ಬೇಕಾಬಿಟ್ಟಿಯಾಗಿ ಶಾಲೆ ಕಟ್ಟಡ ಮಂಜೂರು

ಜೊಯಿಡಾ: ತಾಪಂ ಅಧ್ಯಕ್ಷೆ ನರ್ಮದಾ ಪಾಟ್ನೇಕರ ಅಧ್ಯಕ್ಷತೆಯಲ್ಲಿ ತಾಪಂ ಪ್ರಗತಿ ಪರಿಶೀಲನೆ ಸಭೆ ಮಂಗಳವಾರ ಜರುಗಿತು. ಶಿಕ್ಷಣ ಇಲಾಖೆ ಕುರಿತು ಬಿಇಒ ಮಾಹಿತಿ ನೀಡಲು ಮುಂದಾದಾಗ ಮಧ್ಯೆ ಪ್ರವೇಶಿಸಿದ ಸದಸ್ಯ ಶರತ ಗುರ್ಜರ, ‘ನೀವು ಬೇಕಾದ ಕಡೆ ಶಾಲಾ ಕಟ್ಟಡ ಕೊಡದೇ ಬೇಡದ ಶಾಲೆಗಳಿಗೆ ಮಂಜೂರು ಮಾಡಿದ್ದೀರಿ ಏಕೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಂಜಯ ಹಣಬರ, ‘ತಾಲೂಕಿನ ಅನೇಕ ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಅಂಥ ಶಾಲೆಗಳಿಗೆ ಕಟ್ಟಡ ಮಂಜೂರು ಮಾಡಿ. ನಿಮ್ಮ ಮನಸ್ಸಿಗೆ ಬಂದಂತೆ ಹಂಚ ಬೇಡಿ’ ಎಂದು ತರಾಟೆಗೆ ತೆಗೆದುಕೊಂಡರು.

ಆರೋಗ್ಯ ಇಲಾಖೆಯ ಮಾಹಿತಿ ನೀಡಿದ ಡಾ. ಸುಜಾತಾ ಉಕ್ಕಲಿ, ‘ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಅಣಶಿಯಲ್ಲಿ 6, ಕರಂಬಾಳಿಯಲ್ಲಿ 3 ಮಂಗ ಸತ್ತಿದ್ದು, ಕಾಯಿಲೆಯಿಂದ ಅಲ್ಲ ಎಂಬ ವರದಿ ಬಂದಿದೆ’ ಎಂದು ಹೇಳಿದರು.

ಸಾರಿಗೆ ಇಲಾಖೆಯಿಂದ ಬಜಾರಕುಣಂಗಗೆ ಬಸ್ ಬಿಡಲಾಗಿದೆ. ಆದರೆ, ಅಲ್ಲಿ ರಸ್ತೆ ಹಾಳಾದ ಕಾರಣ ಬಸ್​ಗಳೂ ಹಾಳಾಗುತ್ತಿವೆ. ಹೀಗಾಗಿ ರಸ್ತೆ ಸರಿಪಡಿಸಿ ಎಂದು ಘಟಕ ವ್ಯವಸ್ಥಾಪಕ ತಿಳಿಸಿದರು. ಈ ವೇಳೆ ಮಾತನಾಡಿದ ಪ್ರಕಾಶ ಎಚ್, ‘ಈ ಹಿಂದೆ ನಾಗೋಡಾ ಮಾರ್ಗಕ್ಕೆ ಬಸ್ ಒದಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಈವರೆಗೆ ಕಾರ್ಯ ರೂಪಕ್ಕೆ ಬಂದಿಲ್ಲ’ ಎಂದರು. ಪ್ರತಿಕ್ರಿಯಿಸಿದ ವ್ಯವಸ್ಥಾಪಕ, ‘ಅಲ್ಲಿಯೂ ರಸ್ತೆ ಸರಿಯಿಲ್ಲ’ ಎಂದರು.

ಲೋಕೋಪಯೋಗಿ, ತೋಟಗಾರಿಕೆ, ಕೃಷಿ ಹಾಗೂ ಅರಣ್ಯ ಇಲಾಖೆೆ ಅಧಿಕಾರಗಳು ಇದ್ದರು.

ನೆಟ್ ಇಲ್ಲ, ಫೋನೂ ಇಲ್ಲ..!

ಸರ್ಕಾರಿ ಪದವಿ ಕಾಲೇಜ್ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಪ್ರಾಂಶುಪಾಲ ಎಸ್. ಅಂಗಡಿ, ‘ಕಾಲೇಜ್ ಆರಂಭವಾಗಿ 10 ವರ್ಷ ಪೂರೈಸಿದೆ. ಆದರೆ, ಕಳೆದ 9 ತಿಂಗಳಿನಿಂದ ಟೆಲಿಫೋನ್, ಇಂಟರ್​ನೆಟ್ ಇಲ್ಲ, ವಿದ್ಯುತ್ ಬಿಲ್ ಕಟ್ಟಿಲ್ಲ’ ಎಂದು ಅಳಲು ತೋಡಿಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು, ‘ಕಾಲೇಜ್​ಗೆ ನೀರು ಕೊಟ್ಟರೆ, ಪಕ್ಕದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಒದಗಿಸಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಕಾಲೇಜ್​ನ ಮಣ್ಣಿನ ರಸ್ತೆಯನ್ನು 30 ಮೀ.ಗೆ ಅಭಿವೃದ್ಧಿ ಪಡಿಸುವ ಕುರಿತು ರ್ಚಚಿಸಲಾಯಿತು.