಿಗಳನ್ನು ಸಮಸಮವಾಗಿ ತಯಾರುಮಾಡಿತು. ಹಾಗಂತ ಗೃಹಸ್ಥರಿಗೆ ಧರ್ಮಕಾರ್ಯದ ಜವಾಬ್ದಾರಿ ಇಲ್ಲವಾಗಿಸಲಿಲ್ಲ, ತ್ಯಾಗಿಗಳಷ್ಟು ಇರಲಿಲ್ಲ ಅಷ್ಟೇ. ಹೀಗಾಗಿ ಅಗತ್ಯ ಬಂದಾಗ ಧರ್ಮರಕ್ಷಣೆಯ ಹೊಣೆ ಗೃಹಸ್ಥರ ಹೆಗಲಿಗೇ ಬಿದ್ದರೂ ಅವರು ಅದನ್ನು ಹೊರಲು ಸಿದ್ಧವಾಗಿರುವಂತೆ ರೂಪುಗೊಂಡಿತ್ತು ವ್ಯವಸ್ಥೆ.

ಅದಕ್ಕೇ ಅಶೋಕನ ಕಾಲದಲ್ಲಿ ಗೌರವ-ಆದರಗಳು ಕಡಿಮೆಯಾಗಿ ಅನೇಕ ತರುಣರು ಬೌದ್ಧಮತಕ್ಕೆ ವಲಸೆ ಹೋಗುವಾಗಲೂ ಆರ್ಯಧರ್ಮ ನಷ್ಟವಾಗಲಿಲ್ಲ. ತ್ಯಾಗಿಗಳು ಧರ್ಮವನ್ನುಳಿಸಲು ನಿರಂತರ ಪ್ರಚಾರದಲ್ಲಿ ನಿರತವಾಗಿದ್ದರು. ಗೃಹಸ್ಥರೂ ಧರ್ಮಕಾರ್ಯವನ್ನು ಮಾಡುತ್ತಾ ಮುಂದಿನ ದಿನಗಳಿಗಾಗಿ ಕಾಪಾಡಿಡುವ ಹೊಣೆಹೊತ್ತರು. ಪುಷ್ಯಮಿತ್ರ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದೊಡನೆ ಇವರೆಲ್ಲರಿಗೆ ಆನೆಬಲ ಬಂದಂತಾಗಿ ತಮ್ಮ ಧರ್ಮ ಪುನರ್ಸ್ಥಾಪನೆಯ ಕೆಲಸ ತೀವ್ರಗೊಳಿಸಿದರು. ಅಂಬೇಡ್ಕರರು ಇದಕ್ಕೆ ಪುಷ್ಟಿ ನೀಡುತ್ತಾ ‘ಬ್ರಾಹ್ಮಣ ಧರ್ಮದ ವ್ಯವಸ್ಥೆಯಲ್ಲಿ ಪತಿತನಲ್ಲದ ಪ್ರತಿಯೊಬ್ಬ ಬ್ರಾಹ್ಮಣನೂ ಪುರೋಹಿತನಾಗಲು ಸಮರ್ಥನಾಗಿದ್ದಾನೆ. ಭಿಕ್ಷುಕ ಪ್ರತ್ಯಕ್ಷ ಪುರೋಹಿತನಾದರೆ, ಗೃಹಸ್ಥ ಗುಪ್ತ ಪುರೋಹಿತ. ಎಲ್ಲಾ ಬ್ರಾಹ್ಮಣರು ಬ್ರಾಹ್ಮಣ ಧರ್ಮದ ಪೌರೋಹಿತ್ಯ ಸೇನೆಯನ್ನು ಸೇರಿಕೊಳ್ಳಬಹುದು ಮತ್ತು ಪೌರೋಹಿತ್ಯ ಮಾಡಲು ಬ್ರಾಹ್ಮಣನಿಗೆ ಯಾವುದೇ ತರಬೇತಿ ಅಥವಾ ದೀಕ್ಷೆಯ ಅವಶ್ಯಕತೆ ಇಲ್ಲ. ಇದು ಬೌದ್ಧರಲ್ಲಿ ಸಾಧ್ಯವಿಲ್ಲ. ದೀಕ್ಷೆ ಪಡೆದುಕೊಂಡವ ಮಾತ್ರ ಪುರೋಹಿತನಾಗಬಲ್ಲ’ ಎನ್ನುತ್ತಾರೆ. ಅವರ ಅಂತರಂಗ ಬಲು ಸ್ಪಷ್ಟ. ಬ್ರಾಹ್ಮಣ ವರ್ಣ ಸಂಘಟನಾತ್ಮಕವಾಗಿ ಸವಾಲುಗಳನ್ನು ಎದುರಿಸಿ ನಿಲ್ಲುವ ಛಾತಿಯನ್ನು ಪಡೆದುಕೊಂಡಿದೆ ಅಂತ. ಬೌದ್ಧರಲ್ಲಿ ಇದಕ್ಕೆ ಕೊರತೆ ಇತ್ತು. ಹೀಗಾಗಿಯೇ ಕಾಲಕ್ರಮದಲ್ಲಿ ಅವರು ಭಾರತದಿಂದಲೇ ಕಾಲ್ತೆಗೆಯಬೇಕಾಯ್ತು.

ಶಂಕರರ ಮಾರ್ಗದರ್ಶನ: ವಾಸ್ತವವಾಗಿ ಬೌದ್ಧಪಂಥದ ನಾಶಕ್ಕೆ ಬ್ರಾಹ್ಮಣರ ಕ್ರೌರ್ಯವೇ ಕಾರಣವೆಂದು ಅನೇಕರು ಇಂದಿಗೂ ವಾದಿಸುತ್ತಾರೆ. ಶಕರು-ಹೂಣರನ್ನೇ ಜೀರ್ಣಿಸಿಕೊಂಡ ಭಾರತಕ್ಕೆ ಬೌದ್ಧರನ್ನು ಬೆದರಿಸಿ ಓಡಿಸಬೇಕಾದ ಪರಿಸ್ಥಿತಿ ಬಂದಿತೆಂದು ಊಹಿಸುವುದೂ ಕಷ್ಟ. ಶಂಕರಾಚಾರ್ಯರು ಅನೇಕ ಬೌದ್ಧಮತೀಯರನ್ನು ವಾದದಲ್ಲಿ ಸೋಲಿಸಿ ತಮ್ಮ ಅನುಯಾಯಿಗಳನ್ನಾಗಿಸಿಕೊಂಡರೆಂಬುದನ್ನು, ಆರ್ಯಧರ್ಮಕ್ಕೆ ರಾಜಾಶ್ರಯ ಕೊಡಿಸಿದರೆಂಬುದನ್ನು ಒಪ್ಪಬಹುದೇ ಹೊರತು ಸಾರಾಸಗಟಾಗಿ ಬೌದ್ಧರನ್ನು ಕೊಲ್ಲಿಸಿದರೆಂದಲ್ಲ. ಹಾಗೆ ನೋಡಿದರೆ, ಬುದ್ಧನ ಕಾಲದಲ್ಲಿಯೂ ಮತ್ತು ನಂತರವೂ ಮೂಲಧರ್ಮವನ್ನು ಬಿಟ್ಟು ಬೌದ್ಧಮತಕ್ಕೆ ಮತಾಂತರಗೊಂಡವರ ಸಂಖ್ಯೆ ಬಲು ದೊಡ್ಡದೇ ಇತ್ತು. ಅಶೋಕನ ಕಾಲದವರೆಗೂ ಅಗಾಧವಾದ ರಾಜಾಶ್ರಯ ಬೌದ್ಧಮತಕ್ಕೆ ಇದ್ದೇ ಇತ್ತು. ಈ ಹೊತ್ತಿನಲ್ಲಿಯೇ ಅದು ಜಗದ್ವ್ಯಾಪಿಯಾಗಿ ಬೆಳೆದದ್ದು ಕೂಡ. ಹಾಗೆಂದ ಮಾತ್ರಕ್ಕೆ ಬೌದ್ಧರು ಇತರರನ್ನು ಕೊಂದು ಮೆರೆದರು ಎನ್ನುವಂತಿಲ್ಲ. ಆದರೆ ಆ ಹೊತ್ತಿನಲ್ಲಿ ಗುಪ್ತವಾಹಿನಿಯಾಗಿದ್ದ ಆರ್ಯಧರ್ಮ ಸೂಕ್ತ ಪರಿಸರ ದೊರೆತಾಗ ಮತ್ತೆ ವೈಭವಶಾಲಿಯಾಗಿ ಬೆಳೆದುನಿಂತಿತು. ಗುಪ್ತವಾಗಿದ್ದಾಗ ಉಂಟಾದ ಶಿಥಿಲತೆಯನ್ನು ಹೋಗಲಾಡಿಸಲು ಶಂಕರರಂತಹವರು ಮಾರ್ಗದರ್ಶನ ಮಾಡಿದರು. ಬೌದ್ಧಮತಕ್ಕೆ ಇದರ ಕೊರತೆ ಇತ್ತು. ಶಂಕರರ ಶಕ್ತಿ ಮತ್ತು ಸ್ಪೂರ್ತಿಯಿಂದಾಗಿ ಜನಮಾನಸ ಜಾಗೃತವಾಯಿತು. ರಾಜಾಶ್ರಯ ಮತ್ತೆ ದೊರೆಯಿತು. ಮತ್ತೆ ಆರ್ಯಧರ್ಮ ಬೆಳಗಲಾರಂಭಿಸಿತು, ಅಷ್ಟೇ. ಆದರೆ ನಂತರ ಬಂದ ಇತಿಹಾಸಕಾರರು ಮಾತ್ರ ಬೌದ್ಧಧರ್ಮದ ಅವನತಿಗೆ ಹಿಂದು ರಾಜರ ಉಪಟಳಗಳು, ಆಕ್ರಮಣಕಾರಿ ಮನೋಭಾವಗಳೇ ಕಾರಣವಾದವೆಂದು ವಾದಿಸುತ್ತಾರೆ.

ಸ್ವತಃ ಅಂಬೇಡ್ಕರ್ ತಮ್ಮ ಕೃತಿಯಲ್ಲಿ ‘ಭಾರತದಲ್ಲಿ ಬುದ್ಧಧರ್ಮದ ಪತನಕ್ಕೆ ಮುಸಲ್ಮಾನರ ದಾಳಿಗಳು ಕಾರಣವಾಗಿವೆಯೆಂಬುದರಲ್ಲಿ ಏನೂ ಸಂಶಯವಿಲ’ ಎಂದಿದ್ದಾರೆ. ಅಫ್ಘಾನಿಸ್ತಾನದ ಬಾಮಿಯಾನ್ ಬುದ್ಧನ ಬೃಹತ್ ಮೂರ್ತಿಯನ್ನು ನಾಶಮಾಡಿದ ಘಟನೆಯನ್ನು ನೆನಪಿಸಿಕೊಳ್ಳಿ. ಇಲ್ಲಿನ ಬೌದ್ಧರಿಗೆ ಬ್ರಾಹ್ಮಣ ವರ್ಣದೊಂದಿಗೆ ಗಲಾಟೆ ಇದ್ದಿರಬಹುದು. ಆದರೆ ಆಕ್ರಮಣಕಾರಿಯಾಗಿ ಬಂದವನಿಗೆ ಹಿಂದು-ಬೌದ್ಧ ಎರಡೂ ಭಾರತದ ಮೂಲದಿಂದಲೇ ಬಂದವಾದ್ದರಿಂದ ಆತ ಮೊದಲು ಬೌದ್ಧಮತದ ಮೇಲೆಯೇ ಪ್ರಹಾರ ಮಾಡಿ ‘ಬುತ್ ಶಿಕನ್’ (ಮೂರ್ತಿಭಂಜಕ) ಎಂಬ ಬಿರುದು ಪಡೆದಿರಬಹುದು.

ಮತಾಂತರದ ಅನಿವಾರ್ಯತೆ: ಹಾಗೆ ನೋಡಿದರೆ ಮುಸಲ್ಮಾನರ ಆಗಮನಕ್ಕೂ ಮುನ್ನವೇ ಬೌದ್ಧಪಂಥ ಭಾರತದ ಗಡಿಯಲ್ಲಿ ನೆಲೆನಿಲ್ಲುವಂತಾಗಿತ್ತು. ಅಶೋಕನ ಕಾಲಕ್ಕೆ ಹಬ್ಬಿದ ಟೊಂಗೆಗಳು ವಿದೇಶದಲ್ಲಿ ಫಲ ಕೊಟ್ಟಿದ್ದವು. ಹೀಗಾಗಿಯೇ ಮುಸಲ್ಮಾನರ ಆಕ್ರಮಣವಾದಾಗ ಮೊದಲು ಅವರೆಲ್ಲ ಬಲಿಯಾಗಿ ನಮ್ಮ ಗಡಿಭಾಗದ ದೇಶಗಳು ಅವರ ಕೈವಶವಾದವು. ಗೆಲುವು ಕಂಡ ಮುಸಲ್ಮಾನರ ಕ್ರೌರ್ಯ ಎಲ್ಲೆಮೀರಿದ್ದು. ಈ ಕೆಡುಕಿನಿಂದ ಪಾರಾಗಲು ಅಲ್ಲಿನ ಬೌದ್ಧರಿಗೆ ಉಳಿದಿದ್ದ ಮಾರ್ಗ ಮತಾಂತರವೊಂದೇ. ಆಕ್ರಮಣವನ್ನೆದುರಿಸಿ ನಿಲ್ಲಬಲ್ಲ ಸಿದ್ಧಾಂತವಾಗಲೀ, ಸಂಘಟನೆಯಾಗಲೀ ಇಲ್ಲವಾದ್ದರಿಂದ ಬೌದ್ಧ ಮತೀಯರು ಮತಾಂತರ ಹೊಂದಿ ಮೂಲದಿಂದ ದೂರಾದರು.

ಭಾರತದ ಮೇಲೆ ಆಕ್ರಮಣ ಮಾಡುವಂತೆ ಮುಸಲ್ಮಾನರನ್ನು ಆಹ್ವಾನಿಸಿದ್ದೇ ಬೌದ್ಧರು ಎನ್ನುವುದನ್ನು ಹಲವು ಇತಿಹಾಸಕಾರರು ಒಪ್ಪುತ್ತಾರೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದು ರಾಜ ದಾಹಿರನ ಮೇಲೆ ದಾಳಿಗೈಯಲು ಮುಸಲ್ಮಾನರಿಗೆ ಬೆಂಬಲ ನೀಡಿದ ಬೌದ್ಧರು ಕೊನೆಗೆ ಇಸ್ಲಾಂರಾಜ್ಯ ಸ್ಥಾಪನೆಯಾಗುವಂತೆ ನೋಡಿಕೊಂಡರು. ಆದರೆ ಒಂದಿನಿತೂ ಜಗ್ಗದೇ ಹೋರಾಡುವ ಮನೋಭಾವ ಉಳಿಸಿಕೊಂಡ ಹಿಂದುಗಳನ್ನೇ ಮುಸಲ್ಮಾನರು ನೆಚ್ಚಿಕೊಂಡರು. ಆಡಳಿತ ನಿರ್ವಹಣೆಯಲ್ಲಿ ಬೌದ್ಧರನ್ನು ಪಕ್ಕಕ್ಕೆ ತಳ್ಳಿ ಹಿಂದುಗಳಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟರು. ಇದರಿಂದ ಭಯಭೀತರಾದ ಬೌದ್ಧರು ಮುಂದಿನ ಅನಾಹುತಗಳಿಂದ ಬಚಾವಾಗಲು ಇದ್ದ ಏಕೈಕ ಮಾರ್ಗವೆಂದರೆ ಮುಸ್ಲಿಂ ಮತಕ್ಕೆ ಪರಿವರ್ತನೆಗೊಳ್ಳೋದು. ಹೀಗಾಗಿಯೇ ಬೌದ್ಧಪಂಥ ಭಾರತದಲ್ಲಿಯೇ ಇಂಗಿಹೋಯಿತು. 1938ರ ಅಲಾಹಾಬಾದಿನ ಭಾರತೀಯ ಇತಿಹಾಸ ಸಮ್ಮೇಳನದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಸುರೇಂದ್ರನಾಥ ಸೇನ್ರು ಮಂಡಿಸಿದ ಚಿಂತನೆ ಇದು.

ಎಷ್ಟೇ ಆಧಾರಗಳನ್ನು ಹೆಕ್ಕಿ ತೆಗೆದು ಮಂಡಿಸಿದರೂ ಬೌದ್ಧರ ಅವಸಾನದ ಕುರಿತಂತೆ ಸಮರ್ಥ ವಾದ ಮಂಡಿಸುವುದು ಬಲುಕಷ್ಟ. ಸ್ವಾತಂತ್ರ್ಯಾನಂತರವೂ ನಾವು ಈ ದಿಕ್ಕಿನಲ್ಲಿ ಪ್ರಾಮಾಣಿಕವಾದ ಶೋಧಕ್ಕೆ ಕೈ ಹಾಕಲಿಲ್ಲ. ವರ್ಣಪದ್ಧತಿಯನ್ನು ಧಿಕ್ಕರಿಸುವ ಭರದಲ್ಲಿ, ಬ್ರಾಹ್ಮಣರನ್ನು ತೆಗಳುವ ಧಾವಂತದಲ್ಲಿ ಎಲ್ಲವನ್ನೂ ಅವರ ತಲೆಗೆ ಕಟ್ಟಿಬಿಡುವ ತುರ್ತಿಗೆ ಸಿಲುಕಿದ್ದೆವು ನಾವು. ಹಾಗೆ ಒಬ್ಬರನ್ನು ತೆಗಳಿ ಮತ್ತೊಬ್ಬರಿಗೆ ಹತ್ತಿರವಾಗುವ ರ್ದದಿನಿಂದಾಗಿಯೇ ನಮ್ಮ ಇತಿಹಾಸ ಸಂಶೋಧನೆ ದಾರಿತಪ್ಪಿತು. ಕಾಲಕ್ರಮದಲ್ಲಿ ಇಂದಿನ ಅಗತ್ಯಕ್ಕೆ ತಕ್ಕಂತೆ ಇತಿಹಾಸವನ್ನು ಬದಲಿಸುವ, ತಿರುಚುವ ಪ್ರಯತ್ನಗಳೂ ಶುರುವಾದವು. ಅದಕ್ಕೆ ಬೇಕಾದ ಬೋಧನೆಗೆ ವಿಶ್ವವಿದ್ಯಾಲಯಗಳು, ಡಾಕ್ಟರೇಟ್ ಪಡೆದ ಪ್ರೊಫೆಸರುಗಳೂ ಸೃಷ್ಟಿಯಾದರು. ನಮ್ಮ ನಡುವೆ ಕಂದಕ ಕೊರೆದು ಅಗಲ ಮಾಡಿದರು. ಅಂದಹಾಗೆ ಮುಸಲ್ಮಾನರ ಆಕ್ರಮಣವಾದಾಗ ಇಲ್ಲಿ ಬೌದ್ಧರೂ ಇದ್ದರು, ಹಿಂದುಗಳೂ ಇದ್ದರು. ಆದರೆ ಬೌದ್ಧರು ಜೀರ್ಣವಾಗಿಬಿಟ್ಟರು, ಹಿಂದು ಪರಂಪರೆ ಮಾತ್ರ ಅಚಲವಾಗಿ ನಿಂತಿತಲ್ಲ! ಹೇಗೆ?

Leave a Reply

Your email address will not be published. Required fields are marked *