ಬೋರ್​ವೆಲ್ ಕೊರೆಸಲು ಬಹಳ ಇಂಟ್ರೆಸ್ಟ್!

ಬೆಂಗಳೂರು: ಬರಪೀಡಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ವೃದ್ಧಿಗೆ ಅಧಿಕಾರಿಗಳಲ್ಲಿ ಆಸಕ್ತಿ ಇಲ್ಲ. ಆದರೆ ಬೋರ್​ವೆಲ್ ಕೊರೆಸಲು ಅತೀವ ಉತ್ಸಾಹ ತೋರಿಸುತ್ತಾರೆ. ಏಕೆಂದರೆ ಬೋರ್​ವೆಲ್ ಕೊರೆಸುವುದು ಅಧಿಕಾರಿಗಳ ಜೇಬು ತುಂಬಿಸುವ ದಂಧೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು ಪೂರೈಕೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಲಾಗುತ್ತಿದೆ. 950 ಅಡಿಗೆ ಬೋರ್​ವೆಲ್ ಕೊರೆದರೆ 1250 ಅಡಿಗೆ ಬಿಲ್ ಮಾಡುತ್ತಾರೆ. ವಿಫಲವಾದ ಬೋರ್​ವೆಲ್​ಗಳ ಪಂಪು ಮೋಟಾರ್ ಕೇಬಲ್ ಸೇರಿ ಎಲ್ಲ ಪರಿಕರಗಳನ್ನು ಖಾಸಗಿಯಾಗಿ ಮಾರಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಿಲ್ಲ ಎಂದ ಕೂಡಲೇ ಹೊಸದಾಗಿ ಬೋರ್​ವೆಲ್ ಕೊರೆಯುವುದಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸುತ್ತಾರೆ. ಆದರೆ ಜಿಲ್ಲೆಯಲ್ಲಿರುವ ವಿಫಲ ಬೋರ್​ವೆಲ್​ಗಳಲ್ಲಿನ ಪಂಪ್ ಮೋಟಾರ್ ಏನಾದವು ಎಂಬುದಕ್ಕೆ ಲೆಕ್ಕ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಷ್ಕಿ›ಯ ಬೋರ್​ವೆಲ್​ಗಳಲ್ಲಿನ ಪಂಪ್ ಮೋಟಾರ್​ಗಳನ್ನು ಹೊಸ ಬೋರ್​ವೆಲ್​ಗಳಿಗೆ ಅಳವಡಿಸುವಂತೆ ಹೇಳಿದರೆ ಮಾತೇ ಆಡುವುದಿಲ್ಲ. ಇದರ ಹಿಂದೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ಮಾಹಿತಿ ನೀಡಲು ತಡಕಾಟ: ಶಾಸಕರ ಅನುದಾನದಡಿ ಕೊರೆದ ಕೊಳವೆಬಾವಿಗಳು ಎಷ್ಟು ವಿಫಲವಾಗಿವೆ ಎಂಬ ಸಚಿವರ ಪ್ರಶ್ನೆಗೆ ತಡವರಿಸಿದ ಅಧಿಕಾರಿಗಳು, ಏನೇನೋ ಸಬೂಬು ಹೇಳಲು ಮುಂದಾದರೂ ಸಿಡಿಮಿಡಿಗೊಂಡ ಸಚಿವ ಎಂಟಿಬಿ, ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ ಎಷ್ಟು ಬೋರ್​ವೆಲ್ ಕೊರೆಯಲಾಗಿದೆ. ಇದರಲ್ಲಿ ಎಷ್ಟು ಸಫಲ ಎಷ್ಟು ವಿಫಲವಾಗಿದೆ ಎಂಬ ಮಾಹಿತಿ ನೀಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಖಾಸಗಿ ದಂಧೆ: ಎಷ್ಟೋ ಗ್ರಾಪಂಗಳಲ್ಲಿ ಸಂಗ್ರಹಿಸಿಟ್ಟಿರುವ ಪಂಪ್ ಮೋಟಾರ್​ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದ್ದರೆ ಕೆಲವೊಂದಷ್ಟು ಕಳ್ಳತನವಾಗುತ್ತಿವೆ. ಇಷ್ಟಾದರೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ಹೊಸಕೋಟೆ ಭಾಗದಲ್ಲಿ ಪರಿಕರ ಕಳ್ಳತನವಾಗಿರುವ ದೂರು ದಾಖಲಾಗಿದೆ. ಆದರೆ ಠಾಣೆಯಲ್ಲಿ ದೂರು ದಾಖಲಿಸಿಲ್ಲ ಎಂದು ಎಂಟಿಬಿ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿ ಇಒ, ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದರು. ಹಾಗಿದ್ದರೆ ಅವರ ಹೆಸರೇಳಿ ಎನ್ನುತ್ತಿದ್ದಂತೆ ಅಧಿಕಾರಿ ನಿರುತ್ತರರಾದರು.

ಹೆಚ್ಚುವರಿ ಅನುದಾನ ಏಕೆ?: ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಗತಿ ಕುರಿತು ಪರಿಶೀಲಿಸುವ ವೇಳೆ ಜಿಲ್ಲೆಯಲ್ಲಿ ನಿರ್ವಣವಾಗಿರುವ ಭವನಗಳು ಅರ್ಧಕ್ಕೆ ನಿಂತಿರುವುದಕ್ಕೆ ಉತ್ತರಿಸುವಂತೆ ಸಚಿವರು ಕೇಳಿದರು. ಮೊದಲ ಕಂತಿನಲ್ಲಿ ಸರ್ಕಾರ ಬಿಡುಗಡೆಗೊಳಿಸಿದ ಹಣದಲ್ಲಿ ಅರ್ಧ ಭಾಗದಷ್ಟು ಮಾತ್ರ ಕಟ್ಟಡ ಕಟ್ಟಲಾಗಿದೆ. ಹೆಚ್ಚುವರಿ ಹಣ ನೀಡಿದರೆ ಭವನ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು, ಅಂದಾಜು ವೆಚ್ಚ ಸಲ್ಲಿಸುವಾಗ ಸರಿಯಾಗಿಯೇ ಇರುತ್ತದೆ. ಅರ್ಧ ಕಾಮಗಾರಿ ಬಳಿಕ ಹೆಚ್ಚುವರಿ ಅನುದಾನದ ಬೇಡಿಕೆ ಬರುತ್ತದೆ. ಮೊದಲೆ ಅಂದಾಜುಪಟ್ಟಿ ಸರಿಯಾಗಿ ನೀಡಲು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಎಷ್ಟು ಭವನ ಅರ್ಧಕ್ಕೆ ನಿಂತಿವೆ ಎಂಬ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ತಾಕೀತು ಮಾಡಿದರು.

ರೈತರನ್ನು ಅಲೆದಾಡಿಸಬೇಡಿ: ಸರ್ಕಾರದ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ ಎಂಬ ವ್ಯಾಪಕ ದೂರು ಕೇಳಿಬರುತ್ತಿದೆ. ಸಾಲ ಕೊಡಲು ಸಾಧ್ಯವಾಗದಿದ್ದರೆ ಹಿಂಬರಹ ಕೊಟ್ಟು ಬಿಡಿ. ಅದು ಬಿಟ್ಟು ಸುಮ್ಮನೆ ಅಲೆದಾಡಿಸುವುದು ಸರಿಯಲ್ಲ. ಇಲಾಖೆ ಅಧಿಕಾರಿಗಳೂ ಈ ಬಗ್ಗೆ ಕಾಳಜಿವಹಿಸಬೇಕು ಎಂದು ಎಂಟಿಬಿ ನಾಗರಾಜು ಹೇಳಿದರು.

ಶಾಸಕರ ಪ್ರಶ್ನೆಗಳ ಸುರಿಮಳೆ: ನೆಲಮಂಗಲದಲ್ಲಿ ಮೇವು ವಿತರಣೆ ಮಾಡಿಲ್ಲ ಎಂದು ಶಾಸಕ ಡಾ.ಶ್ರೀನಿವಾಸಮೂರ್ತಿ ಪ್ರಸ್ತಾಪಿಸಿದಾಗ ಇನ್ನೂ ಟೆಂಡರ್ ಆಗಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಇದಕ್ಕೆ ಕುಪಿತಗೊಂಡ ಸಚಿವರು, ಮಳೆ ಬಂದು ಕೆರೆ ಕಟ್ಟೆಗಳಲ್ಲಿ ನೀರು ಬಂದ ಮೇಲೆ ಮೇವು ನೀಡುತ್ತೀರಾ? ತಾಲೂಕುಗಳಲ್ಲಿ ಪಶುಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಸಲು ಜನ ಮುಂದೆ ಬಂದರು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಬೇಸರಿಸಿದರು. ಮಧ್ಯಪ್ರವೇಶಿಸಿದ ಶಾಸಕ ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ತಾಲೂಕಿನ 60ಕ್ಕೂ ಹೆಚ್ಚುಕಡೆ ಹಾಲು ಪೂರೈಸಿದ ರೈತರಿಗೆ ಸಹಾಯಧನ ಸಿಕ್ಕಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಕೆಲವೆಡೆ ಹಾಲಿನ ಗುಣಮಟ್ಟ ಸರಿಯಿಲ್ಲದಿದ್ದರೆ ಸಹಾಯಧನ ನೀಡಲು ಸಾಧ್ಯವಾಗುವುದಿಲ್ಲ ಎಂದು ವಿವರಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ಜಯಮ್ಮಅನಿಲ್​ಕುಮಾರ್, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ಕರೀಗೌಡ, ಸಿಇಒ ಆರ್.ಲತಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ಹಾಜರಿದ್ದರು.

ಎಲ್ಲ ಶಾಸಕರು ಹಾಜರು: ಮೂರು ವರ್ಷಗಳಿಂದ ನಡೆದ ಕೆಡಿಪಿ ಸಭೆಯಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಅದರಲ್ಲೂ ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಅಧಿಕಾರಿಗಳನ್ನು ಪ್ರಶ್ನಿಸುವ ಮೂಲಕ ಗಮನ ಸೆಳೆದರು.

Leave a Reply

Your email address will not be published. Required fields are marked *