ಬೇಂದ್ರೆ ಬಸ್ ಸಂಚಾರ ಯಥಾಸ್ಥಿತಿಗೆ ಸೂಚನೆ

ಧಾರವಾಡ: ಹುಬ್ಬಳ್ಳಿ- ಧಾರವಾಡ ಅವಳಿನಗರ ಮಧ್ಯೆ ಸಂಚರಿಸುತ್ತಿದ್ದ ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್​ಗಳ ಓಡಾಟ ಮತ್ತೆ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣ (ಕೆಎಸ್​ಟಿಎಟಿ) ಸೋಮವಾರ, ಯಥಾಸ್ಥಿತಿ ಕಾಪಾಡುವಂತೆ ಆದೇಶ ಹೊರಡಿಸಿರುವುದರಿಂದ ಬೇಂದ್ರೆ ಸಾರಿಗೆ ಸಂಸ್ಥೆಯ ಮಾಲೀಕರಿಗೆ ತಾತ್ಕಾಲಿಕ ನ್ಯಾಯ ಸಿಕ್ಕಂತಾಗಿದೆ.

ಅವಳಿನಗರದ ಮಧ್ಯೆ ಬೇಂದ್ರೆ ಬಸ್​ಗಳ ಸಂಚಾರಕ್ಕೆ ಪರವಾನಗಿ ನವೀಕರಣ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಗೆ ಅರ್ಜಿ ಸಲ್ಲಿಸಿದ್ದರು.

ವಾದ- ಪ್ರತಿವಾದ ಆಲಿಸಿದ್ದ ಜಿಲ್ಲಾಧಿಕಾರಿ ತೀರ್ಪು ಕಾಯ್ದಿರಿಸಿದ್ದರು. 2 ದಿನಗಳ ನಂತರ ತೀರ್ಪು ಪ್ರಕಟಿಸಿ, ತಾತ್ಕಾಲಿಕ ಪರವಾನಗಿ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಬೇಂದ್ರೆ ಸಾರಿಗೆ ಸಂಸ್ಥೆಯ ಎ. ಮಾಧವ ಸೇರಿ 13 ಮಾಲೀಕರು ಜು. 12ರಂದು ಕರ್ನಾಟಕ ರಾಜ್ಯ ಸಾರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗಿದ್ದರು.

ಸೋಮವಾರ ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಧಿಕರಣ, ಜು. 31ರವರೆಗೆ ಬಸ್ ಸಂಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.

ಇದರ ಅನ್ವಯ ಸಂಸ್ಥೆಯ 10 ಬಸ್​ಗಳು ಸೋಮವಾರ ಸಂಜೆಯಿಂದಲೇ ರಸ್ತೆಗಿಳಿದಿವೆ. ಪರವಾನಗಿ ಹೊಂದಿರುವ 41 ಬಸ್​ಗಳು ಮಂಗಳವಾರ ಬೆಳಗ್ಗೆಯಿಂದ ಓಡಲಿವೆ. ನ್ಯಾಯಾಧಿಕರಣ ತೀರ್ಪಿನಿಂದ ತಾತ್ಕಾಲಿಕ ಪರಿಹಾರ ದೊರೆತಿದೆ. ಚಾಲಕ- ನಿರ್ವಾಹಕ ಹಾಗೂ ಸಿಬ್ಬಂದಿಯ ಸಮಸ್ಯೆಗಳನ್ನು ನ್ಯಾಯಾಧಿಕರಣ ಗಣನೆಗೆ ತೆಗೆದುಕೊಂಡಿದೆ ಎಂದು ಬೇಂದ್ರೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಧಾಕರ ಶೆಟ್ಟಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

* ಹೈಕೋರ್ಟ್​ನಲ್ಲಿ ಬಾಕಿ ಇದೆ: ಅವಳಿನಗರದ ಮಧ್ಯೆ ಬೇಂದ್ರೆ ಸಾರಿಗೆ ಸೇರಿ ಇತರೆ ಖಾಸಗಿ ವಾಹನಗಳ ಸಂಚಾರಕ್ಕೆ ಪರವಾನಗಿ ನೀಡದಂತೆ ಈ ಹಿಂದೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಅಧಿಸೂಚನೆ ಮತ್ತು ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಬೇಂದ್ರೆ ಸಂಸ್ಥೆಯ ಮಾಲೀಕರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಾಜ್ಯದ ವಿಚಾರಣೆ ಹೈಕೋರ್ಟ್​ನಲ್ಲಿ ಬಾಕಿ ಇದೆ.

ಜೂ. 26ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರು ತಾತ್ಕಾಲಿಕ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿತ್ತು.

ಬೇಂದ್ರೆ ನಗರ ಸಾರಿಗೆ ವಾಹನಗಳ ತಾತ್ಕಾಲಿಕ ರಹದಾರಿ ನವೀಕರಣಕ್ಕೆ ಸಂಬಂಧಿಸಿ ಜು. 8ರಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತುರ್ತು ಸಭೆ ಜರುಗಿಸಿದ್ದರು. ಮಾನವೀಯತೆಯ ಆಧಾರದ ಮೇಲೆ ಸಂಸ್ಥೆಯ ವಾಹನಗಳಿಗೆ ತಾತ್ಕಾಲಿಕ ನವೀಕರಣ ಮಾಡಬೇಕು ಎಂದು ಬೇಂದ್ರೆ ನಗರ ಸಾರಿಗೆ ಸಂಸ್ಥಯ ವಾಹನಗಳ ಪರವಾಗಿ ನ್ಯಾಯವಾದಿ ನಾಗೇಶ ಮನವಿ ಮಾಡಿದ್ದರು.

ಸಾರಿಗೆ ಸಂಸ್ಥೆಯ 50 ಸಾಮಾನ್ಯ ವಾಹನಗಳು ಹಾಗೂ ಬಿಆರ್​ಟಿಎಸ್​ನ 98 ವಾಹನಗಳು ಪ್ರಯಾಣಿಕರಿಗೆ ಸಮರ್ಪಕ ಸೇವೆ ಒದಗಿಸುತ್ತಿವೆ. ಖಾಸಗಿ ವಾಹನಗಳಿಗೆ ರಹದಾರಿ ನೀಡಬಾರದು ಎಂದು ಸಾರಿಗೆ ಸಂಸ್ಥೆಯ ಪರವಾಗಿ ನಾರಾಯಣಪ್ಪ ಕೋರಿದ್ದರು.

ಬೇಂದ್ರೆ ನಗರ ಸಾರಿಗೆ ಸಂಸ್ಥೆಯ ಬಸ್​ಗಳ ಪರವಾನಗಿ ನವೀಕರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ 2 ಬಾರಿ ತಿರಸ್ಕರಿಸಲಾಗಿತ್ತು. ಸಂಸ್ಥೆಯವರು ನ್ಯಾಯಾಧಿಕರಣದ ಮೊರೆ ಹೋಗಿದ್ದು, ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಖಾಸಗಿ ಬಸ್​ಗಳ ಸಂಚಾರ ಸ್ಥಗಿತಕ್ಕೆ ಪ್ರಾಧಿಕಾರದಿಂದ ಕಾನೂನು ಹೋರಾಟ ಮುಂದುವರಿಸಲಾಗುವುದು.
> ದೀಪಾ ಚೋಳನ್, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಮತ್ತು ಜಿಲ್ಲಾಧಿಕಾರಿ

Leave a Reply

Your email address will not be published. Required fields are marked *