ಕಿಕ್ಕೇರಿ: ಹೋಬಳಿಯ ಗಡಿಭಾಗದ ಬೋಳಮಾರನಹಳ್ಳಿಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೆರೆ ತುಂಬಿಕೊಂಡು ಏರಿ ಮೇಲೆ ನೀರು ಹರಿದ ಪರಿಣಾಮ, ಗ್ರಾಮದ ಮಾರ್ಗ ಕೆಲ ಗಂಟೆಗಳ ಕಾಲ ಜಲ ದಿಗ್ಬಂಧನವಾಗಿತ್ತು.
ಗುರುವಾರ ದಿಢೀರನೆ ಶ್ರವಣಬೆಳಗೊಳ ವ್ಯಾಪ್ತಿಯ ಬಿಸಲಹಳ್ಳಿ ಕಡೆಯಿಂದ ಜೋರು ನೀರು ಹಾಗೂ ಶ್ರೀರಾಮದೇವರ ಕಾಲುವೆಯ 86ನೇ ಕಿ.ಮೀ.ನಿಂದ ಅಧಿಕವಾಗಿ ಹರಿದು ಬಂದ ನೀರಿನಿಂದ ಆನೆಗೊಳ ಮಾರ್ಗವಾಗಿ ಗ್ರಾಮಕ್ಕೆ ಸಾಗುವ ರಸ್ತೆಯ ಏರಿ ಮೇಲೆ ಕೆರೆ ನೀರು ಹರಿದ ಕಾರಣ ಗ್ರಾಮಕ್ಕೆ ತೆರಳಲು ತೊಂದರೆ ಉಂಟಾಗಿತ್ತು.
ಅಲ್ಲದೆ, ಕೆರೆ ತುಂಬ ಜೊಂಡು ಹುಲ್ಲು ಬೆಳೆದಿದ್ದ ಕಾರಣ ನೀರು ಹೊರ ಹೋಗಲಾಗದೆ ಕೆರೆ ಏರಿ ಒಡೆಯುವ ಸನ್ನಿವೇಶ ನಿರ್ಮಾಣವಾಗಿತ್ತು. ಹೀಗಾಗಿ, ರೈತರು ಕೆರೆಯಲ್ಲಿ ಹರಿದು ಬರುತ್ತಿದ್ದ ಜೊಂಡು ತೆಗೆಯಲು ಮುಂದಾದರು. ಕೊನೆಗೆ ಶ್ರವಣಬೆಳಗೊಳ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಆಗಮಿಸಿ ಕೆರೆಯ ನೀರು ಸರಾಗವಾಗಿ ಹರಿಯುವಂತೆ ಸೂಕ್ತ ವ್ಯವಸ್ಥೆ ಮಾಡಿದರು.
ಕಾರ್ಯಪಾಲಕ ಇಂಜಿನಿಯರ್ ಎಚ್.ಕೆ.ರಾಜು, ಕಿರಿಯ ಇಂಜಿನಿಯರ್ ಎಸ್.ಜೆ. ಪ್ರಪುಲ್ಲಾ, ಆನೆಗೊಳ ಗ್ರಾಪಂ ಅಧ್ಯಕ್ಷೆ ಅನಸೂಯಾ ವೆಂಕಟೇಶ್, ಪಿಡಿಒ ಕೆ.ಎನ್. ಕುಮಾರ್, ಗ್ರಾಮ ಲೆಕ್ಕಿಗ ಪ್ರಸನ್ನಕುಮಾರ್ ಇದ್ದರು.