ಬೇಂದ್ರೆ ಬಸ್ ಸಂಚಾರ ವಿರಳ

ಧಾರವಾಡ: ರಹದಾರಿ ಪರವಾನಗಿ ಮುಗಿದ ಹಿನ್ನೆಲೆಯಲ್ಲಿ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ 41 ಬಸ್​ಗಳ ಪೈಕಿ ಸೋಮವಾರ ಕೇವಲ 9 ಬಸ್​ಗಳು ಮಾತ್ರ ಸಂಚರಿಸಿದವು.

ಹುಬ್ಬಳ್ಳಿ- ಧಾರವಾಡ ಮಧ್ಯೆ ಈವರೆಗೆ 41 ಬೇಂದ್ರೆ ಬಸ್​ಗಳ ಸಂಚಾರಕ್ಕೆ ರಹದಾರಿ ಪಡೆಯಲಾಗಿತ್ತು. ಜೂ. 28 ಹಾಗೂ 30ರಂದು 32 ಬಸ್​ಗಳ ರಹದಾರಿ ಅಂತ್ಯಗೊಂಡಿದೆ.

ಅವಳಿನಗರ ಮಧ್ಯೆ ಸಾವಿರಾರು ಕೋಟಿ ರೂ. ವ್ಯಯಿಸಿ ಹು-ಧಾ ಬಿಆರ್​ಟಿಎಸ್ ಬಸ್​ಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಖಾಸಗಿ ಬಸ್​ಗಳ ಸಂಚಾರದಿಂದ ಬಿಆರ್​ಟಿಎಸ್ ಸಂಸ್ಥೆಗೆ ಹಾನಿಯಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. ವಾಕರ ಸಾರಿಗೆ ಸಂಸ್ಥೆ ಹಾಗೂ ಬಿಆರ್​ಟಿಎಸ್ ಅಧಿಕಾರಿಗಳ ಮನವಿಯ ಹಿನ್ನೆಲೆಯಲ್ಲಿ ಸರ್ಕಾರ 2019ರ ಮಾ. 8ರಂದು, ಖಾಸಗಿ ಬಸ್​ಗಳ ಸಂಚಾರಕ್ಕೆ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿಗೆ ಅಧಿಸೂಚನೆಯಲ್ಲಿ ತಿಳಿಸಿತ್ತು. ಈ ಮಧ್ಯೆ ಜೂ. 30ಕ್ಕೆ 32 ಬೇಂದ್ರೆ ಬಸ್​ಗಳ ಸಂಚಾರ ಪರವಾನಗಿ ಮುಗಿದಿದೆ. ಪರವಾನಗಿ ನವೀಕರಿಸುವಂತೆ ಬೇಂದ್ರೆ ಸಂಸ್ಥೆಯವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಪ್ರಾಧಿಕಾರ ಮನವಿಯನ್ನು ತಿರಸ್ಕರಿಸಿತ್ತು. ಖಾಸಗಿ ಬಸ್​ಗಳ ಸಂಚಾರಕ್ಕೆ ಅನುಮತಿ ನೀಡದಂತೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಬೇಂದ್ರೆ ಸಂಸ್ಥೆ, ಇಲ್ಲಿನ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದೆ.

ಜೂ. 27ರಂದು ಹೈಕೋರ್ಟ್ ರಿಟ್ ಅರ್ಜಿಯ ವಿಚಾರಣೆ ನಡೆಸಿತ್ತು. ಈ ವೇಳೆ ಅರ್ಜಿದಾರರು, ಬಸ್​ಗಳ ಸಂಚಾರಕ್ಕೆ ತಾತ್ಕಾಲಿಕ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ಕೋರಿ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್, ಪ್ರಾಧಿಕಾರಕ್ಕೆ ಸೂಚಿಸಿತ್ತು.

‘2014ರಲ್ಲಿ ಪಡೆದಿದ್ದ ರಹದಾರಿ ಅನುಮತಿಯ ಅನ್ವಯ ಜೂ. ಅಂತ್ಯಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜು. 1ರಂದು 9 ಬಸ್​ಗಳನ್ನು ಓಡಿಸಿದ್ದೇವೆ. ಜು. 2ರಂದು ಮತ್ತೆ 3 ಬಸ್​ಗಳ ರಹದಾರಿ ಮುಗಿಯಲಿದ್ದು, ಅಂದು ಕೇವಲ 6 ಬಸ್​ಗಳು ಮಾತ್ರ ಸಂಚರಿಸಲಿವೆ. ನ್ಯಾಯಾಲಯ ನೀಡಿರುವ ನಿರ್ದೇಶನವನ್ನು ಪುರಸ್ಕರಿಸುವಂತೆ ಜು. 2ರಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡುತ್ತೇವೆ. ಬಸ್​ಗಳ ಸಂಚಾರ ನಿಂತಿರುವುದರಿಂದ ಪಾಸ್ ಹೊಂದಿರುವ ನಾಗರಿಕರು, ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಜಿಲ್ಲಾಧಿಕಾರಿಗೆ ತಿಳಿಸಲಾಗುವುದು ಎಂದು ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಸುಧಾಕರ ಶೆಟ್ಟಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.