ಬೈಕ್ ವ್ಹೀಲಿಂಗ್ ತಡೆಗೆ ವಿಶೇಷ ಕಾರ್ಯಾಚರಣೆ

| ಶಿವರಾಜ ಎಂ. ಬೆಂಗಳೂರು

ಮೋಜು ಮಸ್ತಿ ನೆಪದಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಕಂಟಕಪ್ರಾಯವಾಗಿರುವ ಬೈಕ್ ವ್ಹೀಲಿಂಗ್ ತಡೆಗಟ್ಟಲು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಶೇಷ ಕಾರ್ಯಾಚರಣೆಗಿಳಿದಿದ್ದಾರೆ.

ಗ್ರಾಮಾಂತರ ಜಿಲ್ಲೆಯ ಹೆದ್ದಾರಿಗಳಲ್ಲಿ ಬೈಕ್ ವ್ಹೀಲಿಂಗ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ರೂಪಿಸಲಾಗಿದೆ. ಪೊಲೀಸ್ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ಬೈಕ್ ವ್ಹೀಲಿಂಗ್ ವಿರುದ್ಧ ಹಲವು ಬಾರಿ ಜನಜಾಗೃತಿ ಮೂಡಿಸಲಾಗಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಅಪಾಯಕಾರಿ ಬೈಕ್ ವ್ಹೀಲಿಂಗ್ ತಡೆಗಟ್ಟುವಂತೆ ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದು, ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಹೆದ್ದಾರಿಗಳಲ್ಲೇ ಉಪಟಳ: ನೆಲಮಂಗಲ ರಾಷ್ಟ್ರೀಯ ಹೆದ್ದಾರಿ, ಹೊಸಕೋಟೆ, ದೇವನಹಳ್ಳಿ ತಾಲೂಕಿನ ಹೆದ್ದಾರಿ ಟೋಲ್​ಗಳ ಬಳಿ ಬೈಕ್ ವ್ಹೀಲಿಂಗ್ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಮುಖ್ಯವಾಗಿ ವಾರಾಂತ್ಯಗಳಲ್ಲಿ ಇದರ ಪ್ರಮಾಣ ಹೆಚ್ಚುತ್ತಿದೆ. ನಂದಿ ಗಿರಿಧಾಮಕ್ಕೆ ಸಾಗುವ ಮಾರ್ಗದಲ್ಲಿಯೂ ಕಿಡಿಗೇಡಿಗಳಿಂದ ಕೃತ್ಯ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಆಯಕಟ್ಟಿನಲ್ಲಿ ಪಹರೆ ಹಾಕಿ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸುತ್ತಿದ್ದಾರೆ.

ಮಾಲೀಕರ ಮೇಲೂ ಕೇಸ್: ಬೈಕ್ ವ್ಹೀಲಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳ ಜತೆಗೆ ವಾಹನ ನೀಡಿದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ. ಈ ಬಗ್ಗೆ ವಾಹನ ಮಾಲೀಕರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅನೇಕ ಪ್ರಕರಣಗಳಲ್ಲಿ ಮನೆಯಲ್ಲಿನ ಪಾಲಕರಿಗೂ ತಿಳಿಯದಂತೆ ಬೈಕ್ ತೆಗೆದುಕೊಂಡು ಬರುವ ಮಕ್ಕಳು ಇಂಥ ಅಪಾಯಕಾರಿ ಸಾಹಸ ನಡೆಸುತ್ತಿರುತ್ತಾರೆ. ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದರೆ, ಸಂಬಂಧಪಟ್ಟ ಪಾಲಕರ ವಿರುದ್ಧವೂ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳ ಚಟುವಟಿಕೆ ಮೇಲೆ ಪಾಲಕರು ನಿಗಾವಹಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

6 ತಿಂಗಳಿಂದ 1 ವರ್ಷ ಜೈಲು: ಠಾಣೆಯಲ್ಲಿ ದೂರು ದಾಖಲಾದರೆ ದಂಡದ ಜತೆಗೆ 6 ತಿಂಗಳಿಂದ 1 ವರ್ಷ ಜೈಲು ಶಿಕ್ಷೆಯಾಗಲಿದೆ. ಐಪಿಸಿ ಸೆಕ್ಷನ್ 279, 336 ಅಡಿಯಲ್ಲಿ ಮಾನವರ ಪ್ರಾಣಹಾನಿಗೆ ಸಂಬಂಧಪಟ್ಟಂತೆ ಅತಿವೇಗ, ಅಜಾಗರೂಕವಾದ ಅಪಾಯಕಾರಿ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ವ್ಹೀಲಿಂಗ್​ನಂಥ ಅಪಾಯಕಾರಿ ಚಾಲನೆ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೈಕ್​ಗಳನ್ನು ಜಪ್ತಿ ಮಾಡಿ ದಂಡ ಹಾಕಲಾಗುತ್ತದೆ. ಪುನರಾವರ್ತನೆಯಾದರೆ ಶಿಸ್ತು ಕ್ರಮ ಜರುಗಿಸಲಾಗುವುದು.

| ರಾಮ್​ವಾಸ್ ಸಪೆಟ್

ಎಸ್​ಪಿ ಬೆಂಗಳೂರು ಗ್ರಾಮಾಂತರ

ನಿತ್ಯ ಅಜಾಗರೂಕ ಚಾಲನೆ, ಅತಿವೇಗ ಮತ್ತಿತರ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಬೈಕ್ ವ್ಹೀಲಿಂಗ್​ನ ಅಪಾಯಕಾರಿ ಚಾಲನೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

| ಲಕ್ಷ್ಮೀನಾರಾಯಣ, ಪಿಎಸ್​ಐ

ನಂದಗುಡಿ ಠಾಣೆ

65 ಬೈಕ್ ವಶ: ನಂದಗುಡಿ: ಹೊಸಕೋಟೆ ತಾಲೂಕು ನಂದಗುಡಿ ಠಾಣೆ ಪೊಲೀಸರು ಶನಿವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ 65 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಶನಿವಾರ ಶಬ್ ಎ ಭರತ್ ಹಬ್ಬದ ಹಿನ್ನೆಲೆಯಲ್ಲಿ ಜಾಗರಣೆ ಇರುವವರು ಬೆಂಗಳೂರಿನಿಂದ ಹೊಸಕೋಟೆ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಬೈಕ್ ವ್ಹೀಲಿಂಗ್ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಆವಲಹಳ್ಳಿ, ಹೊಸಕೋಟೆ ಹಾಗೂ ನಂದಗುಡಿ ಠಾಣೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಹೊಸಕೋಟೆ ಪೊಲೀಸರು 50 ಹಾಗೂ ನಂದಗುಡಿ ಪೊಲೀಸರು 15 ಬೈಕ್​ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇನ್ನು ಹತ್ತಿಪ್ಪತ್ತು ಬೈಕ್​ಗಳ ಸವಾರರು ತಪ್ಪಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ. ಬೈಕ್​ಗಳೊಂದಿಗೆ ಕಾರು ಚಾಲಕರು ಸಹ ಅಪಾಯಕಾರಿ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ನಂದಗುಡಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಡಿವೈಎಸ್​ಪಿ ನಿಂಗಪ್ಪ ಬಸಪ್ಪ ಸಕ್ರಿ, ಹೊಸಕೋಟೆ ಸಿಪಿಐ ಶಿವರಾಜು, ನಂದಗುಡಿ ಠಾಣೆಯ ಸಿಪಿಐ ಮಂಜುನಾಥ್, ಪಿಎಸ್​ಐ ಲಕ್ಷ್ಮೀನಾರಾಯಣ, ಹೊಸಕೋಟೆ ಪಿಎಸ್​ಐ ರಾಜು, ಆವಲಹಳ್ಳಿ ಠಾಣೆಯ ರಘು ಕಾರ್ಯಾಚರಣೆಯಲ್ಲಿದ್ದರು.

Leave a Reply

Your email address will not be published. Required fields are marked *