ಬೇಡಿಕೆ ಈಡೇರಿಸಲು ಪ್ರಧಾನ ಕಾರ್ಯದರ್ಶಿಗೆ ಮನವಿ

ಧಾರವಾಡ: ಶಿಕ್ಷಕರ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗುರುವಾರ ನಗರಕ್ಕೆ ಆಗಮಿಸಿದ್ದ ಉಮಾಶಂಕರ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಭೇಟಿ ಮಾಡಿದ ಸಂಘದ ಸದಸ್ಯರು, ಎರಡು ವರ್ಷಗಳಿಂದ ವರ್ಗಾವಣೆ ಆಗದೇ ಇರುವುದರಿಂದ ಚುನಾವಣೆ ನಂತರದಲ್ಲಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಮನವಿಪತ್ರ ಸಲ್ಲಿಸಿದರು.

ಇದಲ್ಲದೆ ಪದವೀಧರರಿಗೆ ಬಡ್ತಿ ನೀಡುವುದು ಹಾಗೂ ಇತರೆ ಶಿಕ್ಷಕರಿಗೆ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ನೀಡುವುದು, ಎಸ್​ಎಸ್​ಎ ಶಿಕ್ಷಕ ವೇತನ ನಿಯಮಿತವಾಗಿ ಬಟವಡೆ ಮಾಡುವುದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿರುವ ಶಿಕ್ಷಕರ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ಬೇಸಿಗೆ ಸಂಭ್ರಮದ ದಿನಗಳಲ್ಲಿ 15 ದಿನಕ್ಕೆ ಸೀಮಿತಗೊಳಿಸುವುದು ಸೇರಿದಂತೆ ಗ್ರಾಮೀಣ ಕೃಪಾಂಕ ಶಿಕ್ಷಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿದರು.

ಈ ವೇಳೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ವತಿಯಿಂದ ಸಹ ಮನವಿಪತ್ರ ಸಲ್ಲಿಸಲಾಯಿತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಅಧ್ಯಕ್ಷ ವೈ.ಎಚ್. ಬಣವಿ, ಶಹರ ಘಟಕ ಅಧ್ಯಕ್ಷ ಅಜಿತಕುಮಾರ ದೇಸಾಯಿ, ತಾಲೂಕು ಘಟಕ ಅಧ್ಯಕ್ಷ ಆರ್.ಬಿ. ಲಿಂಗದಾಳ, ಪದಾಧಿಕಾರಿಗಳು, ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಗೌರವಾಧ್ಯಕ್ಷ ಎಲ್.ಐ. ಲಕ್ಕಮ್ಮನವರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಜಿಲ್ಲಾಧ್ಯಕ್ಷ ಗೋವಿಂದ ಜುಜಾರೆ, ಪ್ರಧಾನ ಕಾರ್ಯದರ್ಶಿ ಡ್ಯಾನಿಯಲ್ ಗುಂಜಾಳ, ದೇವಿಕಾ ಕಮ್ಮಾರ, ಸುರೇಶ ಅರಳಿ, ಇತರರು ಇದ್ದರು.