ಅಮೀನಗಡ: ಹುನಗುಂದ ತಾಲೂಕು ವ್ಯಾಪ್ತಿಯ ಅಮೀನಗಡ ಪಟ್ಟಣವನ್ನು ಬಾಗಲಕೋಟೆ ಇಲ್ಲವೆ ಗುಳೇದಗುಡ್ಡ ತಾಲೂಕಿಗೆ ಸೇರ್ಪಡೆಗೊಳಿಸುವುದನ್ನು ಸ್ಥಳೀಯರು, ಜನಪ್ರತಿನಿಧಿಗಳು, ವಿವಿಧ ಸಮಾಜದ ಗಣ್ಯರು, ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರೂ ವಿರೋಧಿಸಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ ಬೇರೆ ತಾಲೂಕಿಗೆ ಅಮೀನಗಡ ಸೇರ್ಪಡೆಗೊಳಿಸುವ ಕುರಿತು ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಒಕ್ಕೊರಲ ವಿರೋಧ ವ್ಯಕ್ತವಾಯಿತು.
ಕಂದಾಯ ನಿರೀಕ್ಷಕ ಡಿ.ಎಸ್. ಯತ್ನಟ್ಟಿ ಮಾತನಾಡಿ, ಬಾಗಲಕೋಟೆ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹುನಗುಂದ ತಾಲೂಕಿನ ಪಟ್ಟಣ ಹಾಗೂ ಗ್ರಾಮಗಳನ್ನು ಗುಳೇದಗುಡ್ಡ ಇಲ್ಲವೆ ಬಾಗಲಕೋಟೆ ತಾಲೂಕಿಗೆ ಸೇರ್ಪಡೆಗೊಳಿಸಲು ಸಂಬಂಧಿಸಿದವರಿಗೆ ಆದೇಶಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸಭೆಯಲ್ಲಿ ಸಂಗ್ರಹಿಸಿದ ಅಭಿಪ್ರಾಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಮುಖಂಡರಾದ ಜಗದೀಶ್ ಬಿಸಿಲದಿನ್ನಿ, ರಮೇಶ ಮುರಾಳ, ವಿಜಯಕುಮಾರ ಕನ್ನೂರ ಮಾತನಾಡಿ, ಪಟ್ಟಣದಿಂದ ಹುನಗುಂದ ತಾಲೂಕು ಕೇಂದ್ರ 12 ಕಿ.ಮೀ. ದೂರದಲ್ಲಿದೆ. ಬಾಗಲಕೋಟೆ ಹಾಗೂ ಗುಳೇದಗುಡ್ಡ ತಾಲೂಕಿಗೆ ಸೇರ್ಪಡೆಯಾದರೆ ಬಹಳ ದೂರವಾಗಲಿದೆ. ಬಾಗಲಕೋಟೆ ತಾಲೂಕು ಕೇಂದ್ರ ಅಮೀನಗಡದಿಂದ 45 ಕಿ.ಮೀ. ಹಾಗೂ ಗುಳೇದಗುಡ್ಡ ತಾಲೂಕು ಕೇಂದ್ರ 26 ಕಿ.ಮೀ. ದೂರದಲ್ಲಿದೆ. ಹೀಗಾಗಿ ಅಮೀನಗಡ ಪಟ್ಟಣವನ್ನು ಯಾವುದೇ ಕಾರಣಕ್ಕೂ ಬೇರೆ ತಾಲೂಕಿಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿದರು.
ನಾಡ ಕಾರ್ಯಾಲಯದ ಉಪತಹಸೀಲ್ದಾರ್ ಎಂ.ಆರ್. ಹೆಬ್ಬಳ್ಳಿ ಮಾತನಾಡಿದರು. ಪಪಂ ಸದಸ್ಯರಾದ ತುಕಾರಾಮ ಲಮಾಣಿ, ಸಂತೋಷ ಕಂಗಳ, ರಮೇಶ ಮುರಾಳ, ಮುಖಂಡರಾದ ಯಮನಪ್ಪ ಕತ್ತಿ, ಅಶೋಕ ಚಿಕ್ಕಗಡೆದ, ವಿಲಾಸ ಮೆಣಸಗಿ, ಮಲ್ಲೇಶ ನಿಡಗುಂದಿ, ಅಜ್ಮೀರ್ ಮುಲ್ಲಾ, ಎಸ್.ಎಸ್. ಚಳ್ಳಗಿಡದ, ಶಶಿ ಪಾಟೀಲ, ರಾಹುಲ ಚೌಹಾಣ, ದಾವಲಸಾಬ ಬಾಗೇವಾಡಿ ಇದ್ದರು.
ಈ ಪ್ರಕ್ರಿಯೆ ಯಾಕೆ? : ಹುನಗುಂದ ತಾಲೂಕಿಗೆ ಒಳಗೊಂಡ ಅಮೀನಗಡ, ಕಮತಗಿ, ಐಹೊಳೆ, ಕಳ್ಳಿಗುಡ್ಡ, ಮುಳ್ಳೂರ, ಮಾದಾಪುರ, ನಿಂಬಲಗುಂದಿ, ಬಸರಿಕಟ್ಟಿ, ಹೂವಿನಹಳ್ಳಿ, ಮುರಡಿ, ರಾಮಥಾಳ, ಕಡಿವಾಲ, ಬೇವಿನಾಳ, ಬಸವನಾಳ, ಬೂದಿಹಾಳ, ಅಂಬ್ಲಿಕೊಪ್ಪ, ಹಿರೇಮಾಗಿಯನ್ನು ಬಾಗಲಕೋಟೆ ಮತ್ತು ಗುಳೇದಗುಡ್ಡ ತಾಲೂಕಿಗೆ ಸೇರಿಸಲು ಶಾಸಕರು ಪತ್ರ ಬರೆದ ಹಿನ್ನೆಲೆಯಲ್ಲಿ ಕಂದಾಯ ಸಚಿವರು ಸೂಚನೆಯಂತೆ ಈ ಪ್ರಕ್ರಿಯೆ ನಡೆದಿದೆ.