ಅಳ್ನಾವರ: ಕಳೆದ ವರ್ಷ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಡೌಗಿ ನಾಲೆಯ ಬ್ಯಾರೇಜ್ ಇನ್ನೂ ದುರಸ್ತಿಯಾಗಿಲ್ಲ. ಇದರಿಂದಾಗಿ ಪಟ್ಟಣದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸ್ಥಳೀಯ ಅಧಿಕಾರಿಗಳು ಹರಸಾಹಸ ಮಾಡುವಂತಾಗಿದೆ.
20 ಸಾವಿರ ಜನಸಂಖ್ಯೆಯುಳ್ಳ ಅಳ್ನಾವರಕ್ಕೆ ಪೂರೈಸಲು ಡೌಗಿ ನಾಲೆಯಲ್ಲಿ ನೀರು ಸಂಗ್ರಹಿಸಲಾಗುತ್ತಿತ್ತು. ಖಾನಾಪುರ ತಾಲೂಕಿನ ಅರಣ್ಯದಲ್ಲಿ ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಮಹಾಪೂರ ಉಂಟಾಗಿ ಡೌಗಿ ನಾಲೆ ಪಕ್ಕದ ಕೃಷಿ ಜಮೀನುಗಳು ಕೊಚ್ಚಿ ಹೋಗಿದ್ದವು. ಅಲ್ಲದೆ, ಪಟ್ಟಣದ ದೇಸಾಯಿ ಚಾಳ, ಕಾಲೆ ಪ್ಲಾಟ್, ತಿಲಕ ನಗರದಲ್ಲಿ ನೀರು ನುಗ್ಗಿ ಹಲವು ಮನೆಗಳು ಬಿದ್ದು ಹೋಗಿದ್ದವು. ಈ ವೇಳೆ ಡೌಗಿ ನಾಲೆಯ ಬ್ಯಾರೇಜ್ನ ಅಕ್ಕ- ಪಕ್ಕ 25 ಅಡಿಯಷ್ಟು ಭೂಮಿ ಕೊಚ್ಚಿ ಹೋಗಿದ್ದರಿಂದ ನಾಲೆಯಲ್ಲಿ ನೀರು ಸಂಗ್ರಹಗೊಳ್ಳದಂತಾಗಿದೆ. ಹೀಗಾಗಿ ಅಳ್ನಾವರ ಪಟ್ಟಣಕ್ಕೆ 6 ದಿನಗಳ ಬದಲು 8 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಸತತ 5 ವರ್ಷಗಳಿಂದ ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಸಮಸ್ಯೆ ನಿರ್ವಹಿಸಲು ಸುತ್ತಮುತ್ತಲಿನ ಗ್ರಾಮಗಳ ಹೊಲಗಳಲ್ಲಿನ ಬೋರ್ವೆಲ್ಗಳಿಂದ ನೀರನ್ನು ಟ್ಯಾಂಕರ್ ಮೂಲಕ ಪಟ್ಟಣದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಂಗ್ರಹಿಸಿ ಬಳಿಕ ಮನೆ-ಮನೆಗೆ ಪೂರೈಸಲಾಗುತ್ತಿತ್ತು. ಈಗ ಉಂಟಾದ ನೀರಿನ ಸಮಸ್ಯೆ ನಿವಾರಣೆಗಾಗಿ ಬೇಸಿಗೆ ಕಾಲ ಮುಗಿಯುವರೆಗೆ ತಾಲೂಕಿನ ಹುಲಿಕೆರೆಯ ಇಂದಿರಮ್ಮನ ಕೆರೆಯಿಂದ ನೀರನ್ನು ಸಂಗ್ರಹಿಸಬೇಕಾಗಿದೆ.
ಡೌಗಿ ನಾಲೆಯ ದುರಸ್ತಿಗೆ ಸರ್ಕಾರದಿಂದ 45 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. | ವೈ.ಜಿ. ಗದ್ದಿಗೌಡರ ಮುಖ್ಯಾಧಿಕಾರಿ, ಪಪಂ, ಅಳ್ನಾವರ