ಬೋರ್ಡ್​ನಲ್ಲಿ 24*7 ಸೇವೆ

ಕಾರವಾರ: ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24*7 ಆರೋಗ್ಯ ಸೇವೆ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಿಂದೆ ಗ್ರಾಮದಲ್ಲಿ ಈ ಸೇವೆ ಕಲ್ಪಿಸಲಾಗಿತ್ತು. ಒಬ್ಬರೇ ವೈದ್ಯರಿದ್ದರೂ ಇಬ್ಬರು ಶುಶ್ರೂಷಕಿಯರು, ಇತರ ಸಿಬ್ಬಂದಿಯನ್ನು ನೀಡಲಾಗಿತ್ತು. ಆದರೆ, ಸಾಕಷ್ಟು ಹೆರಿಗೆಯಾಗಿಲ್ಲ ಎಂಬ ಕಾರಣ ನೀಡಿ ಅದನ್ನು ಬಂದ್ ಮಾಡಲಾಗಿದೆ. ಸದ್ಯ ಒಬ್ಬ ವೈದ್ಯರು, ಒಬ್ಬ ಶುಶ್ರೂಷಕಿ, ಇತರ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ರಾತ್ರಿ ಚಿಕಿತ್ಸೆ ಸಿಗುತ್ತಿಲ್ಲ.

ವೈಲವಾಡಾದಿಂದ ಕೆರವಡಿವರೆಗೆ ಸುತ್ತಲಿನ ಪ್ರದೇಶದಲ್ಲಿ 24*7 ಯಾವುದೇ ಆಸ್ಪತ್ರೆ ಇಲ್ಲ. ರಾತ್ರಿ ಹೊತ್ತಿನಲ್ಲಿ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ, ಅಪಘಾತಗಳು ಸಂಭವಿಸಿದಲ್ಲಿ ದೂರದ ಕಾರವಾರಕ್ಕೆ ತೆರಳಬೇಕು. ಇದರಿಂದ ಸಮಸ್ಯೆ ಉಂಟಾಗುತ್ತಿದೆ. ಸದ್ಯ ದೇವಳಮಕ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24*7 ಸೇವೆ ಎಂಬ ಬೋರ್ಡ್ ಮಾತ್ರ ಇದೆ. ಆದರೆ, ಸೇವೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಂಬುಲೆನ್ಸ್ ಕೊಡಿ: ಸದ್ಯ ಕದ್ರಾದಲ್ಲಿ 108 ಆರೋಗ್ಯ ಕವಚ ಆಂಬುಲೆನ್ಸ್ ಇದೆ. ಇನ್ನೊಂದು ಕಾರವಾರದಲ್ಲಿದೆ. ಅಪಘಾತಗಳು ಸಂಭವಿಸಿದಾಗ ಕಾರವಾರದಿಂದ ಆಂಬುಲೆನ್ಸ್ ತಲುಪಲು 1 ತಾಸು ಬೇಕು. ಕದ್ರಾದಿಂದ ಬರಬೇಕು ಎಂದರೂ ಕನಿಷ್ಠ ಅರ್ಧ ಗಂಟೆ ಬೇಕು. ಇದರಿಂದ ದೇವಳಮಕ್ಕಿಯಲ್ಲಿ ಒಂದು ಆಂಬುಲೆನ್ಸ್ ವ್ಯವಸ್ಥೆ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಎಂಬಿಬಿಎಸ್ ಮುಗಿಸಿದ ವೈದ್ಯರು ಗ್ರಾಮೀಣ ಸೇವೆಗೆ ಒಪ್ಪುತ್ತಿಲ್ಲ. ಇದರಿಂದ ಬಿಎಎಂಎಸ್ ಹೆಚ್ಚಿನ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡಲಾಗುತ್ತಿದೆ. ಅವರಿಗೆ ಎಲ್ಲ ಅಲೋಪತಿ ಚಿಕಿತ್ಸೆಗಳನ್ನು ನೀಡಲು ಅನುಮತಿ ಇಲ್ಲ. ಇದರಿಂದ ಹಲವು ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ವೈದ್ಯರ ಕೊರತೆ, ಅಗತ್ಯಕ್ಕೆ ತಕ್ಕಷ್ಟು ಹೆರಿಗೆಯಾಗದ ಕಾರಣ ದೇವಳಮಕ್ಕಿ ಆರೋಗ್ಯ ಕೇಂದ್ರದಲ್ಲಿ ಇದ್ದ 24*7 ಆರೋಗ್ಯ ಸೇವೆ ವಾಪಸ್ ಪಡೆದು ಅಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಬೇರೆಡೆ ವರ್ಗಾಯಿಸಲಾಗಿದೆ. | ಡಾ.ಜಿ.ಎನ್.ಅಶೋಕ ಕುಮಾರ್ ಡಿಎಚ್​ಒ, ಉತ್ತರ ಕನ್ನಡ

ದೇವಳಮಕ್ಕಿ ಆಸ್ಪತ್ರೆಯಲ್ಲಿ ಬೆಡ್, ಪ್ರಯೋಗಾಲಯ ಸೇರಿ ಎಲ್ಲ ವ್ಯವಸ್ಥೆ ಇರುವ ದೊಡ್ಡ ಆಸ್ಪತ್ರೆ ಇದೆ. ಇಲ್ಲಿ ಸಾಕಷ್ಟು ಹೆರಿಗೆಯಾಗಿಲ್ಲ ಎಂಬ ಕಾರಣ ನೀಡಿ 247 ಸೌಲಭ್ಯ ಹಿಂಪಡೆದಿದೆ ಎಂದು ಕೇಳಿದ್ದೇನೆ. ಸೌಲಭ್ಯ ಒದಗಿಸದೇ ಹೆರಿಗೆಯ ಲೆಕ್ಕಾಚಾರ ಹಾಕುವುದು ಎಷ್ಟು ಸರಿ..? | ಸುಧೀರ ಜಿ.ನಾಯ್ಕ ದೇವಳಮಕ್ಕಿ ಗ್ರಾಮಸ್ಥ

Leave a Reply

Your email address will not be published. Required fields are marked *