More

  ಬೆಳೆ ಹಾನಿ ಪರಿಹಾರಕ್ಕೆ ರೈತ ಸಂಘ ಆಗ್ರಹ 

  ದಾವಣಗೆರೆ: ಅಕಾಲಿಕ ಮಳೆಯಿಂದಾಗಿ ಭತ್ತ, ತೋಟಗಾರಿಕೆ ಬೆಳೆಗಳು ಹಾಗೂ ಮನೆಗಳು ಹಾಳಾಗಿದ್ದು, ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹಿಸಿದರು.
  ಅಕಾಲಿಕ ಮಳೆಯಿಂದ ತಾಲೂಕಿನ ಕಸಬಾ ಹೋಬಳಿ, ಹರಿಹರ, ಮಲೇಬೆನ್ನೂರು, ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಹೋಬಳಿಗಳಲ್ಲಿ 700 ಹೆಕ್ಟೇರ್‌ನಷ್ಟು ಭತ್ತ ಚಾಪೆ ಹಾಸಿದೆ. ಒಂದು ಎಕರೆಗೆ 30 ಸಾವಿರ ರೂ. ಖರ್ಚು ಸೇರಿ ರೈತರಿಗೆ ಒಟ್ಟು 105 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಕೂಡಲೇ ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
  ಜಗಳೂರು ತಾಲೂಕಿನಲ್ಲಿ 31.2 ಹೆಕ್ಟೇರ್, ದಾವಣಗೆರೆ- 45, ಚನ್ನಗಿರಿ-37 ಹೆ. ಸೇರಿದಂತೆ 42 ಜನ ರೈತರ ತೋಟದಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳಾದ ಬಾಳೆ, ಎಲೆಬಳ್ಳಿ, ಮಾವಿನ ತೋಟಗಳು ಹಾಳಾಗಿವೆ. ಕೂಡಲೇ ಈ ರೈತರಿಗೆ ಒಂದು ಎಕರೆಗೆ 75 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಮನೆಗಳಿಗೆ ಹಾನಿಯಾಗಿದ್ದು, ಅವರಿಗೆ ಪರಿಹಾರ ನೀಡುವ ಬದಲು 20-20 ಅಳತೆಯ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
  ರಸ್ತೆಯಲ್ಲಿ ಮರಗಳು ಬೀಳುತ್ತಿದ್ದು, ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು. ಹೆಚ್ಚು ಮಳೆಯಾಗುವ ಮುನ್ನ ಕೆರೆಗಳ ಹೂಳೆತ್ತಬೇಕು. ಕೆರೆಗಳ ಹೂಳೆತ್ತದಿದ್ದರೆ ನೀರು ಸಂಗ್ರಹವಾಗಲು ಸಾಧ್ಯವಿಲ್ಲ. ರೈತರಿಗೆ ಬೆಂಬಲ ಬೆಲೆಯನ್ನು ಖಾತ್ರಿ ಮಾಡಬೇಕು. ಜನರಿಗೆ ಗುಣಮಟ್ಟದ ಔಷಧ ಹಾಗೂ ಪರಿಕರ ವಿತರಿಸಬೇಕು ಎಂದು ಇದೇ ವೇಳೆ ಮನವಿ ಮಾಡಿದರು.
  ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಪ್ರಸಾದ್, ಮುಖಂಡರಾದ ಮಾಯಕೊಂಡದ ಅಶೋಕ್, ಐಗೂರು ಶಿವಮೂರ್ತಪ್ಪ, ಹಾಲೇಶ್, ದಶರಥ, ಪ್ರತಾಪ್ ಸುದ್ದಿಗೋಷ್ಠಿಯಲ್ಲಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts