ಬೈಕಿನಲ್ಲಿ ಸಂಸದರ ನಗರ ಪ್ರದಕ್ಷಿಣೆ

ಕೋಲಾರ: ‘ಎರಡು ವರ್ಷಗಳ ಹಿಂದೆ ಕ್ಲೀನ್ ಸಿಟಿ ಆಗಿದ್ದ ಕೋಲಾರ ಈಗ ಗಾರ್ಬೆಜ್ ಸಿಟಿಯಾಗಿದೆ. ನಿತ್ಯ ಇದೇ ರಸ್ತೆಯಲ್ಲಿ ಓಡಾಡುತ್ತಿರುವ ನಿಮಗೆ ನಾಚಿಕೆ ಆಗಲ್ವಾ? ಇನ್ನೇನು ಕೆಲಸ ಮಾಡಿಸುತ್ತೀರಿ? ಕಟ್ಟಡ ನಿರ್ಮಾಣ ಮಾಡುವವರಲ್ಲಿ ಕಾಸು ವಸೂಲಿ ಮಾಡ್ಕೊಂಡು ಬರೋದಷ್ಟೇನಾ ಕೆಲಸ? ಕುಡಿಯುವ ನೀರು ಸರಬರಾಜಿನಲ್ಲಿ ಜನರನ್ನು ಯಾಮಾರಿಸಲು ಆಗದು, ನಿಮ್ಮ ನಾಟಕ ಎಲ್ಲವೂ ಗೊತ್ತಾಗಿದೆ’

ನೂತನ ಸಂಸದ ಎಸ್.ಮುನಿಸ್ವಾಮಿ ಬೈಕಿನಲ್ಲಿ ನಗರ ಪ್ರದಕ್ಷಿಣೆ ಮಾಡಿ ನಂತರ ನಗರಸಭೆ ಇಂಜಿನಿಯರ್​ಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

ನಗರಸಭೆ ಕಚೇರಿಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ಸಂಸದರು, ವಾರದಲ್ಲಿ ಇಡೀ ನಗರ ಸ್ವಚ್ಛವಾಗಿರಬೇಕು, ಅಗತ್ಯವಿದ್ದರೆ ಬಾಡಿಗೆಗೆ ಟ್ರಾ್ಯಕ್ಟರ್ ಪಡೆದು ಸೂಕ್ತ ಸ್ಥಳದಲ್ಲಿ ಕಸ ವಿಲೇವಾರಿ ಮಾಡಿ ಎಂದು ಆರೋಗ್ಯ ನಿರೀಕ್ಷಕಿ ಮರಿಯಾಗೆ ಸೂಚಿಸಿದರು.

ಅಮೃತ ಯೋಜನೆಯನ್ವಯ ನಡೆದಿರುವ ಕಾಮಗಾರಿಗಳ ಕುರಿತು ಇಂಜಿನಿಯರ್​ಗಳಿಂದ ಮಾಹಿತಿ ಪಡೆದು, ಮಂಜೂರಾದ 210 ಕೋಟಿ ರೂ. ಹೇಗೆ ಖರ್ಚಾಗಿದೆಯೋ ಗೊತ್ತಿಲ್ಲ. ಅವ್ಯವಸ್ಥೆ ನೋಡಿದರೆ ಅಕ್ರಮ ನಡೆದಿರುವ ಸಾಧ್ಯತೆಯಿರುವುದರಿಂದ ಮೇಲಧಿಕಾರಿ ಗಮನಕ್ಕೆ ತಂದು ತನಿಖೆ ನಡೆಸುವುದಾಗಿ ಹೇಳಿದರು.

ಪ್ಲಾಸ್ಟಿಕ್ ನಿಷೇಧ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಅನುಷ್ಠಾನಗೊಂಡಿಲ್ಲ. ಇರುವ ಪ್ಲಾಸ್ಟಿಕ್​ಗಳನ್ನು ಖಾಲಿ ಮಾಡಲು ಮಾರಾಟಗಾರರಿಗೆ 1 ವಾರ ಗಡುವು ನೀಡಿ, ನಂತರ ಪ್ಲಾಸ್ಟಿಕ್ ಮಾರಾಟ ನಡೆದರೆ ದಂಡ ವಿಧಿಸಿ ಎಂದು ಸೂಚಿಸಿದರು. ವಾರದೊಳಗೆ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕೆ ಕ್ರಮ ಜರುಗಿಸಿ ಎಂದು ಇಂಜಿನಿಯರ್​ಗಳಿಗೆ ತಾಕೀತು ಮಾಡಿದರು.

ದಿಢೀರ್ ರಜೆ ಹಾಕಿದ ಪೌರಾಯುಕ್ತ: ನಗರ ಪ್ರದಕ್ಷಿಣೆಯಲ್ಲಿ ಸಂಸದರ ಜತೆಗಿದ್ದ ನಗರಸಭೆ ಪೌರಾಯುಕ್ತ ಟಿ.ಆರ್. ಸತ್ಯನಾರಾಯಣ ಮಧ್ಯಾಹ್ನದ ವೇಳೆ ಅನಾರೋಗ್ಯದ ಕಾರಣ ಹೇಳಿ 4 ದಿನಗಳ ಸಾಂರ್ದಭಿಕ ರಜೆ ಪಡೆದು ತೆರಳಿದ್ದಾರೆ. 11 ಗಂಟೆಗೆ ನಗರಸಭೆಯಲ್ಲಿ ಸಭೆ ನಡೆಸುವುದಾಗಿ ಹೇಳಿದ್ದ ಸಂಸದರು 11.30ಕ್ಕೆ ಕಚೇರಿಗೆ ಆಗಮಿಸಿದಾಗ ಪೌರಾಯುಕ್ತರು ಇರಲಿಲ್ಲ. ಎಇಇ ಸುಧಾಕರ್​ಶೆಟ್ಟಿ, ಎಇ ಪೂಜಾರಪ್ಪ ಪೌರಾಯುಕ್ತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 12ರ ವೇಳೆಗೆ ಖಾಸಗಿ ನರ್ಸಿಂಗ್ ಹೋಂನಲಿ ್ಲ ಹೊರರೋಗಿಯಾಗಿ ದಾಖಲಾದ ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಅನಾರೋಗ್ಯದ ಕಾರಣ ನೀಡಿ ನಾಲ್ಕು ದಿನಗಳ ಸಾಂರ್ದಭಿಕ ರಜೆ ಕೋರಿ ಜಿಲ್ಲಾಧಿಕಾರಿಗೆ ಬರೆದ ಪತ್ರ ಸಂಸದರ ಕೈ ಸೇರಿದೆ.

ಗರಂ ಆದ ಸಂಸದ ಎಸ್.ಮುನಿಸ್ವಾಮಿ ಪೌರಾಯುಕ್ತರ ಪಲಾಯನವಾದ ಸಹಿಸಲ್ಲ. ಪೌರಾಡಳಿತ ಸಚಿವರ ಗಮನಕ್ಕೆ ತರುತ್ತೇನೆ. ಪೌರಾಯುಕ್ತರು ಪಿಡಿಒ ಆಗಲೂ ನಾಲಾಯಕ್. ಸರ್ಕಾರ ವರ್ಗಾಯಿಸಿದಾಗ ಯಾರನ್ನೋ ಹಿಡಿದು ಇಲ್ಲಿಗೇ ಬಂದು ಜನರಿಗೆ ಮೋಸ ಮಾಡಿ ಈಗ ಸಿಕ್ಕಿಬಿದ್ದಿದ್ದಾರೆ. ಜನರನ್ನು ಗೋಳಾಡಿಸದೆ ಕೆಲಸ ಮಾಡುವುದಾದರೆ ಮಾಡಲಿ, ಇಲ್ಲವೇ ತಾವಾಗಿಯೇ ವರ್ಗಾವಣೆ ಮಾಡಿಸಿಕೊಂಡು ಹೋಗಲಿ ಎಂದು ಅಬ್ಬರಿಸಿದರು.

ಪ್ರಭಾರ ಬೇಡ: ಪೌರಾಯುಕ್ತರು ಪತ್ರದಲ್ಲಿ ದೈನಂದಿನ ಕೆಲಸ ನಿರ್ವಹಿಸಲು ಎಇಇ ಸುಧಾಕರ್ ಶೆಟ್ಟಿಗೆ ಸೂಚಿಸಿದ್ದರಿಂದ ಪ್ರಭಾರ ವಹಿಸಿಕೊಳ್ಳುವಂತೆ ಸಂಸದರು ಸೂಚಿಸಿದಾಗ ನಿರಾಕರಿಸಿದರು. ಅವಕಾಶ ಸಿಕ್ಕಾಗ ಅಧಿಕಾರ ಬಳಸಿಕೊಂಡು ಉತ್ತಮ ಜನಸೇವೆ ಮಾಡಬೇಕು. ಹಿಂದೆ ಸರಿಯುವುದು ಹೇಡಿಗಳ ಲಕ್ಷಣ, ಕೆಲಸ ಮಾಡಿ ಎಂದು ಧೈರ್ಯ ತುಂಬಿದರು.

ಬೈಕ್​ನಲ್ಲಿ ಸಂಚಾರ: ಕಸ ಸಮಸ್ಯೆ ವೀಕ್ಷಿಸಲು ಸಂಸದರು ಎಂಜಿ ರಸ್ತೆ, ಕಠಾರಿಪಾಳ್ಯ, ಬಸ್ ನಿಲ್ದಾಣ ವೃತ್ತ, ಬಂಬೂ ಬಜಾರ್ ರಸ್ತೆ, ಅಂತರಗಂಗೆ, ಡೂಂಲೈಟ್ ವೃತ್ತ ಸೇರಿ ವಿವಿಧ ವಾರ್ಡ್​ಗಳಲ್ಲಿ ಬೆಳಗಿನ ವಾಯು ವಿಹಾರದ ಧಿರಿಸಿನಲ್ಲೇ ಸುತ್ತಾಡಿ ಅಧಿಕಾರಿಗಳಿಗೆ ಕಸದ ರಾಶಿಯ ದರ್ಶನ ಮಾಡಿಸಿದರು. ಸ್ವಲ್ಪ ದೂರ ಆಯುಕ್ತರನ್ನು ಹಿಂಬದಿ ಕೂರಿಸಿಕೊಂಡಿದ್ದರು.

ಕಸದಿಂದ ರಸ ತಿನ್ನೋಕೆ ಬಂದ್ರಾ?: ಕಸ ಕೊಳೆತು ನಾರುತ್ತಿದೆ, ಮಳೆ ಬೀಳುತ್ತಿರುವುದರಿಂದ ಇನ್ನಷ್ಟು ಕೊಳೆತು ಸಾಂಕ್ರಾಮಿಕ ರೋಗ ಬಂದರೆ ಜನರ ಗತಿ ಏನು? ಕಸ ವಿಲೇವಾರಿಗೆ 10 ಎಕರೆ ಜಾಗ ನೀಡಿದ್ದರೂ ಬಳಸಿಕೊಳ್ಳುತ್ತಿಲ್ಲ. ವರ್ಗಾವಣೆ ಮಾಡಿದಾಗ ಕೋರ್ಟ್​ನಿಂದ ತಡೆಯಾಜ್ಞೆ ತಂದು ಕಸದಿಂದ ರಸ ತಿನ್ನೋಕೆ ಬಂದ್ರಾ ಎಂದು ಪೌರಾಯುಕ್ತ ಸತ್ಯನಾರಾಯಣ ಅವರನ್ನು ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡರು. ಜಾಗ ಸಂಪೂರ್ಣವಾಗಿ ನಗರಸಭೆಗೆ ಹಸ್ತಾಂತರವಾಗಿಲ್ಲ. ಪೌರಕಾರ್ವಿುಕರ ಕೊರತೆ ಇದ್ದರೂ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂದು ಆಯುಕ್ತರು ಸಮಜಾಯಿಷಿ ನೀಡಿದರು.

ಗೌರವ ಕೊಡೋದು ಕಲಿಯಿರಿ: ನಗರಸಭೆ ಪೌರಕಾರ್ವಿುಕರ ಸಮಸ್ಯೆಗಳಿಗೆ ಆರೋಗ್ಯ ನಿರೀಕ್ಷಕಿ ಮರಿಯಾ ಸ್ಪಂದಿಸುವುದಿಲ್ಲ. ಗುಣಮಟ್ಟದ ಉಪಹಾರ ನೀಡುತ್ತಿಲ್ಲ ಎಂದು ಪೌರ ಕಾರ್ವಿುಕರು ಸಂಸದರ ಗಮನಕ್ಕೆ ತಂದಾಗ ಆಕ್ರೋಶಗೊಂಡ ಮುನಿಸ್ವಾಮಿ, ಮೊದಲು ಸಿಬ್ಬಂದಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ತಾಕೀತು ಮಾಡಿದರು.

Leave a Reply

Your email address will not be published. Required fields are marked *