ಬೊಮ್ಮನೆಕಟ್ಟೆಯಲ್ಲಿ ಮೂಲ ಸೌಕರ್ಯ ಕೊರತೆ

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಬೊಮ್ಮನಕಟ್ಟೆ ಬಡಾವಣೆ ಕುಗ್ರಾಮಗಳಿಗಿಂತಲೂ ಕಡೆಯಾಗಿದ್ದು, ಅಧಿಕಾರಿ ವರ್ಗದ ನಿರ್ಲಕ್ಷ್ಯೋರಣೆಯೇ ಇದಕ್ಕೆ ಕಾರಣ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಶುಕ್ರವಾರ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಮೂಲ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಈ ವೇಳೆ ಹಲವು ಅಧಿಕಾರಿಗಳ ವಿರುದ್ಧ ಆಯನೂರು ಅಸಹನೆ ವ್ಯಕ್ತಪಡಿಸಿದರು.

ಕುಗ್ರಾಮಗಳಲ್ಲೂ ಮೂಲ ಸೌಕರ್ಯದ ಕೊರತೆಯಿಲ್ಲ. ಆದರೆ ಶಿವಮೊಗ್ಗ ನಗರ ಸ್ಮಾರ್ಟ್​ಸಿಟಿ ಯೋಜನೆಗೆ ಆಯ್ಕೆಯಾಗಿದೆ. ಈ ಬಡಾವಣೆ ನಗರಪಾಲಿಕೆ ವ್ಯಾಪ್ತಿಯಲ್ಲಿದೆ. ಆದರೂ ಇಲ್ಲಿ ಬೀದಿ ದೀಪ, ರಸ್ತೆ, ಚರಂಡಿ, ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಆಗದೇ ಇರುವುದರ ಹಿಂದೆ ನಿಮ್ಮ ನಿರ್ಲಕ್ಷ್ಯನ ಹಾಗೂ ಕರ್ತವ್ಯ ಲೋಪ ಎದ್ದು ಕಾಣುತ್ತದೆ ಎಂದು ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಳೆದ 3 ವರ್ಷಗಳಿಂದಲೂ ಈ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಆಮೆಗತಿಯಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂದರೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಇಚ್ಛಾಶಕ್ತಿ ಕೊರತೆಗೆ ಸಾಕ್ಷಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಇಲಾಖಾಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಕೆಲಸಗಳನ್ನು ಪೂರೈಸಬೇಕು. ಈ ಭಾಗದಲ್ಲಿ ಮನುಷ್ಯರೇ ವಾಸ ಮಾಡುತ್ತಿದ್ದಾರೆ. ಇಂತಹ ಬಡಾವಣೆಗೆ ಸೌಲಭ್ಯಗಳನ್ನು ಏಕೆ ಕೊಡಲಾಗುತ್ತಿಲ್ಲ ಎಂದು ಇಲಾಖಾಧಿಕಾರಿಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಶೀಘ್ರದಲ್ಲೇ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು, ಆಗಬೇಕಿರುವ ಕೆಲಸಗಳನ್ನು ಪೂರೈಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಪಾಲಿಕೆ ಸದಸ್ಯ ವಿಶ್ವಾಸ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಇತರರಿದ್ದರು.

ಸಾರ್ವಜನಿಕರಿಂದ ದೂರುಗಳ ಸರಮಾಲೆ:ರಸ್ತೆ ನಿರ್ಮಾಣ ಕಾಮಗಾರಿಯನ್ನು ತುಮಕೂರಿನ ನಿರ್ವಿುತಿ ಕೇಂದ್ರಕ್ಕೆ ನೀಡಲಾಗಿದೆ. ಕಳೆದ 3 ವರ್ಷಗಳಿಂದಲೂ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಲೇ ಇದೆ. ಕೇವಲ ಜಲ್ಲಿ ಬಿಚಾವಣೆ ಮಾಡಿ ಕೈಬಿಡಲಾಗಿದೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳು, ಮಹಿಳೆಯರು, ವಯೋವೃದ್ಧರು ಓಡಾಡುವುದೇ ಕಷ್ಟಕರವಾಗಿದೆ ಎಂದು ಸ್ಥಳೀಯರು ದೂರಿದರು. ರಾತ್ರಿ ವೇಳೆ ಬೀದಿದೀಪಗಳ ವ್ಯವಸ್ಥೆ ಇಲ್ಲ. ಇದರಿಂದಾಗಿ ಇಲ್ಲಿನ ಜನತೆ ರಾತ್ರಿ ವೇಳೆ ಸಂಚರಿಸುವುದಕ್ಕೆ ಭಯ ಪಡುತ್ತಾರೆ. ನೀರಿನ ವ್ಯವಸ್ಥೆ ಸಮರ್ಪಕವಾಗಿ ಆಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯವರನ್ನು ಕೇಳಿದರೆ ಸ್ವಲ್ಪವೂ ಸ್ಪಂದಿಸುತ್ತಿಲ್ಲ. ಇದರಿಂದಾಗಿ ನಮಗೆ ಮೂಲ ಸೌಲಭ್ಯವೇ ಇಲ್ಲದಂತಾಗಿದೆ. ಇದು ಮಹಾನಗರಪಾಲಿಕೆ ವ್ಯಾಪ್ತಿಗೆ ಬರುತ್ತಿಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.