ಬೋಟ್‌ನ ಸುಳಿವು ಸಿಕ್ಕಿರುವುದು ನಿಜವೇ?


ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿ 27 ದಿನಗಳು ಕಳೆದರೂ ತನಿಖೆಯಲ್ಲಿ ಮಹತ್ತರ ಪ್ರಗತಿಯಾಗಿಲ್ಲ, ನಿಗೂಢತೆ ಮುಂದುವರಿದಿರುವ ನಡುವೆಯೇ ಗೃಹಸಚಿವರು ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾಪತ್ತೆಯಾದ ಬೋಟಿನ ಸುಳಿವು ಸಿಕ್ಕಿದೆ, ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿಕೆ ನೀಡಿದ್ದರು. ಮೂಲಗಳ ಪ್ರಕಾರ ಸಿಂದುಧುರ್ಗ ಮತ್ತು ರತ್ನಗಿರಿ ಪ್ರಾಂತ್ಯದಲ್ಲಿ ಕೋಸ್ಟ್‌ಗಾರ್ಡ್ ಕಾರ್ಯಾಚರಣೆ ವೇಳೆ ಬೋಟ್‌ಗಳಲ್ಲಿ ಬಳಸುವ ಫೋಮ್ ಪತ್ತೆಯಾಗಿದೆ. ಮೀನುಗಾರಿಕೆ ಬೋಟ್‌ಗಳಲ್ಲಿ ಮೀನು ಶೇಖರಿಸುವ ಬೃಹತ್ ಬಾಕ್ಸ್‌ಗಳು ಥರ್ಮಕೋಲ್ ಮಾದರಿಯಲ್ಲಿ ಫೋಮ್‌ನಿಂದ ಮಾಡಲ್ಪಟ್ಟಿರುತ್ತವೆ. ಆ ಫೋಮ್ ಬೆಂಕಿಗೆ ಆಹುತಿಯಾಗಿ ಉಂಡೆ ಉಂಡೆಯಾಗಿ ಕಡಲತೀರದಲ್ಲಿ ಲಭಿಸಿದೆ. ಬಹುಶಃ ಇದನ್ನೇ ಸಚಿವರು ಸುಳಿವು ಎಂದು ಹೇಳಿಕೆ ನೀಡಿರುವ ಸಾಧ್ಯತೆ ಬಿಟ್ಟರೆ, ಕಾರ್ಯಾಚರಣೆಯಲ್ಲಿ ಮಹತ್ವದ ಸುಳಿವು ಲಭ್ಯವಾಗಿಲ್ಲ ಎಂಬ ಮಾಹಿತಿ ‘ವಿಜಯವಾಣಿ’ಗೆ ಲಭಿಸಿದೆ.

ಸಿಕ್ಕಿರುವ ಫೋಮ್ ಸುವರ್ಣ ತ್ರಿಭುಜ ಬೋಟ್‌ನದ್ದೇ ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಆಧಾರವೂ ಲಭಿಸಿಲ್ಲ. ಕೆಲದಿನಗಳ ಹಿಂದೆ ಸಿಂಧುದುರ್ಗ ಬಳಿ ಬಲೆಗೆ ಸಿಲುಕಿದ ಎಸ್‌ಟಿ (ಸುವರ್ಣ ತ್ರಿಭುಜ) ಎಂದು ಬರೆದಿದ್ದ ಮೀನು ತುಂಬಿಸುವ ಕ್ರೇಟ್‌ಗಳು ಅದೇ ಬೋಟ್‌ನದ್ದಾಗಿರಬಹುದು ಎಂದು ಹೇಳಲಾಗುತ್ತಿದೆಯಾದರೂ, ಅದು ಕೂಡ ಖಚಿತವೆಂದು ಹೇಳುವಷ್ಟು ಪುರಾವೆ ಲಭಿಸಿಲ್ಲ. ಪೊಲೀಸರು, ಮೀನುಗಾರರು, ಕೋಸ್ಟ್‌ಗಾರ್ಡ್, ನೌಕಾಪಡೆ ಮತ್ತಿತರರ ಹುಡುಕಾಟದಲ್ಲೂ ಮಹತ್ವದ ಯಾವುದೇ ಸುಳಿವು ಸಿಕ್ಕಿಲ್ಲ. ಹಾಗಿದ್ದರೂ ಸಚಿವರು ಹೀಗೆ ಹೇಳಿಕೆ ನೀಡಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

 ಪೊಲೀಸ್, ಮೀನುಗಾರರ ತಂಡ: ನಾಪತ್ತೆಯಾದ ಮೀನುಗಾರರ ಪತ್ತೆ ಮತ್ತು ಹೆಚ್ಚಿನ ತನಿಖೆಗಾಗಿ ಶುಕ್ರವಾರ ಮಹಾರಾಷ್ಟ್ರ, ಗೋವಾಕ್ಕೆ ಎರಡು ತಂಡಗಳನ್ನು ಕಳುಹಿಸಲಾಗಿದೆ. ಎರಡು ಪೊಲೀಸ್ ವಾಹನಗಳಲ್ಲಿ ಮಲ್ಪೆಯ ಐವರು ಮೀನುಗಾರರು ಮತ್ತು ಪೊಲೀಸರು ಮಹಾರಾಷ್ಟ್ರದ ಸಿಂಧುದುರ್ಗ, ರತ್ನಗಿರಿಗೆೆ, ಇನ್ನೊಂದು ತಂಡ ಗೋವಾದ ಮಲ್ವಾನ್ ಪ್ರಾಂತ್ಯದತ್ತ ಪ್ರಯಾಣ ಬೆಳೆಸಿದೆ. ಇತ್ತ ಕೇರಳದಲ್ಲಿಯು ಹುಡುಕಾಟ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

ಗೃಹ ಸಚಿವರ ಹೇಳಿಕೆ ಸತ್ಯಕ್ಕೆ ದೂರವೆಂದ ಯಶಪಾಲ್: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟಿನ ಕುರಿತು ಸುಳಿವು ಲಭಿಸಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಮೀನುಗಾರ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಸುದ್ದಿಗಾರರಿಗೆ ಹೇಳಿದ್ದಾರೆ. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ವಿಶೇಷ ಪ್ರಯತ್ನ ಮುಂದುವರಿದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದರೂ ಇದುವರೆಗೆ ನಿಖರ ಸುಳಿವು ಲಭಿಸಿಲ್ಲ. ಬೋಟ್‌ನಲ್ಲಿ 10 ಸಾವಿರ ಲೀಟರ್‌ಗೂ ಅಧಿಕ ಡೀಸೆಲ್ ಸಹಿತ ಇತರ ವಸ್ತುಗಳಿರುತ್ತವೆ. ಅನಾಹುತ ನಡೆದಲ್ಲಿ ಡೀಸೆಲ್ ನೀರಿನ ಮೇಲೆ ಗೋಚರವಾಗುತ್ತದೆ. ಅಂಥ ಕುರುಹು ಇದುವರೆಗೆ ಲಭಿಸಿಲ್ಲ. ಹಾಗಾಗಿ ಸಚಿವರ ಹೇಳಿಕೆಗೆ ಮಹತ್ವ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದಿನಿಂದ ಮೀನುಗಾರಿಕೆ ಸಾಧ್ಯತೆ: ಶನಿವಾರದಿಂದ ಆಳ ಸಮುದ್ರ ಮೀನುಗಾರಿಕೆ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆೆ. ಹಂತ ಹಂತವಾಗಿ ಮೀನುಗಾರಿಕೆಗೆ ತೆರಳುವ ಕುರಿತು ಮೀನುಗಾರರ ಸಂಘ ಸಭೆ ಸೇರಿ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ. ಮೀನುಗಾರರು ನಾಪತ್ತೆಯಾದಾಗಿನಿಂದ ಡೀಪ್‌ಸೀ ಮೀನುಗಾರಿಕೆ ಬಂದ್ ಆಗಿದ್ದು, 1700ಕ್ಕೂ ಅಧಿಕ ಡೀಪ್‌ಸೀ ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಪರ್ಸಿನ್ ಮತ್ತು ಸಣ್ಣ ಕೆಲವು ಮೀನುಗಾರಿಕೆ ಬೋಟುಗಳು ಮಾತ್ರ ಮೀನುಗಾರಿಕೆ ನಡೆಸುತ್ತಿದೆ. ಮೀನುಗಾರಿಕೆ ಸ್ಥಗಿತದಿಂದ ದಿನಕ್ಕೆ 8ರಿಂದ 10 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.

ಸಾಮೂಹಿಕ ಪ್ರಾರ್ಥನೆ: ಮಂಗಳೂರು: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್‌ನಲ್ಲಿರುವ 7 ಜನ ಸುರಕ್ಷಿತವಾಗಿ ಹಿಂತಿರುಗುವಂತೆ ವಿಶ್ವ ಹಿಂದು ಪರಿಷತ್- ಬಜರಂಗದಳ ವತಿಯಿಂದ ಜ.12ರಂದು ಬೆಳಗ್ಗೆ 10.30ಕ್ಕೆ ಬಜಿಲಕೇರಿ ಕಾರಣಿಕ ಹನುಮಂತ ದೇವಸ್ಥಾನದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ತಿಳಿಸಿದ್ದಾರೆ.