ಬೊಜ್ಜಿನ ತೊಂದರೆ ನಿವಾರಿಸಲು ಯೋಗ ಮಾಡಿ

  • ನನ್ನ ತೂಕ 88 ಕೆ.ಜಿ.ಇದೆ. ದೇಹದ ತೂಕವನ್ನು ಹೇಗೆ ಕಡಿಮೆ ಮಾಡುವುದೆಂದು ತಿಳಿಸಿ.

| ವಿಶ್ವನಾಥ್ ಬಡಿಗೇರ್ (23) ಬೆಳಗಾವಿ

ದೇಹದಲ್ಲಿ ಕೊಬ್ಬಿನ ಹೆಚ್ಚುವರಿ ಶೇಖರಣೆ ಅಂದರೆ ಅದು ಹೆಚ್ಚಿದ ತೂಕ ಎಂದೇ ಅರ್ಥ. ಇಂದಿನ ತಂತ್ರಜ್ಞಾನ ಪ್ರಾಬಲ್ಯದ ಜಗತ್ತಿನಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಕೊಬ್ಬುಗಳು ಸಂಗ್ರಹವಾಗುತ್ತದೆ. ಅತಿಯಾದ ಕ್ಯಾಲರಿಯುಕ್ತ ಆಹಾರ ಸೇವಿಸುವುದು ಮತ್ತು ಸಾಕಷ್ಟು ಕ್ಯಾಲರಿಗಳನ್ನು ಖರ್ಚು ಮಾಡದಿರುವುದು ಬೊಜ್ಜು, ಥೈರಾಯ್್ಡಂಥ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಬೊಜ್ಜಿನಿಂದಾಗಿ ವ್ಯಕ್ತಿಗೆ ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮ ಬೀರುತ್ತದೆ. ಯೋಗ ಮತ್ತು ನಿಯಂತ್ರಿತ ಜೀವನಶೈಲಿಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಯೋಗ ವ್ಯಕ್ತಿಯನ್ನು ಚುರುಕಾಗಿಸುತ್ತದೆ. ಮನಸ್ಸಿನ ಮತ್ತು ನಡವಳಿಕೆಯ ಮೇಲೆ ನಿಯಂತ್ರಣ ಸಾಧಿಸಲು ಯೋಗ ಸಹಾಯಕ. ಉದಾ: ಆಹಾರಪದ್ಧತಿ ನಿಯಂತ್ರಣ ಇತ್ಯಾದಿ. ಆಹಾರಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಹಸಿವೆ ಇಲ್ಲದೆ ಇದ್ದಾಗ ಆಹಾರ ಸೇವನೆ, ಅತೀ ಎಣ್ಣೆಯುಕ್ತ ಆಹಾರ, ಸಿದ್ಧಪಡಿಸಿದ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ಬೊಜ್ಜು ಬರುತ್ತದೆ. ವಂಶಪಾರಂಪರ್ಯವಾಗಿಯೂ ಇದು ಬರಬಹುದು.

ಮುಂದಕ್ಕೆ ಹಿಂದಕ್ಕೆ ಬಾಗುವ, ತಿರುಚುವಿಕೆಯ ಹಾಗೂ ವಿವಿಧ ಸೂಕ್ತ ಸಂಬಂಧಿಸಿದ ಆಸನಗಳನ್ನು ಅಭ್ಯಾಸ ಮಾಡಿ. ಅಗ್ನಿಸಾರ, ಉಡ್ಡಿಯಾನ ಬಂಧ ಮತ್ತು ಸೂರ್ಯನಮಸ್ಕಾರಗಳು ಬೊಜ್ಜು ಕರಗಿಸಲು ತುಂಬ ಸಹಕಾರಿ. ಆರು ತಿಂಗಳು ಯೋಗತರಗತಿಗೆ ಹೋಗಿ ಗುರುಮುಖೇನ ಅಭ್ಯಾಸ ಮಾಡಿ. ಮುದ್ರೆಗಳಲ್ಲಿ ಸೂರ್ಯಮುದ್ರೆಯನ್ನು ಇಪ್ಪತ್ತರಿಂದ ನಲವತ್ತು ನಿಮಿಷ ಮಾಡಿ.

  • ನನಗೆ ಕುತ್ತಿಗೆ ಹಾಗೂ ಭುಜಗಳ ನೋವಿದೆ. ಇದಕ್ಕೆ ಯಾವ ಆಸನ ಮಾಡಬೇಕು ತಿಳಿಸಿ.

| ಮಂಜುನಾಥ್ ಎಚ್.ಸಿ. (64)

ನೀವು ಆರಂಭದಲ್ಲಿ ಸರಳ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ಸಾಕು. ತಾಡಾಸನ, ಕಟಿಚಕ್ರಾಸನ, ಪರ್ವತಾಸನ, ವಜ್ರಾಸನದಲ್ಲಿ ವಿನ್ಯಾಸ, ಮಾರ್ಜಾಲಾಸನ, ಉತ್ಥಾನ ಮಂಡೂಕಾಸನ, ಉತ್ಥಿತ ಏಕಪಾದಾಸನ, ಶವಾಸನ ಮಾಡಿ. ಇದರೊಂದಿಗೆ ಭುಜಗಳನ್ನು ತಿರುಗಿಸುವ ವ್ಯಾಯಾಮ ಅಭ್ಯಾಸ ಮಾಡಿ. ಪ್ರಾಣಾಯಾಮದಲ್ಲಿ ನಾಡಿಶುದ್ಧಿ, ಭ್ರಮರಿ ಪ್ರಾಣಾಯಾಮವನ್ನು ಹತ್ತು ನಿಮಿಷ ಹಾಗೂ ಬೆಳಗ್ಗೆ ಸಂಜೆ ಧ್ಯಾನವನ್ನು ಹತ್ತು ನಿಮಿಷ ಮಾಡಿ. ವಾಯುಶೂನ್ಯ ಮುದ್ರೆ ಇಪ್ಪತ್ತು ನಿಮಿಷ, ಗೋವಿಂದಮುದ್ರೆ 2 ನಿಮಿಷದ ಹಾಗೆ 3 ಬಾರಿ, ರುದ್ರನರಸಿಂಹ ಮುದ್ರೆ 2 ನಿಮಿಷದ ಹಾಗೆ 3 ಬಾರಿ, ಪ್ರಾಣಮುದ್ರೆ ಹತ್ತು ನಿಮಿಷ ಮಾಡಬೇಕು.

Leave a Reply

Your email address will not be published. Required fields are marked *