ಬೇಡಿಕೆಗಳ ಈಡೇರಿಕೆಗೆ ಮನವಿ

ರಟ್ಟಿಹಳ್ಳಿ: ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ನೀರು ಶುದ್ಧೀಕರಣ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಿಬ್ಬಂದಿ ಹಾಗೂ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೇದಾರ ಜಿ.ಎನ್. ಕಟ್ಟೀಮನಿ ಅವರಿಗೆ ಮನವಿ ಸಲ್ಲಿಸಿದರು.

‘ತಾಲೂಕಿನ ಬೈರನಪಾದ ಮತ್ತು ಕಡೂರ ಗ್ರಾಮಗಳ ಬಳಿ ಸ್ಥಾಪಿಸಿರುವ ಎರಡು ಶುದ್ಧೀಕರಣ ಘಟಕಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಕನಿಷ್ಠ 3 ತಿಂಗಳಿಗೊಮ್ಮೆ ನೀರು ಶುದ್ಧೀಕರಣಕ್ಕಾಗಿ ಮರಳು ಬದಲಾಯಿಸಬೇಕು. ಕ್ಲೋರಿನ್ ಹಾಗೂ ಅಲಂ ರಸಾಯನಿಕಗಳನ್ನು ಬಳಸಬೇಕು. ಆದರೆ, ವರ್ಷಗಳೇ ಕಳೆದರೂ ಕ್ರಮ ಕೈಗೊಳ್ಳದೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಕಲುಷಿತ ನೀರು ಸೇವಿಸಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ’ ಎಂದು ಸಿಬ್ಬಂದಿ ಆರೋಪಿಸಿದರು.

7-8 ವರ್ಷಗಳಿಂದ 2 ಶುದ್ಧೀಕರಣ ಘಟಕಗಳಲ್ಲಿ 35 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಕನಿಷ್ಠ ವೇತನ ನೀಡದೇ ಸತಾಯಿಸಲಾಗುತ್ತಿದೆ. 2017 ಏಪ್ರಿಲ್ 1ರಂದು ಸರ್ಕಾರ ನಿಗದಿಪಡಿಸಿದ ಪ್ರಕಾರ ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕನಿಷ್ಠ ವೇತನ ನೀಡುವಂತೆ ಸೂಚಿದ್ದರು. ಆದರೆ, ಇಲ್ಲಿಯವರೆಗೆ ಪಾವತಿಸಿಲ್ಲ. ಗುತ್ತಿಗೆದಾರರು ಸಿಬ್ಬಂದಿಗೆ ರಜೆ ನೀಡುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ಗುತ್ತಿಗೆದಾರರ ನವೀಕರಣ ತಡೆಯಬೇಕು. ಸಿಬ್ಬಂದಿಗೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸುರಕ್ಷತಾ ಉಪಕರಣಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಅವ್ಯವಸ್ಥೆ ಬಗ್ಗೆ ‘ವಿಜಯವಾಣಿ’ ಪತ್ರಿಕೆಯಲ್ಲಿ ಮಾರ್ಚ್ 10ರಂದು ಪ್ರಕಟಗೊಂಡ ವಿಸõತ ವರದಿ ಸಮೇತ ಮನವಿ ಪತ್ರವನ್ನು ಶಿರಸ್ತೇದಾರ್ ಜಿ.ಎನ್. ಕಟ್ಟೀಮನಿ ಅವರಿಗೆ ಸಲ್ಲಿಸಲಾಯಿತು.

ಸಿದ್ದನಗೌಡ ಗುಬ್ಬಿ, ಎಸ್.ಆರ್. ದೊಡ್ಡಬಸಪ್ಪನವರ, ಉಜಿನಪ್ಪ ಕೋಡಿಹಳ್ಳಿ, ಸಿಬ್ಬಂದಿ ಚಂದ್ರಪ್ಪ ಮಲೇಬೆನ್ನೂರ, ಜಗದೀಶ ಕುಡುಪಲಿ, ರಮೇಶ ಕುಡುಪಲಿ, ಹನುಮಂತ ಮಾಗನೂರ, ರಮೇಶ ಕೋಣನತಲಿ, ಮಂಜು ಅಂತರವಳ್ಳಿ, ಬಸವರಾಜ ಹಾದಿಮನಿ, ಮಂಜಪ್ಪ ನಿಟ್ಟೂರ, ಚಂದ್ರು ಅಲದಕಟ್ಟಿ, ಸುಧಾಕರ ಕುಂಬಳೂರ, ಇತರರು ಇದ್ದರು.