Soಕಲಬುರಗಿ: ರಾಮನವಮಿ ನಿಮಿತ್ತ ನಗರದಲ್ಲಿ ರಾಮನವಮಿ ಉತ್ಸವ ಸಮಿತಿಯಿಂದ ೧೫ ಅಡಿ ಎತ್ತರದ ಪ್ರಭು ಶ್ರೀರಾಮನ ಭವ್ಯ ಮೂರ್ತಿಯ ಮೆರವಣಿಗೆ ಸಾವಿರಾರು ಭಕ್ತರ ಜೈಘೋಷಗಳೊಂದಿಗೆ ಭಾನುವಾರ ಅದ್ದೂರಿಯಾಗಿ ನಡೆಯಿತು. ಎಲ್ಲೆಡೆ ಭಗವಾ ಧ್ವಜಗಳು ರಾರಾಜಿಸಿದವು.

ಪ್ರಯಾಗರಾಜ್‌ನಲ್ಲಿ ಸಂಪನ್ನಗೊಂಡ ಮಹಾ ಕುಂಭಮೇಳದ ನೆನಪಿಗಾಗಿ ೧೮ ಅಡಿ ಎತ್ತರದ ಕುಂಭಾಲಂಕಾರದಲ್ಲಿ ಸಿದ್ಧಗೊಂಡ ಮರ್ಯಾದಾ ಪುರುಷೋತ್ತಮನ ೧೫ ಅಡಿ ಎತ್ತರದ ಭವ್ಯ ಮೂರ್ತಿ ಶೋಭಾಯಾತ್ರೆ ಈ ಸಲದ ವಿಶೇಷ. ನಗರ ಹೊರವಲಯದ ಚೆಕ್‌ಪೋಸ್ಟ್ ಬಳಿಯ ರಾಮತೀರ್ಥ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆಗೆ ಜೈಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ), ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯ, ಉತ್ಸವ ಸಮಿತಿ ಸದಸ್ಯರಾದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಚಾಲನೆ ನೀಡಿದರು.
ದೇವಿ ನಗರ, ಖಾದ್ರಿ ಚೌಕ್, ಶೆಟ್ಟಿ ಮಲ್ಟಿಪ್ಲೆಕ್ಸ್, ಶಹಾಬಜಾರ ನಾಕಾ, ಪ್ರಕಾಶ ಟಾಕೀಸ್, ಹಳೇ ಚೌಕ್ ಪೊಲೀಸ್ ಠಾಣೆ, ಸೂಪರ್ ಮಾರ್ಕೆಟ್, ಸಿಟಿ ಸೆಂಟರ್ ಮಾಲ್ ಮೂಲಕ ಜಗತ್ ವೃತ್ತದಲ್ಲಿ ಸಂಪನ್ನಗೊಂಡಿತು.
ಸಮಿತಿ ಸದಸ್ಯರಾದ ಸಚಿನ್ ಕಡಗಂಚಿ, ಗುರು ಸಾಗರೆ, ಸುಜೀಜ್ ಮಿಶ್ರಾ, ಚಿದಾನಂದ ಹಿರೇಮಠ, ಸುದೀಪ್ ಚಿಂಚೋಳಿ, ಆನಂದ ಕಲೋಜಿ, ಮುರಳಿ ಯಲಮಡಗಿ, ಉಮೇಶ ಪಾಟೀಲ್, ಹರ್ಷಾನಂದ ಗುತ್ತೇದಾರ್, ಮಲ್ಲಿಕಾರ್ಜುನ ಸಾರವಾಡ, ಡಾ.ಸುಧಾ ಹಾಲಕಾಯಿ, ಮಹೇಶ ಗೊಬ್ಬುರ, ಚಂದ್ರಕಾಂತ ಕಾಳಗಿ ಇತರರು ಪಾಲ್ಗೊಂಡಿದ್ದರು. ಮಾರ್ಗದುದ್ದಕ್ಕೂ ರಾಮ ಭಕ್ತರಿಗಾಗಿ ಸಂಘ-ಸಂಸ್ಥೆ ಪ್ರಮುಖರು, ಗಣ್ಯರು ಊಟ ಮತ್ತು ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು.
ದೇಸಿ ವಾದ್ಯ ಮೆರುಗು: ಶೋಭಾಯಾತ್ರೆ ಅಂಗವಾಗಿ ನಗರದೆ ಎಲ್ಲಡೆ ರಾಮನ ಕಟೌಟ್, ಬ್ಯಾನರ್, ಭಗವಾ ಧ್ವಜಗಳು ರಾರಾಜಿಸಿದವು. ದೇಸಿ ವಾದ್ಯಗಳಾದ ಚಾಮರಾಜ ಪೇಟೆ ಹಾಗೂ ಕೋಲಾರದ ಸ್ಥಳೀಯರ ಡೋಲು, ತಮಟೆ, ಸಾರವಾಡದ ಶ್ರೀ ಯಡೀಶ್ವರ ಗೊಂಬೆ ಕುಣಿತ, ಸಿರಸಿಯ ಬೀರಲಿಂಗೇಶ್ವರದ ಡೊಳ್ಳು ಶೋಭಾಯಾತ್ರೆ ಮೆರುಗು ಹೆಚ್ಚಿಸಿದರೆ, ಮಹಾರಾಷ್ಟç ಪುಣೆಯ ಧ್ವನಿವರ್ಧಕ (ಡಿಜೆ) ಕಳೆ ತಂದುಕೊಟ್ಟಿತು.
ಮೂರು ಕಡೆಗಳಿಂದ ಯಾತ್ರೆ: ಮಹಾನಗರದಲ್ಲಿ ೧೫ ಅಡಿ ಎತ್ತರದ ಪ್ರಭು ಶ್ರೀರಾಮನ ಭವ್ಯ ಮೂರ್ತಿಯ ಒಟ್ಟು ಮೂರು ಶೋಭಾಯಾತ್ರೆ ನಡೆದವು. ರಾಮ ನವಮಿ ಉತ್ಸವ ಸಮಿತಿ ಹಾಗೂ ಮಹೇಶ ಗೊಬ್ಬುರ ನೇತೃತ್ವದಲ್ಲಿ ಶೋಭಾಯಾತ್ರೆ ಚೆಕ್‌ಪೋಸ್ಟ್ನಿಂದ ಹೊರಟರೆ, ನೆಹರು ಗಂಜ್‌ನಿಂದ ರಾಜು ಭವಾನಿ ನೇತೃತ್ವದಲ್ಲಿ ಕುಂಭ ಶ್ರೀರಾಮ ನವಮಿ ಉತ್ಸವ ಸಮಿತಿ ಶೋಭಾಯಾತ್ರೆ ಜರುಗಿತು.
ಮಿಂಚಿದ ವೀರ ಸಾವರ್ಕರ್: ನಗರದ ಚೆಕ್‌ಪೋಸ್ಟ್ನಿಂದ ಹೊರಟ ರಾಮ ನವಮಿ ಉತ್ಸವ ಸಮಿತಿಯ ಅದ್ದೂರಿ ಶೋಭಾಯಾತ್ರೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರ, ವೀರ ವಿನಾಯಕ ದಾಮೋಧರ ಸಾವರ್ಕರ್ ಕಟೌಟ್ ಎಲ್ಲರ ಗಮನ ಸೆಳೆಯಿತು. ಜತೆಗೆ ಸಂಭಾಜಿ ಮಹಾರಾಜರ ಅಲಂಕಾರ, ಇಮ್ಮಡಿ ಪುಲಿಕೇಶಿ ಭಾವಚಿತ್ರ ಹಿಡಿದು ರಾಮ ಭಕ್ತರು ಕುಣಿದು ಕುಪ್ಪಳಿಸಿದರು. ರಾಯಲ್ ಚಾಲೆಂಜರ್ಸ್(ಆರ್‌ಸಿಬಿ) ತಂಡದ ಗೆಲುವಿಗಾಗಿ ಶೋಭಾಯಾತ್ರೆ ವೇಳೆ ಅಭಿಮಾನಿಯೊಬ್ಬರು ಡಿಜೆ ಹೊತ್ತ ವಾಹನ ಮೇಲೇರಿ ವಿರಾಟ್ ಕೋಹ್ಲಿ ಜರ್ಸಿ ಹಿಡಿದು ಅಭಿಮಾನ ಮೆರೆದಿದ್ದು ಗಮನ ಸೆಳೆಯಿತು.
ಮುಸ್ಲಿಮರಿಂದ ತಂಪು ಪಾನೀಯ: ರಾಮನವಮಿ ಅಂಗವಾಗಿ ಚೆಕ್‌ಪೋಸ್ಟ್ನಿಂದ ಹೊರಟ ಶೋಭಾಯಾತ್ರೆಯಲ್ಲಿ ಭಾಗಿಯಾದ ರಾಮ ಭಕ್ತರು ಹಾಗೂ ಸಾರ್ವಜನಿಕರಿಗಾಗಿ ಮುಸ್ಲಿಮರು ಖಾದ್ರಿ ಚೌಕ್ ಬಳಿ ತಂಪು ಪಾನೀಯ ವ್ಯವಸ್ಥೆ ಮಾಡಿ ಭಾವೈಕ್ಯದ ಸಂದೇಶ ಸಾರಿದರು.
ಆದಿಪುರುಷ ಪ್ರಭು ಶ್ರೀರಾಮನ ತತ್ವಾದರ್ಶ ಸಾರ್ವಕಾಲಿಕ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀರಾಮಚಂದ್ರ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದಲ್ಲಿ ಆದರ್ಶರಾಗಿ ಬದುಕಬೇಕು. ಶ್ರೀರಾಮ ನವಮಿ ಉತ್ಸವ ಅದ್ದೂರಿಯಾಗಿ ನಡೆದಿದ್ದು ಸಂತಸ ತಂದಿದೆ.
| ಚಂದು ಪಾಟೀಲ್ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ
ಪ್ರಭು ಶ್ರೀರಾಮನ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನಜಾಗೃತಿ ಮೂಡುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಉತ್ಸವ ಅದ್ದೂರಿಯಾಗಿ ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಶ್ರೀರಾಮನ ಆದರ್ಶ ಎಂದೆಂದಿಗೂ ಪ್ರಸ್ತುತ.
| ಮಹೇಶ ಗೊಬ್ಬೂರ ಕಲಬುರಗಿ
ರಾಮನವಮಿ ಉತ್ಸವದಲ್ಲಿ ಯುವಕರು ಆದಿಯಾಗಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಆದರ್ಶ ಪುರುಷ ಶ್ರೀರಾಮಚಂದ್ರನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರಲ್ಲಿ ವರ್ಷದಿಂದ ವರ್ಷಕ್ಕೆ ಉತ್ಸಾಹ ಇಮ್ಮಡಿಯಾಗಲಿ.
| ರಾಜು ಭವಾನಿ ಕಲಬುರಗಿ