ಬೈ ಎಲೆಕ್ಷನ್​ನಲ್ಲಿತ್ತು… ಈಗ ಇಲ್ಲ….

ಶಿವಮೊಗ್ಗ: ಐದು ತಿಂಗಳ ಹಿಂದಷ್ಟೇ ನಡೆದ ಲೋಕಸಭೆ ಉಪಚುನಾವಣೆಗೆ ಮತದಾನ ಮಾಡಿದ್ದೆ. ಆದರೆ ಮಂಗಳವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ನನ್ನ ಹೆಸರು ಕೈಬಿಟ್ಟಿದ್ದು ಏಕೆ ಎಂಬುದು ಕಾಡುತ್ತಿದೆ.

ಇದು ಮತದಾನ ಅವಕಾಶದಿಂದ ವಂಚಿತರಾದ ವೃದ್ಧೆ ಬಿಲ್ಗುಣಿಯ ನಿಂಗಮ್ಮ ಅವರ ಅಸಮಾಧಾನದ ಕಿಡಿ. ಆಯೋಗವು ಮನಸ್ಸಿಗೆ ಬಂದಂತೆ ಹೆಸರನ್ನು ತೆಗೆದುಹಾಕಿದೆ. ಇನ್ನೂ ಜೀವಂತ ಇರುವಾಗಲೇ ಮತದಾನದ ಅವಕಾಶ ಕಸಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ಜಿಲ್ಲಾದ್ಯಂತ ಶಾಂತಿಯುತ ಮತದಾನ ನಡೆದರೆ, ಹಲವೆಡೆ ಮತದಾರರು ಆಯೋಗದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 2,021 ಮತಗಟ್ಟೆಗಳಿದ್ದು, ಪ್ರತಿ ಬೂತ್​ನಲ್ಲೂ ಕನಿಷ್ಠ ನಾಲ್ಕೈದು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಯಾವುದೆ ಕಾರಣ ನೀಡದೆ ಆಯೋಗ ಕೈಗೊಂಡ ನಿರ್ಧಾರಕ್ಕೆ ರಾಜಕೀಯ ಮುಖಂಡರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಈ ಬಾರಿ 41 ಸಾವಿರಕ್ಕೂ ಅಧಿಕ ಹೊಸ ಮತದಾರರು ಸೇರ್ಪಡೆಯಾಗಿದ್ದರೂ ಸಾವಿರಾರು ಮತದಾರರ ಹೆಸರನ್ನು ಕೈಬಿಟ್ಟಿದ್ದು, ಮತದಾನದ ಅವಕಾಶಕ್ಕೆ ನಾಲ್ಕೈದು ವರ್ಷ ಕಾಯುವಂತೆ ಮಾಡಿದೆ. ಈ ವೇಳೆ ಕೆಲವೆಡೆ ಮತದಾರರು ಮತಗಟ್ಟೆಗಳ ಸಿಬ್ಬಂದಿ ಜತೆಗೂ ವಾಗ್ವಾದವನ್ನೂ ನಡೆಸಿದರು.

Leave a Reply

Your email address will not be published. Required fields are marked *