ಬೋಗಸ್ ಕಂಪನಿಗಳಿಗಿನ್ನು ಉಳಿಗಾಲವಿಲ್ಲ..! ವಿಜಯವಾಣಿಗೆ ನೂತನ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್​ ಸಂದರ್ಶನ

ಬೆಂಗಳೂರು: ಬೋಗಸ್ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲೇ 1.25 ಲಕ್ಷ ಮಂದಿ ಹಣ ವಂಚನೆಗೆ ಒಳಗಾಗಿದ್ದು, ಮುಂದೆ ಇಂತಹ ವಂಚಕ ಕಂಪನಿಗಳು ಹುಟ್ಟದಂತೆ ಕ್ರಮ ಕೈಗೊಳ್ಳುತ್ತೇನೆ…

ಇದು ಬೆಂಗಳೂರು ನಗರ ನೂತನ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಅಲೋಕ್​ಕುಮಾರ್ ಅವರು ಸಾರ್ವಜನಿಕರಿಗೆ ಕೊಟ್ಟ ಭರವಸೆ. ಅಧಿಕಾರ ಸ್ವೀಕರಿಸಿದ ಬಳಿಕ ವಿಜಯವಾಣಿ ಜತೆ ಮಾತನಾಡಿದರು.

ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ 9 ತಿಂಗಳು ಕರ್ತವ್ಯ ನಿರ್ವಹಿಸಿದಾಗ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇವರಿಂದ ನಗರದಲ್ಲಿ 1.25 ಲಕ್ಷ ಮಂದಿ ಮೋಸ ಹೋಗಿದ್ದಾರೆ. ಆದರೆ, ಇಂತಹ ಕಂಪನಿಗಳ ಮಟ್ಟ ಹಾಕಲು ಪೊಲೀಸರಿಗೆ ಅಧಿಕಾರ ಇಲ್ಲ. ಆದರೂ ಸಂಬಂಧಪಟ್ಟ ಇಲಾಖೆ ಜತೆಗೆ ಚರ್ಚೆ ನಡೆಸಿ ಹೆಚ್ಚುವರಿ ಅಧಿಕಾರ ಪಡೆದು ಮುಂದೆ ವಂಚಕ ಕಂಪನಿಗಳು ಹುಟ್ಟದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಅಲೋಕ್​ಕುಮಾರ್ ಹೇಳಿದರು.

* ರೌಡಿ, ಗೂಂಡಾ, ಸಮಾಜಘಾತುಕರಿಗೆ ನಿಮ್ಮ ಎಚ್ಚರಿಕೆ ಏನು ?

ದಕ್ಷಿಣ ವಿಭಾಗದ ಡಿಸಿಪಿ ಆಗಿದ್ದಾಗ ಇದ್ದ ರೌಡಿಗಳಿಗೂ ಇಂದಿನ ಪುಡಿ ರೌಡಿಗಳಿಗೂ ವ್ಯತ್ಯಾಸವಿದೆ. ರೌಡಿ ಚಟುವಟಿಕೆ ಬಿಟ್ಟು ಸಮಾಜದೊಳಗೆ ಜನಸಾಮಾನ್ಯರಂತೆ ಜೀವನ ನಡೆಸಬೇಕು. ಇಲ್ಲ ಗಡಿಪಾರು ಆಗಬೇಕಾಗುತ್ತದೆ.

* ನಗರ ಪೊಲೀಸರಲ್ಲಿ ಸುಧಾರಣೆ ಕಾಣಬಹುದೇ ?

ಪೊಲೀಸ್ ಠಾಣೆ ಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಯುವಂತೆ ನೋಡಿಕೊಳ್ಳುತ್ತೇನೆ. ಡಿಸಿಪಿ, ಕಮಿಷನರ್, ಸಿಎಂ, ಸಚಿವರ ಬಳಿಯವರೆಗೂ ಹೋಗದಂತೆ ಸಮಸ್ಯೆ ಬಗೆಹರಿಸುವಂತಹ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಕಲ್ಪಿಸುತ್ತೇನೆ.

* ವೈಟ್ ಕಾಲರ್ ರೌಡಿಗಳ ಹಾವಳಿ ಹೆಚ್ಚಾಗಿದ್ದು, ತಡೆಗಟ್ಟಲು ಕ್ರಮವೇನು ?

ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ವೈಟ್ ಕಾಲರ್ ಅಪರಾಧಕ್ಕೆ ಇಳಿದಿದ್ದಾರೆ. ಮೀಟರ್ ಬಡ್ಡಿ, ಭೂ ವ್ಯಾಜ್ಯ, ಹಫ್ತಾ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇಂಥವರನ್ನು ಮಟ್ಟ ಹಾಕಲು ಸಿಎಂ, ಗೃಹ ಸಚಿವರಿಂದಲೂ ನಿರ್ದೇಶನ ಬಂದಿದ್ದು, ಇವರಿಗೆ ಉಳಿಗಾಲವಿಲ್ಲ.

* ಪೊಲೀಸರಿಗೆ ರಜೆ ಮತ್ತಿತರ ಸಮಸ್ಯೆ ಬಗ್ಗೆ ನಿಮ್ಮ ಯೋಜನೆ ಏನು?

ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಉತ್ತಮ ಸೇವೆ ನಿರೀಕ್ಷೆ ಮಾಡುತ್ತೇನೆ. ಅದಕ್ಕೆ ತಕ್ಕಂತೆ ಅವರಿಗೆ ಇರುವ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಲು ವಾರದ ರಜೆ, ಇನ್ನಿತರ ಸೌಲಭ್ಯ ಒದಗಿಸಿಕೊಟ್ಟು ಒತ್ತಡ ಕಡಿಮೆ ಮಾಡುತ್ತೇನೆ.

* ಸಾರ್ವಜನಿಕರಿಗೆ ನಿಮ್ಮ ಸಂದೇಶ ಏನು?

ಹೆಚ್ಚು ಲಾಭ, ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಬೋಗಸ್ ಕಂಪನಿಗಳಲ್ಲಿ ಹೂಡಿಕೆ ಮಾಡಬೇಡಿ. ಈಗಾಗಲೇ ಹೂಡಿಕೆ ಮಾಡಿದ್ದರೆ ಧೈರ್ಯವಾಗಿ ಠಾಣೆಗೆ ಬಂದು ದೂರು ಕೊಡಿ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಕೈ ಜೋಡಿಸಿ.

* ನೀವು ಕಮಿಷನರ್ ಆಗಿರುವುದಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಅಸಮಧಾನ ವ್ಯಕ್ತವಾಗಿದೆಯಲ್ಲ?

ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಬಡ್ತಿ ಕೊಟ್ಟು ಕಮಿಷನರ್ ಆಗಿ ಮಾಡಿದೆ.

* ನೂತನ ಕಮಿಷನರ್ ಆಗಿ ಮುಂದಿನ ಯೋಜನೆ ?

ಹೊಸ ಯೋಜನೆ ಏನೂ ಇಲ್ಲ. ಹಿಂದಿನ ಕಮಿಷನರ್​ಗಳ ಉತ್ತಮ ಕೆಲಸ ಮುಂದುವರೆಸುವುದು. ಸಿಎಂ, ಡಿಸಿಎಂ, ಗೃಹ ಸಚಿವರು, ಡಿಜಿಪಿ ಸಲಹೆ ಸೂಚನೆ ಪಾಲಿಸುವುದು ಮತ್ತು ತಮ್ಮ ಅಧಿಕಾರಿ ವರ್ಗದ ಜತೆಗೆ ಆಗಬೇಕಾಗಿರುವ ಕೆಲಸದ ಬಗ್ಗೆ ಚರ್ಚೆ ನಡೆಸಿ ಕಾಲಕಾಲಕ್ಕೆ ಜಾರಿಗೆ ತರುವುದು.

Leave a Reply

Your email address will not be published. Required fields are marked *